ಏನಿದು ಕ್ಲೀನ್ ನೋಟ್ ಪಾಲಿಸಿ? 2,000 ಮುಖಬೆಲೆಯ ನೋಟುಗಳನ್ನು ಹಿಂಪಡೆಯುವಿಕೆ ಕಾರಣ ಹಾಗೂ ನೋಟು ಬದಲಾಯಿಸುವುದು ಹೇಗೆ? ತಿಳಿದುಕೊಳ್ಳಿ

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ಶುಕ್ರವಾರ 2,000 ರೂನ ಕರೆನ್ಸಿ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳುವುದಾಗಿ ಘೋಷಿಸಿದ್ದು,ಇದು ಜನರಲ್ಲಿ ಆತಂಕವನ್ನು ಸೃಷ್ಟಿಸಿದೆ. 2016ರ ನವೆಂಬರ್‌ ತಿಂಗಳಿನಲ್ಲಿ 500 ಮತ್ತು 1,000 ರ ಹಳೆಯ ನೋಟುಗಳನ್ನು ನಿಷೇಧಿಸಿದಾಗ 2,000 ನೋಟುಗಳನ್ನು ಪರಿಚಯಿಸಲಾಯಿತು. ಆದರೆ ಇದೀಗ ಆರ್.ಬಿ.ಐ ಈ ನೋಟುಗಳನ್ನು ಹಿಂಪಡೆಯುತ್ತಿದ್ದು, ಸಾರ್ವಜನಿಕರಲ್ಲಿ ಗೊಂದಲ ಉಂಟಾಗಿದೆ.

ಆರ್.ಬಿ.ಐ ಪ್ರಕಾರ, ನೋಟ್ ಬ್ಯಾನ್ ಬಳಿಕ ಇತರ ಮುಖಬೆಲೆಯ ನೋಟುಗಳು ಸಾಕಷ್ಟು ಪ್ರಮಾಣದಲ್ಲಿ ಚಲಾವಣೆಗೆ ಬಂದ ಬಳಿಕ 2018-2019 ರಲ್ಲಿ 2000 ರೂ ನೋಟುಗಳನ್ನು ಮುದ್ರಿಸುವುದನ್ನು ನಿಲ್ಲಿಸಲಾಗಿತ್ತು. 89% 2000ರೂ ಮುಖಬೆಲೆಯ ನೋಟುಗಳನ್ನು 2017ಕ್ಕಿಂತಲೂ ಮೊದಲು ಮುದ್ರಿಸಲಾಗಿತ್ತು ಮತ್ತು ಅವುಗಳ ಆಯಸ್ಸು ಸುಮಾರು 4-5 ವರ್ಷಗಳಾಗಿವೆ. ಮಾರುಕಟ್ಟೆಯಲ್ಲಿ 2000 ರೂ ಮುಖಬೆಲೆಯ ನೋಟುಗಳ ಚಲಾವಣೆಯಲ್ಲಿ ಇಳಿಕೆ ಕಂಡುಬಂದಿದೆ ಮತ್ತು ಪರ್ಯಾಯವಾಗಿ ಇತರ ಮುಖಬೆಲೆಯ ನೋಟುಗಳು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದೆ. ಈ ಕಾರಣಗಳಿಂದಾಗಿ ಆರ್.ಬಿ.ಐ ನ “ಕ್ಲೀನ್ ನೋಟ್ ಪಾಲಿಸಿ” ಅನುಸರಣೆಗಾಗಿ 2000 ರೂ ನೋಟುಗಳನ್ನು ಹಿಂಪಡೆಯುತ್ತಿದೆ.

