ಮೇ. 28 ರಂದು ನೂತನ ಸಂಸತ್ ಭವನ ಉದ್ಘಾಟನೆ ನಡೆಸಲಿರುವ ಪ್ರಧಾನಿ ಮೋದಿ

ನವದೆಹಲಿ: ನೂತನ ಸಂಸತ್ ಭವನ ಉದ್ಘಾಟನೆಗೆ ದಿನಗಣನೆ ನಡೆಯುತ್ತಿದ್ದು, ಬಹುತೇಕ ಮೇ 28 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಹೊಸ ಸಂಸತ್ತಿನ ಕಟ್ಟಡವನ್ನು ಉದ್ಘಾಟಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿರುವುದಾಗಿ ಮಾಧ್ಯಮ ವರದಿಯಾಗಿದೆ.

ಕೇಂದ್ರದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ (ಎನ್‌ಡಿಎ) ಸರ್ಕಾರದ ಒಂಬತ್ತು ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಕಟ್ಟಡದ ಉದ್ಘಾಟನೆ ನಡೆಯಲಿದೆ ಎನ್ನಲಾಗಿದೆ.

ನಾಲ್ಕು ಅಂತಸ್ತಿನ ಸಂಸತ್ ಭವನದಲ್ಲಿ 1,224 ಸಂಸತ್ ಸದಸ್ಯರಿಗೆ ಆಸನ ವ್ಯವಸ್ಥೆ ಇದ್ದು, ಅತ್ಯಾಧುನಿಕ ಸವಲತ್ತು ಮತ್ತು ಸುರಕ್ಷತೆಯನ್ನು ಒಳಗೊಂಡಿದೆ.

ಲೋಕಸಭೆ ಮತ್ತು ರಾಜ್ಯಸಭೆ ಸಂಸದರಿಗೆ ಪ್ರತ್ಯೇಕ ಆಸನಗಳಿರಲಿವೆ. ಹೊಸ ಸಂಸತ್ ಭವನವನ್ನು ನಿರ್ವಹಿಸುವ ಮಾರ್ಷಲ್‌ಗಳು ಮತ್ತು ಉದ್ಯೋಗಿಗಳಿಗೆ ಹೊಸ ಸಮವಸ್ತ್ರವಿರುತ್ತದೆ. ಅವರ ಹೊಸ ರೂಪಗಳನ್ನು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿ ವಿನ್ಯಾಸಗೊಳಿಸಿದೆ.

ಮೇ 28 ರಂದು ಎನ್‌ಡಿಎ ಸರ್ಕಾರದ 9 ವರ್ಷಗಳು ಪೂರ್ಣಗೊಳ್ಳಲಿದ್ದು, ಇದೇ ಸಂದರ್ಭದಲ್ಲಿ ಹೊಸ ಸಂಸತ್ ಭವನದ ಉದ್ಘಾಟನೆ ನಡೆಯಲಿದೆ ಎನ್ನಲಾಗಿದೆ.