ಹಿರಿಯಡ್ಕ: ಪೆಲತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ಮೇ.24 ರಂದು ನಡೆದ ಧಾರ್ಮಿಕ ಸಭೆಯನ್ನು ಅದಮಾರು ಮಠದ ಹಿರಿಯ ಯತಿ ಶ್ರೀ ವಿಶ್ವಪ್ರಿಯತೀರ್ಥ ಸ್ವಾಮೀಜಿ ಉದ್ಘಾಟಿಸಿ ಮಾತನಾಡಿದರು.
ನಮ್ಮ ಕರೆಯುವಿಕೆಗೆ ಭಗವಂತನು ಸಮೀಪಿಸುತ್ತಾನೆ. ಕಂಠದಿಂದ ಬರುವ ಕೂಗಿಗಿಂತ ಹೃದಯದಿಂದ ಬರುವ ಕೂಗಿಗೆ ಭಗವಂತ ಒಲಿಯುತ್ತಾನೆ. ಪ್ರತಿಯೊಬ್ಬರೂ ದೇವರನ್ನು ಧ್ಯಾನದಿಂದ ಸ್ತುತಿಸಿದಾಗ ಭಗವಂತನ ಅನುಗ್ರಹ ಪ್ರಾಪ್ತಿಯಾಗುತ್ತದೆ. ಸುವ್ಯವಸ್ಥೆಯಲ್ಲಿ ಸಮಾಜ ಮುನ್ನಡೆಯಲು ಭಗವಂತನ ಅನುಗ್ರಹ ಅತ್ಯಗತ್ಯ. ಕಾಲಕಾಲಕ್ಕೆ ಮಳೆ ಬೆಳೆ ನೀಡುವ ಮೂಲಕ ಪ್ರತಿಯೊಬ್ಬರಿಗೂ ಬದುಕಲು ಅವಕಾಶವನ್ನು ಕಲ್ಪಿಸಿಕೊಟ್ಟಿದ್ದಾನೆ. ಎಲ್ಲರೂ ಸದ್ಭಕ್ತಿಯಿಂದ ಒಂದಾಗಿ ದೇವರನ್ನು ಭಜಿಸುವ ಕಾರ್ಯವನ್ನು ನಿರಂತರ ನಡೆಸಿದಾಗ, ಇಷ್ಟಾರ್ಥಗಳು ಸಿದ್ಧಿಯಾಗುತ್ತದೆ ಎಂದು ಉಡುಪಿ ಅದಮಾರು ಮಠದ ಶ್ರೀ ವಿಶ್ವಪ್ರಿಯತೀರ್ಥ ಸ್ವಾಮೀಜಿ ಹೇಳಿದ್ದಾರೆ.
ವಿಧಾನ ಪರಿಷತ್ ಸದಸ್ಯ, ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶ್ಯಾಮಲಾ ಕುಂದರ್, ಮುಂಬಯಿ ಹೈಕೋರ್ಟ್ ವಕೀಲರಾದ ಬಿ.ಎನ್.ಪುಜಾರಿ, ನೀರೆ ಗ್ರಾಪಂ ಅಧ್ಯಕ್ಷೆ ಶಾಲಿನಿ, ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ವಿಕ್ರಂ ಹೆಗ್ಡೆ ಉದಯ ಶೆಟ್ಟಿ ಪೆಲತ್ತೂರು, ಅಧ್ಯಕ್ಷ ಸತೀಶ್ ಪೂಜಾರಿ ಪೆಲತ್ತೂರು, ದೇವಳದ ತಂತ್ರಿಗಳಾದ ವೇದಮೂರ್ತಿ ಬಿ.ಗುರುರಾಜ ತಂತ್ರಿ, ಆಡಳಿತ ಮೊಕ್ತೇಸರ ರಮೇಶ್ ನಾಯಕ್, ಪ್ರಧಾನ ಕಾರ್ಯದರ್ಶಿ ಮನೋಹರ ನಾಯಕ್, ಪ್ರಧಾನ ಕೋಶಾಧಿಕಾರಿ ವಿಶ್ವನಾಥ ನಾಯಕ್, ಕೋಶಾಧಿಕಾರಿ ಚಂದ್ರಶೇಖರ ನಾಯಕ್ ಕಾರ್ಯದರ್ಶಿ ರಾಜೇಂದ್ರ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭ ಬ್ರಹ್ಮಕಲಶೋತ್ಸವಕ್ಕೆ ಸಹಕರಿಸಿದವರನ್ನು ಸಮ್ಮಾನಿಸಲಾಯಿತು. ಪ್ರಶಾಂತ್ ಶೆಟ್ಟಿ ಮತ್ತು ಪ್ರಕಾಶ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.