2,000 ನೋಟುಗಳನ್ನು ಹಿಂಪಡೆಯಲು 6 ಕಾರಣಗಳನ್ನು 2018 ರಿಂದ 2021 ರವರೆಗೆ ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದ ಡಾ.ಕೃಷ್ಣಮೂರ್ತಿ ಸುಬ್ರಮಣಿಯನ್ ವಿವರಿಸಿದ್ದಾರೆ:

1. ಹಲವಾರು ಐಟಿ, ಇಡಿ ದಾಳಿಗಳು ಪ್ರಾಥಮಿಕವಾಗಿ ಹಣವನ್ನು ಸಂಗ್ರಹಿಸಲು 2,000 ರೂ ನೋಟು ಬಳಸುತ್ತಿರುವುದನ್ನು ಸಾಬೀತುಪಡಿಸಿದವು. 80-20 ರ ನಿಯಮವು 80% ಜನರು ಈ ಹಣವನ್ನು ಕಾನೂನುಬದ್ಧವಾಗಿ 2000 ನೋಟುಗಳಲ್ಲಿ ಸಂಗ್ರಹಿಸುತ್ತಿದ್ದರೂ ಸಹ, ಅವರು ಒಟ್ಟಾರೆ ಮೌಲ್ಯದ 20% ರಷ್ಟು ಮಾತ್ರ ಸಂಗ್ರಹಿಸುವ ಸಾಧ್ಯತೆಯಿದೆ ಎಂದು ಸೂಚಿಸುತ್ತದೆ. 2000 ನೋಟುಗಳಲ್ಲಿ ಹಣವನ್ನು ಸಂಗ್ರಹಿಸುತ್ತಿರುವವರಲ್ಲಿ 20% ರಷ್ಟು ಜನರು ಕಾಳಧನಿಕರಾಗಿದ್ದು, ಅವರು ಮೌಲ್ಯದ 80% ನಷ್ಟು (~ 3 ಲಕ್ಷ ಕೋಟಿಗಳು) ಪಾಲನ್ನು ಹೊಂದಿರಬಹುದು.

2. ಆರ್ಥಿಕ ವಹಿವಾಟುಗಳಿಗೆ 2,000 ನೋಟುಗಳು ಭಾರೀ ಸಂಖ್ಯೆಯಲ್ಲಿ ಬಳಕೆಯಾಗುತ್ತಿಲ್ಲವಾದ್ದರಿಂದ ಈ ಕ್ರಮವು ಸಾಮಾನ್ಯ ಜನರಿಗೆ ಅನಾನುಕೂಲ ಉಂಟುಮಾಡುವುದಿಲ್ಲ.

3. ಡಿಜಿಟಲ್ ಪಾವತಿಗಳನ್ನು ಬೃಹತ್ ಸಂಖ್ಯೆಯಲ್ಲಿ ಬಳಸಲಾಗುತ್ತಿರುವುದರಿಂದ ಭೌತಿಕ ಕರೆನ್ಸಿ ವಿಶೇಷವಾಗಿ 2,000 ನೋಟುಗಳ ಚಲಾವಣೆಯಲ್ಲಿ ಇಳಿಕೆ.

4. 2000 ನೋಟಿನ ಕನಿಷ್ಠ ಬಳಕೆಯನ್ನು ಬೇಕಾದ ರೀತಿಯಲ್ಲಿ ಬದಲಿಸಲು 500ರೂ ನೋಟು ಅಥವಾ ಡಿಜಿಟಲ್ ಮಾಧ್ಯಮವನ್ನು ವಹಿವಾಟು ವಿನಿಮಯದ ಮಾಧ್ಯಮವಾಗಿ ಬಳಸಬಹುದು.

5. BCG ವರದಿ ಪ್ರಕಾರ 2026 ವರೆಗೆ ಡಿಜಿಟಲ್ ವಹಿವಾಟುಗಳು ಮೂರುಪಟ್ಟು ಹೆಚ್ಚುವ ನಿರೀಕ್ಷೆಯಿದೆ, ಇದು ಮುಂಬರುವ ವರ್ಷಗಳಲ್ಲಿ ವಿನಿಮಯದ ಮಾಧ್ಯಮವಾಗಿ 2000 ನೋಟಿನ ಅಗತ್ಯವನ್ನು ಕಡಿಮೆ ಮಾಡುತ್ತದೆ.

