ಕಾಂಗ್ರೆಸ್ ಗ್ಯಾರಂಟಿಗೆ ಷರತ್ತುಗಳು ಅನ್ವಯ: ಕೊಟ್ಟ ಭರವಸೆ ಈಡೇರಿಸಿ ಎಂದ ವಿರೋಧ ಪಕ್ಷದ ನಾಯಕರು

ಬೆಂಗಳೂರು: ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಗಳಿಗೆ ಷರತ್ತುಗಳು ಅನ್ವಯವಾಗಿದ್ದು, ಈ ಬಗ್ಗೆ ವಿರೋಧ ಪಕ್ಷ, ಬಿಜೆಪಿಯ ನಾಯಕರು ಸರಕಾರದ ವಿರುದ್ದ ಮುಗಿಬಿದ್ದಿದ್ದಾರೆ. ಯಾರೂ ವಿದ್ಯುತ್ ಬಿಲ್ ಕಟ್ಟಬೇಡಿ. ವಿದ್ಯುತ್ ಬಿಲ್ ಬಂದ್ರೆ ಮುಖ್ಯಮಂತ್ರಿಗಳಿಗೆ ಕಳುಹಿಸಿ ಕೊಡಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಕರೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದೇ ದಿನಕ್ಕೆ ಕಾಂಗ್ರೆಸ್‌ನವರು ಬಣ್ಣ ಬದಲಾಯಿಸಿದ್ದಾರೆ. ಇನ್ನು ದಿನ ಕಳೆದಂತೆ ಇನ್ಯಾವ ಬಣ್ಣ ಬದಲಾಯಿಸ್ತಾರೋ ನೋಡಬೇಕು. ಮೊದಲು ಎಲ್ಲ ಪದವೀಧರ ನಿರುದ್ಯೋಗಿಗಳಿಗೂ 3 ಸಾವಿರ ರೂ. ಕೊಡ್ತೀವಿ ಅಂದವರು ಈಗ 2022-23ರ ಸಾಲಿನ ಪದವೀಧರರಿಗೆ ಮಾತ್ರ ಎನ್ನುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಎಲ್ಲಾ ಮಹಿಳೆಯರಿಗೆ ಉಚಿತ ಬಸ್‌ಪಾಸ್ ಕೊಡಲೇಬೇಕು. ಎಲ್ಲಾ ಗೃಹಿಣಿಯರಿಗೆ 2 ಸಾವಿರ ರೂ. ಕೊಡಲೇಬೇಕು. ಎಲ್ಲರಿಗೂ ಉಚಿತ ವಿದ್ಯುತ್ ಕೊಡಲೇಬೇಕು ಎಂದ ಅವರು ಕಾಂಗ್ರೆಸ್ ಹೇಳಿದ ಎಲ್ಲ ಗ್ಯಾರಂಟಿ ಕೊಡಲೇಬೇಕು. ಜನರು ಯಾರೂ ವಿದ್ಯುತ್ ಬಿಲ್ ಕಟ್ಟಬಾರದು, ಬಿಲ್ ಬಂದ್ರೆ ಮುಖ್ಯಮಂತ್ರಿಯವರು ಹೇಳಿದ್ದಾರೆ ಎಂದು ಬಿಲ್ ಅವರಿಗೆ ಕಳುಹಿಸಬೇಕು ಎಂದಿದ್ದಾರೆ.

ಏತನ್ಮಧ್ಯೆ, ಹಾದಿ ಬೀದಿಯಲ್ಲಿ ಹೋಗುವವರಿಗೆಲ್ಲಾ ಗ್ಯಾರಂಟಿ ಸ್ಕೀಂ ಕೊಡಲ್ಲ ಎಂಬ ಹೇಳಿಕೆಗೆ ಬಿಜೆಪಿ ಹಿರಿಯ ನಾಯಕ ಕೆಎಸ್ ಈಶ್ವರಪ್ಪ ಕೂಡಾ ಕಿಡಿಕಾರಿದ್ದಾರೆ.

