ಒಡಿಶಾ: 275 ಜನರನ್ನು ಬಲಿತೆಗೆದುಕೊಂಡ ಭೀಕರ ಬಾಲಸೋರ್ ರೈಲು ಅಪಘಾತ ಸಂಭವಿಸಿದ ವಿಭಾಗದಲ್ಲಿ ರೈಲು ಸಂಚಾರ ಪುನರಾರಂಭವಾಗಿದೆ. ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಭಾನುವಾರ ಪ್ರಯಾಣಿಕರು ಮತ್ತು ಸಿಬ್ಬಂದಿಯತ್ತ ಕೈಬೀಸಿದರು ಮತ್ತು ಅವರ ಸುರಕ್ಷಿತ ಪ್ರಯಾಣಕ್ಕಾಗಿ ಪ್ರಾರ್ಥಿಸಿದರು.
ಬಾಲಾಸೋರ್ನಲ್ಲಿ ನಡೆದ ಭೀಕರ ತ್ರಿವಳಿ ರೈಲು ಅಪಘಾತ ಸಂಭವಿಸಿದ 51 ಗಂಟೆಗಳ ಅವಧಿಯಲ್ಲಿ ಮೇಲಿನ ಮತ್ತು ಕೆಳಗಿನ ಎರಡೂ ರೈಲು ಹಳಿಗಳ ದುರಸ್ತಿ ಸಂಪೂರ್ಣವಾಗಿದ್ದು ಸೇವೆಗಳು ಪುನರಾರಂಭಗೊಂಡಿವೆ. ದುರ್ಘಟನೆಯಲ್ಲಿ275 ಜನ ಸಾವನ್ನಪ್ಪಿದ್ದು 1,000ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಭಾನುವಾರ ಎಎನ್ಐ ಜೊತೆ ಮಾತನಾಡಿದ ರೈಲ್ವೆ ಸಚಿವರು, ಪ್ರಧಾನಿ ನರೇಂದ್ರ ಮೋದಿ ಅವರು ಸೂಚನೆಗಳನ್ನು ಕಳುಹಿಸಿದ ಕೂಡಲೇ ಹಾನಿಗೊಳಗಾದ ಹಳಿಗಳ ಮರುನಿರ್ಮಾಣದ ಕೆಲಸ ಪ್ರಾರಂಭವಾಯಿತು ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ರೈಲ್ವೆ ಹಳಿಗಳ ಮರುಸ್ಥಾಪನೆಗೆ ತಮ್ಮ ಸಲಹೆ ಮತ್ತು ಸೂಚನೆಗಳನ್ನು ನೀಡಿದರು. ಪುನಶ್ಚೇತನ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಇಡೀ ತಂಡವು ಸೇವೆಗಳ ಪುನರಾರಂಭಕ್ಕಾಗಿ ಹಾನಿಗೊಳಗಾದ ಹಳಿಗಳನ್ನು ಸರಿಪಡಿಸಲು ಶ್ರದ್ಧೆಯಿಂದ ಮತ್ತು ವ್ಯವಸ್ಥಿತವಾಗಿ ಶ್ರಮಿಸಿತು ಎಂದು ಅವರು ಹೇಳಿದರು.
ಸೇವೆಗಳು ಪುನರಾರಂಭಗೊಳ್ಳುವ ಮೊದಲು ಎರಡೂ ಮಾರ್ಗಗಳನ್ನು ಮರುರಚಿಸಲಾಯಿತು ಮತ್ತು ಪರೀಕ್ಷಿಸಲಾಯಿತು ಎಂದು ರೈಲ್ವೆ ಸಚಿವರು ಹೇಳಿದರು.
ಅಪಘಾತ ಸಂಭವಿಸಿದ ಕ್ಷಣದಿಂದ ಸ್ಥಳದಲ್ಲೇ ಬೀಡು ಬಿಟ್ಟಿರುವ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಪರಿಹಾರ ಕಾರ್ಯ ಮತ್ತು ದುರಸ್ತಿ ಕಾಮಗಾರಿಗಳ ಮೇಲ್ವಿಚಾರಣೆಯನ್ನು ಖುದ್ದಾಗಿ ಮುಂದೆ ನಿಂತು ಮಾಡಿಸುತ್ತಿದ್ದಾರೆ.