6. ಅತ್ಯಂತ ಮುಖ್ಯವಾಗಿ, 2000 ನೋಟು ಕಾನೂನುಬದ್ಧವಾಗಿ (30-ಸೆಪ್ಟೆಂಬರ್-2023 ರ ನಂತರವೂ ನನ್ನ ಪ್ರಸ್ತುತ ತಿಳುವಳಿಕೆ ಆರ್‌ಬಿಐ ಇದನ್ನು ಸ್ಪಷ್ಟಪಡಿಸಬೇಕಾಗಬಹುದು) ಮುಂದುವರಿಯುತ್ತದೆ ಎಂದು ಆರ್‌ಬಿಐ ಹೇಳಿರುವುದರಿಂದ 2000ರೂ ನೋಟು ಹೊಂದಿರುವ ಸಾಮಾನ್ಯ ಜನರು 30-ಸೆಪ್ಟೆಂಬರ್-2023 ರ ನಂತರವೂ ವಿನಿಮಯ ಮಾಡಿಕೊಳ್ಳಬಹುದು ಎಂದು ಡಾ. ಕೃಷ್ಣಮೂರ್ತಿ ಸುಬ್ರಮಣಿಯನ್ ಹೇಳಿದ್ದಾರೆ.

2000 ರೂಪಾಯಿಯ ನೋಟುಗಳನ್ನು ಎಲ್ಲಿ ಹೇಗೆ ಮತ್ತು ಯಾವಾಗ ಬದಲಾಯಿಸಬಹುದು?

  1. ಆರ್.ಬಿ.ಐ ಸೂಚನೆಯಂತೆ ಮೇ. 23 ರ ಬಳಿಕ ಯಾವುದೇ ಬ್ಯಾಂಕ್ ನಲ್ಲಿ 2000 ರೂ ನೋಟುಗಳನ್ನು ಸಾಮಾನ್ಯ ರೀತಿಯಲ್ಲಿ ಬದಲಾಯಿಸಿ ಇತರ ಮುಖಬೆಲೆಯ ನೋಟುಗಳನ್ನು ಪಡೆದುಕೊಳ್ಳಬಹುದು.

2. ಒಂದು ಬಾರಿಗೆ ಒಬ್ಬ ವ್ಯಕ್ತಿಯು 20,000 ರೂಪಾಯಿಗಳ ಮಿತಿಯವರೆಗೆ 2000 ರೂಗಳನ್ನು ಬದಲಾಯಿಸಿಕೊಳ್ಳಬಹುದು.

3. ನೋಟುಗಳನ್ನು ಸೆಪ್ಟೆಂಬರ್ 30 ರವರೆಗೆ ಬದಲಾಯಿಸಿಕೊಳ್ಳಬಹುದು. ಆದಾಗ್ಯೂ, ತಮ್ಮಲ್ಲಿ 2000 ರೂ ಕರೆನ್ಸಿ ನೋಟುಗಳಿದ್ದಲ್ಲಿ ಸಾರ್ವಜನಿಕರು ಆ ಬಳಿಕವೂ ಕೂಡಾ ನೋಟುಗಳನ್ನು ಬದಲಾಯಿಸಿಕೊಳ್ಳಬಹುದು. ಈ ಬಗ್ಗೆ ಆರ್.ಬಿ.ಐ ಅದಾಗಲೇ ಎಲ್ಲಾ ಬ್ಯಾಂಕುಗಳಿಗೆ ಸುತ್ತೋಲೆ ಹೊರಡಿಸಿದ್ದು ಸಾರ್ವಜನಿಕರು ಆತಂಕ ಪಡುವ ಅಗತ್ಯ ಇಲ್ಲ ಎಂದು ಆರ್.ಬಿ.ಐ ತಿಳಿಸಿದೆ.

Image