ರಾಹುಲ್ ಗಾಂಧಿಯ ಹೊಸ ಪಾಸ್ ಪೋರ್ಟ್ ಮನವಿಗೆ ವಿರೋಧ ವ್ಯಕ್ತಪಡಿಸಿದ ಸುಬ್ರಮಣ್ಯನ್ ಸ್ವಾಮಿ

ನವದೆಹಲಿ: ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ ಸುಬ್ರಮಣ್ಯನ್ ಸ್ವಾಮಿ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಹೊಸ ಪಾಸ್‌ಪೋರ್ಟ್ ನೀಡುವಂತೆ ದೆಹಲಿ ನ್ಯಾಯಾಲಯದ ಮುಂದೆ ಸಲ್ಲಿಸಿರುವ ಮನವಿಯನ್ನು ವಿರೋಧಿಸಿದ್ದಾರೆ.

ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ವೈಭವ್ ಮೆಹ್ತಾ ಅವರ ಮುಂದೆ ಹಾಜರಾದ ಗಾಂಧಿ ಪರ ವಕೀಲ ತರನ್ನುಮ್ ಚೀಮಾ ಅವರು ಗಾಂಧಿಗೆ ನಿರಾಕ್ಷೇಪಣಾ ಪ್ರಮಾಣಪತ್ರವನ್ನು ನೀಡಬಹುದು ಎಂದು ಹೇಳಿದರು.

ರಾಹುಲ್ ಗಾಂಧಿಗೆ ಜಾಮೀನು ನೀಡುವ ಆದೇಶದಲ್ಲಿ ಯಾವುದೇ ನಿರ್ಬಂಧಗಳನ್ನು ಹಾಕಲಾಗಿಲ್ಲ ಎಂದು ಕೋರ್ಟ್ ಗಮನಿಸಿದೆ. ಆದಾಗ್ಯೂ, ಗಾಂಧಿಯವರ ಮನವಿಗೆ ಉತ್ತರವನ್ನು ಸಲ್ಲಿಸುವ ಹಕ್ಕು ಸ್ವಾಮಿ ಅವರಿಗೆ ಇದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಹೀಗಾಗಿ ಪ್ರಕರಣದ ಮುಂದಿನ ವಿಚಾರಣೆಯನ್ನು ಮೇ 26ಕ್ಕೆ ಪಟ್ಟಿ ಮಾಡಲಾಗಿದೆ.

ಸ್ವಾಮಿ ಅವರ ಪ್ರಕಾರ, ಗಾಂಧಿಗೆ ವಿದೇಶ ಪ್ರವಾಸಕ್ಕೆ ಅನುಮತಿ ನೀಡಿದರೆ, ಕಾಂಗ್ರೆಸ್ ಪಕ್ಷವು ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್‌ಗೆ (ಎಜೆಎಲ್) ಮುಂಗಡವಾಗಿ ನೀಡಿದ್ದ 90 ಕೋಟಿ ರೂ ಸಾಲದ ನಿಯೋಜನೆಗೆ ಸಂಬಂಧಿಸಿದ ನ್ಯಾಷನಲ್ ಹೆರಾಲ್ಡ್ ಪ್ರಕರಣದ ತನಿಖೆಗೆ ಅಡ್ಡಿಯಾಗಬಹುದು. ಗಾಂಧಿ ಪರಿವಾರ ಯಂಗ್ ಇಂಡಿಯನ್ ಪ್ರೈವೇಟ್ ಎಂಬ ಕಂಪನಿಯನ್ನು ಪ್ರಾರಂಭಿಸಿ ಕೇವಲ 50 ಲಕ್ಷ ರೂ ಎಐಸಿಸಿಗೆ ಪಾವತಿಸುವ ಮೂಲಕ ಎಐಸಿಸಿಯಿಂದ 90 ಕೋಟಿಯ ಬಾಕಿ ಸಾಲವನ್ನು (ಎಜೆಎಲ್‌ನಿಂದ ಕಾಂಗ್ರೆಸ್‌ಗೆ ಪಾವತಿಸಬಹುದಾದ ಸಾಲದ ಮೊತ್ತ) ಖರೀದಿಸಿದೆ. ಎಜೆಎಲ್‌ ಬಳಿಯಿರುವ ಅಪಾರ ಪ್ರಮಾಣದ ಆಸ್ತಿಗಾಗಿ ಈ ರೀತಿ ಹಗರಣ ಮಾಡಲಾಗಿದೆ ಎನ್ನುವ ಆರೋಪವಿದೆ.

ಸುಬ್ರಮಣಿಯನ್ ಸ್ವಾಮಿ ಅವರು ತಮ್ಮ ಖಾಸಗಿ ದೂರಿನಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮೋತಿಲಾಲ್ ವೋರಾ, ಆಸ್ಕರ್ ಫರ್ನಾಂಡಿಸ್, ಸುಮನ್ ದುಬೆ, ಸ್ಯಾಮ್ ಪಿತ್ರೋಡಾ ಮತ್ತು ಗಾಂಧಿ ಕುಟುಂಬ ನಿಯಂತ್ರಿತ ಯಂಗ್ ಇಂಡಿಯನ್ ವಿರುದ್ಧ ವಂಚನೆ, ಕ್ರಿಮಿನಲ್ ಪಿತೂರಿ, ಕ್ರಿಮಿನಲ್ ನಂಬಿಕೆ ಉಲ್ಲಂಘನೆ ಮತ್ತು ಆಸ್ತಿ ದುರುಪಯೋಗದ ಆರೋಪ ಮಾಡಿದ್ದಾರೆ.

ಸಂಸತ್ ಸದಸ್ಯ (ಎಂಪಿ) ಸ್ಥಾನದಿಂದ ಅನರ್ಹಗೊಂಡ ಕಾರಣ ರಾಹುಲ್ ಗಾಂಧಿ ಅವರು ತಮ್ಮ ರಾಜತಾಂತ್ರಿಕ ಪಾಸ್‌ಪೋರ್ಟ್ ಅನ್ನು ಸಲ್ಲಿಸಿದ ನಂತರ ನ್ಯಾಯಾಲಯದ ಮೊರೆ ಹೋಗಿದ್ದರು. ಇದೀಗ ಹೊಸ ಪಾಸ್ ಪೋರ್ಟ್ ನೀಡುವಂತೆ ದೆಹಲಿ ನ್ಯಾಯಾಲಯದ ಮುಂದೆ ಮನವಿ ಸಲ್ಲಿಸಿದ್ದಾರೆ.

2019 ರಲ್ಲಿ ಕರ್ನಾಟಕದ ಕೋಲಾರದಲ್ಲಿ ನಡೆದ ಚುನಾವಣಾ ಸಭೆಯಲ್ಲಿ ಅವರ “ಎಲ್ಲಾ ಕಳ್ಳರಿಗೂ ಮೋದಿ ಉಪನಾಮವಿದೆ” ಎಂಬ ಹೇಳಿಕೆಗಾಗಿ ಮಾರ್ಚ್ 23 ರಂದು ಕ್ರಿಮಿನಲ್ ಮಾನನಷ್ಟಕ್ಕಾಗಿ ಶಿಕ್ಷೆಗೊಳಗಾದ ನಂತರ ಸಂಸದ ಸ್ಥಾನದಿಂದ ಅನರ್ಹಗೊಂಡಿದ್ದಾರೆ.