ಪುತ್ತೂರು: ಬಿಜೆಪಿಯಿಂದ ಬಂಡಾಯ ಎದ್ದು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳ ಬೆವರಿಳಿಸಿದ್ದ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ನೇತೃತ್ವದಲ್ಲಿ ಹೊಸ ಸಂಘಟನೆಯೊಂದು ಅಸ್ತಿತ್ವಕ್ಕೆ ಬಂದಿದೆ. ‘ಪುತ್ತಿಲ ಪರಿವಾರ’ ಹೆಸರಿನ ಈ ಸಂಘಟನೆಯನ್ನು ಇಂದು ಲೋಕಾರ್ಪಣೆಗೊಳಿಸಿಲಾಗಿದೆ. ಪುತ್ತೂರಿನಲ್ಲಿ ನಡೆದ ಪುತ್ತಿಲ ಬೆಂಬಲಿಗರ “ನಮ್ಮ ನಡಿಗೆ ಮಹಾಲಿಂಗೇಶ್ವರನ ಕಡೆಗೆ” ಪಾದಯಾತ್ರೆ ಬಳಿಕ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ಗದ್ದೆಯಲ್ಲಿ ಬೃಹತ್ ಕಾರ್ಯಕರ್ತರ ಸಭೆಯಲ್ಲಿ ಸಂಘಟನೆಯನ್ನು ಲೋಕಾರ್ಪಣೆಗೊಳಿಸಲಾಯಿತು.
ರಾಷ್ಟ್ರೀಯ ಸ್ವಯಂಸೇವಕ ಸಂಘದಂತೆ ಈ ಹೊಸ ಸಂಘಟನೆ ಕಾರ್ಯ ನಿರ್ವಹಿಸಲಿದ್ದು, ಆರ್.ಎಸ್.ಎಸ್ ನ ಗುರು ಗೋವಳ್ಕರ್ ಆಶಯದಂತೆ ಪುತ್ತಿಲ ಪರಿವಾರ ಸಂಘ ಕಾರ್ಯ ನಿರ್ವಹಿಸಲಿದೆ ಎಂದು ಸಭೆಯಲ್ಲಿ ಪರಿವಾರದ ಮುಖಂಡ ಶ್ರೀಕೃಷ್ಣ ಉಪಾಧ್ಯಾಯ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಅರುಣ್ ಪುತ್ತಿಲ ಮತ್ತೊಮ್ಮೆ ತಮ್ಮ ಸಂಘಟನಾ ಚಾತುರ್ಯ ತೋರಿಸಿದ್ದು, ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು.
ಏತನ್ಮಧ್ಯೆ, ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿಂದೂ ಕಾರ್ಯಕರ್ತರನ್ನು ಶಿವಮೊಗ್ಗದ ಹರ್ಷ ಅವರ ಸಹೋದರಿ ಅಶ್ವಿನಿ ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ. ಬಳಿಕ ಮಾಧ್ಯಮದ ಜೊತೆ ಮಾತನಾಡಿ, ಕಾರ್ಯಕರ್ತರ ಸ್ಥಿತಿಯನ್ನ ನೋಡಿ ತುಂಬಾ ಬೇಸರಗೊಂಡಿದ್ದೇನೆ, ಇವತ್ತು ಅರುಣ್ ಪುತ್ತಿಲ ಇಲ್ಲದಿರುತ್ತಿದ್ದರೆ ಕಾರ್ಯಕರ್ತರನ್ನು ಜೀವಂತ ನೋಡುತ್ತಿರಲಿಲ್ಲ. ಕಾರ್ಯಕರ್ತರು ಹಿಂದೂ ಸಮಾಜ ಗಟ್ಟಗೊಳಿಸಲು ಹೋರಾಡುತ್ತಿದ್ದಾರೆ. ಹಿಂದೂ ಕಾರ್ಯಕರ್ತರು ಸಮಾಜಕ್ಕೆ ದ್ರೋಹ ಮಾಡುತ್ತಿಲ್ಲ. ಹಿಂದೂ ಕಾರ್ಯಕರ್ತರು ಯಾವತ್ತೂ ಕುಗ್ಗುವುದಿಲ್ಲ, ಈ ರೀತಿ ದೌರ್ಜನ್ಯ ಮಾಡುತ್ತಿದ್ದಲ್ಲಿ ಹಿಂದೂ ಕಾರ್ಯಕರ್ತರು ಇನ್ನಷ್ಟು ಬೆಳೆಯುತ್ತಾರೆ. ಅರುಣ್ ಕುಮಾರ್ ಪುತ್ತಿಲ ಇರುವವರೆಗೂ ಯಾವ ಕಾರ್ಯಕರ್ತನಿಗೂ ತೊಂದರೆ ಆಗುವುದಿಲ್ಲ ಎಂದು ಅವರು ಹೇಳಿದರು.