ಚುನಾವಣೆಗೂ ಮೊದಲು ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಮೊದಲ ಸಂಪುಟ ಸಭೆಯಲ್ಲಿಯೇ ಗ್ಯಾರಂಟಿ ಜಾರಿಯ ಭರವಸೆ ಕೊಟ್ಟಿದ್ದರು. ಜಾರಿಗೆ ತರುವುದು ಬಿಡುವುದು ಆಮೇಲಿನ ವಿಚಾರ. ಈಗ ಹಾದಿ ಬೀದಿಯಲ್ಲಿ ಹೋಗುವವರಿಗೆಲ್ಲಾ ಗ್ಯಾರಂಟಿ ಕೊಡಲಾಗುವುದಿಲ್ಲ ಎನ್ನುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ಮತ್ತು ಡಿಕೆಶಿ ಮತದಾರರ ಕಾಲಿಗೆ ಬಿದ್ದು ಮತ ಪಡೆದು ಮಂತ್ರಿಗಳಾಗಿದ್ದಾರೆ. ಈಗ ಅದೇ ಜನರಿಗೆ ಹಾದಿ ಬೀದಿಯಲ್ಲಿ ಹೋಗುವವರು ಎನ್ನುತ್ತಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಮತ ಕೇಳಲು ತಿರುಗಾ ಅದೇ ಜನರ ಬಳಿ ಹೋಗಬೇಕು. ಜನರೇ ಹಾದಿ ಬೀದಿಯಲ್ಲಿ ಹೋಗುವವರ ಬಳಿ ಮತ ಕೇಳಬೇಡಿ ಎಂದು ಇವರಿಬ್ಬರಿಗೆ ಛೀಮಾರಿ ಹಾಕಿ ಮನೆಗೆ ಕಳುಹಿಸುತ್ತಾರೆ. ಚುನಾವಣೆಗೂ ಮೊದಲು ಎಲ್ಲರಿಗೂ ಉಚಿತ ಎಂದು ಭರವಸೆ ಕೊಟ್ಟು ಈಗ ಕಾಂಗ್ರೆಸ್ ನಾಯಕರು ಮಾತನಾಡುತ್ತಿರುವ ರೀತಿ ಸರಿಯಿಲ್ಲ ಎಂದು ಹರಿಹಾಯ್ದರು.

ಜನರಿಗೆ ಮೋಸ ಮಾಡಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಮೊದಲ ಕ್ಯಾಬಿನೆಟ್ ನಲ್ಲಿ ಗ್ಯಾರಂಟಿ ಜಾರಿಗೆ ತರದಿರುವುದು ಜನರಿಗೆ ಮಾಡಿದ ದ್ರೋಹ. ಕಾಂಗ್ರೆಸ್ ನಾಯಕರಿಗೆ ಭರವಸೆ ಕೊಡುವಾಗ ಮೈಮೇಲೆ ಪ್ರಜ್ಞೆ ಇರಲಿಲ್ವಾ? ಕಾಂಗ್ರೆಸ್ ಜನರಿಗೆ ಮೋಸ ಮಾಡಿದ ಬಗ್ಗೆ, ಹಾದಿ ಬೀದಿಯಲ್ಲಿ ಹೋಗುವವರಿಗೆ ಗ್ಯಾರಂಟಿ ಇಲ್ಲ ಎಂದು ಹೇಳಿದ ಬಗ್ಗೆ ಹೋರಾಟ ಮಾಡುತ್ತೇವೆ. ರಾಜ್ಯಾಧ್ಯಕ್ಷರ ಜೊತೆ ಚರ್ಚೆ ಮಾಡಿ ಹೋರಾಟದ ರೂಪುರೇಷೆ ಮಾಡುತ್ತೇನೆ ಎಂದು ವಾಗ್ದಾಳಿ ನಡೆಸಿದರು.