ನವದೆಹಲಿ: ಬುಧವಾರದಂದು ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಮುಂಬರುವ ಹೊಸ ಸಂಸತ್ ಭವನದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆ ಸ್ಪೀಕರ್ ಸ್ಥಾನದ ಪಕ್ಕದಲ್ಲಿ ತಮಿಳುನಾಡಿನ ಐತಿಹಾಸಿಕ ರಾಜದಂಡವನ್ನು ಸ್ಥಾಪಿಸಲಿದ್ದಾರೆ ಎಂದು ಹೇಳಿದರು.
“ಸೆಮ್ಮೈ” ಎಂಬ ತಮಿಳು ಪದದಿಂದ ಹುಟ್ಟಿಕೊಂಡಿರುವ ಸೆಂಗೋಲ್ ಪದದ ಅರ್ಥ “ಸದಾಚಾರ” ಎಂದಾಗಿದೆ. ಈ ರಾಜದಂಡವು ಸ್ವಾತಂತ್ರ್ಯದ ” ಐತಿಹಾಸಿಕ ಮಹತ್ವದ” ಸಂಕೇತವಾಗಿದೆ ಏಕೆಂದರೆ ಇದು ಬ್ರಿಟಿಷರಿಂದ ಭಾರತೀಯರಿಗೆ ಅಧಿಕಾರದ ವರ್ಗಾವಣೆಯನ್ನು ಸೂಚಿಸುತ್ತದೆ ಎಂದು ಶಾ ಮಾಧ್ಯಮಗಳಿಗೆ ತಿಳಿಸಿದರು.
ಸೆಂಗೋಲ್ ಧರ್ಮ ಮತ್ತು ನ್ಯಾಯದ ಸಂಕೇತವಾಗಿದೆ. ಇದು ಬಹಳ ಹಿಂದಿನಿಂದಲೂ ಚೋಳ ರಾಜರ ಪಟ್ಟಾಭಿಷೇಕ ಸಮಾರಂಭದ ಭಾಗವಾಗಿತ್ತು. ಸೆಂಗೋಲಿನ ಮೇಲೆ ನಂದಿ ಅಥವಾ ಹಸುವಿನ ಪ್ರತಿಮೆ ಇರುತ್ತದೆ.
ಪಂಡಿತ್ ಜವಾಹರ್ ಲಾಲ್ ನೆಹರು ಅವರು ಆಗಸ್ಟ್ 14, 1947 ರ ರಾತ್ರಿ 10:45 ರ ಸುಮಾರಿಗೆ ತಮಿಳುನಾಡಿನ ಅಥೀನಂ ಮೂಲಕ ಸೆಂಗೋಲ್ ಅನ್ನು ಸ್ವೀಕರಿಸಿದರು, ಇದು ಬ್ರಿಟಿಷರಿಂದ ನಮ್ಮ ದೇಶದ ಜನರಿಗೆ ಅಧಿಕಾರದ ಬದಲಾವಣೆಯ ಸಂಕೇತವಾಗಿದೆ.
ಸಿ. ರಾಜಗೋಪಾಲಾಚಾರಿ ಅವರ ಮುತುವರ್ಜಿಯ ಮೇರೆಗೆ ತಮಿಳುನಾಡಿನ ತಂಜೂರು ಜಿಲ್ಲೆಯ ಪ್ರಸಿದ್ಧ ಮಠವಾದ ತಿರುವಾಡುತುರೈ ಅಥೀನಂ, ಸೆಂಗೋಲ್ ತಯಾರಿಕೆಯನ್ನು ಚೆನ್ನೈ ಮೂಲದ “ವುಮ್ಮಿಡಿ ಬಂಗಾರು ಚೆಟ್ಟಿ” ಆಭರಣಗಳಿಗೆ ನಿಯೋಜಿಸಿದರು.
ವುಮ್ಮಿಡಿ ಎತ್ತಿರಾಜುಲು ಮತ್ತು ವುಮ್ಮಿಡಿ ಸುಧಾಕರ್ ಎಂಬ ಇಬ್ಬರು ವ್ಯಕ್ತಿಗಳಿಂದ ನಿರ್ಮಿಸಲ್ಪಟ್ಟಿರುವ ಈ ರಾಜದಂಡವು ಐದು ಅಡಿ ಉದ್ದವಿದೆ ಮತ್ತು ನ್ಯಾಯವನ್ನು ಸಂಕೇತಿಸುವ ‘ನಂದಿ’ ಯನ್ನು ಹೊಂದಿದೆ.
ಅಧಿಕೃತ ದಾಖಲೆಯ ಪ್ರಕಾರ, “ಅಥೀನಂನ ಉಪ ಪ್ರಧಾನ ಅರ್ಚಕ, ನಾದಸ್ವರಂ ವಾದಕ ರಾಜರತ್ನಂ ಪಿಳ್ಳೈ ಮತ್ತು ಓದುವರ್ (ಗಾಯಕ)” ಸೇರಿದಂತೆ ಮೂರು ಜನರು ಹೊಸದಾಗಿ ತಯಾರಿಸಿದ ಸೆಂಗೋಲ್ ಅನ್ನು ತಮಿಳುನಾಡಿನಿಂದ ತಂದರು. ಆಗಸ್ಟ್ 14, 1947 ರಂದು ನಡೆದ ಸಮಾರಂಭದಲ್ಲಿ, ಅರ್ಚಕರು ರಾಜದಂಡವನ್ನು ಲಾರ್ಡ್ ಮೌಂಟ್ ಬ್ಯಾಟನ್ ಅವರಿಗೆ ನೀಡಿದರು ಮತ್ತು ನಂತರ ಅದನ್ನು ಹಿಂದಕ್ಕೆ ತೆಗೆದುಕೊಂಡರು. ನಂತರ ಅದನ್ನು ಪಂಡಿತ್ ಜವಾಹರಲಾಲ್ ನೆಹರು ಅವರ ಮನೆಗೆ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು, ಅಲ್ಲಿ ಅದನ್ನು ಅವರಿಗೆ ಹಸ್ತಾಂತರಿಸಲಾಯಿತು. ಪ್ರಧಾನ ಅರ್ಚಕರು ಸೂಚಿಸಿದಂತೆ ವಿಶೇಷ ಹಾಡನ್ನು ಪ್ರದರ್ಶಿಸಲಾಯಿತು.
ಕೇವಲ 16 ವರ್ಷ ಬದುಕಿದ್ದ ಬಾಲ ಪ್ರತಿಭೆ 7 ನೇ ಶತಮಾನದ ತಮಿಳು ಸಂತ ತಿರುಜ್ಞಾನ ಸಂಬಂದರ್ ಅವರು ಸಂಯೋಜಿಸಿದ್ದ ಹಾಡನ್ನು ಸಮಾರಂಭದಲ್ಲಿ ಹಾಡಲಾಯಿತು. ಈ ಕಾರ್ಯಕ್ರಮದಲ್ಲಿ ಭಾರತದ ಮೊದಲ ರಾಷ್ಟ್ರಪತಿಯಾಗಲಿದ್ದ ಡಾ ರಾಜೇಂದ್ರ ಪ್ರಸಾದ್ ಮತ್ತು ಅನೇಕರು ಭಾಗವಹಿಸಿದ್ದರು ಎಂದು ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ.