ಇತಿಹಾಸ ಪ್ರಸಿದ್ಧ ಉದ್ಯಾವರ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ನವೀಕೃತ ತಾಮ್ರದ ಸುತ್ತುಪೌಳಿ ಸಮರ್ಪಣೆ, ಬ್ರಹ್ಮಕುಂಭಾಭಿಷೇಕ

ಉಡುಪಿ: ಇತಿಹಾಸ ಪ್ರಸಿದ್ಧ ಉದ್ಯಾವರ ಶ್ರೀ ಮಹತೋಭಾರ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ನವೀಕೃತ ತಾಮ್ರ ಸುತ್ತುಪೌಳಿ ಸಮರ್ಪಣೆ, ಬ್ರಹ್ಮಕುಂಭಾಭಿಷೇಕ ಹಾಗೂ ರಾಶಿ ಪೂಜಾ ಮಹೋತ್ಸವ ಮೇ 24ರ ತನಕ ನಡೆಯಲಿದೆ ಎಂದು ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಕಿದಿಯೂರು ಉದಯ ಕುಮಾರ್ ಶೆಟ್ಟಿ ಮಂಗಳವಾರ ಹೇಳಿದರು.

ದೇವಸ್ಥಾನದ ಸುತ್ತುಪೌಳಿ ಮತ್ತು ಅಗ್ರ ಸಭಾ ಮಂಟಪವನ್ನು ನವೀಕರಿಸಿ ತಾಮ್ರದ ಮುಚ್ಚಿಗೆ ಹಾಕುವ ಕಾರ್ಯಕ್ಕೆ ಭಕ್ತರು ಸಂಪೂರ್ಣ ಸಹಕಾರ ನೀಡಿದ್ದು, ಗರ್ಭಗುಡಿಯ ಸುತ್ತು ಹಾಸು ಕಲ್ಲಿನ ನವೀಕರಣ ವ್ಯವಸ್ಥೆ, ಒಳ ಮತ್ತು ಹೊರ ಸುತ್ತಿನ ತಗಡಿನ ಚಪ್ಪರದ ನವೀಕರಣ ಹಾಗೂ ದೇವಸ್ಥಾನದ ಎದುರಿನ ರಥ ಬೀದಿ ಕಾಂಕ್ರೀಟೀಕರಣಗೊಳಿಸಿ ದೇವಾಲಯಕ್ಕೆ ಸಮರ್ಪಿಸಲು ಸಜ್ಜಾಗಿದೆ.

ಸೋದೆ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು, ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥ ಶ್ರೀ ಪಾದರ ಆಶೀರ್ವಾದದೊಂದಿಗೆ ವೇ| ಮೂ| ಪುತ್ತೂರು ಶ್ರೀಶ ತಂತ್ರಿ, ಕುತ್ಪಾಡಿ ಬಾಲಕೃಷ್ಣ ಭಟ್ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಮೇ 21ರಂದು ಸಂಜೆ 5.30ಕ್ಕೆ ಧಾರ್ಮಿಕ ಸಭೆಯಲ್ಲಿ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು, ಭೀಮನಕಟ್ಟೆ ಮಠದ ಶ್ರೀ ರಘುವರೇಂದ್ರ ಶ್ರೀಪಾದರು, ಮೇ 22ರ ಸಂಜೆ 6.30ಕ್ಕೆ ಸೋದೆ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಆಶೀರ್ವಚನ ನೀಡಲಿದ್ದಾರೆ.

ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಯು. ಸುರೇಶ ಆಚಾರ್ಯ, ಕೋಶಾಧಿಕಾರಿ ಶ್ರೀನಿವಾಸ್ ಯು.ಬಿ. ಜತೆ ಕಾರ್ಯದರ್ಶಿಗಳಾದ ವಿನೋದ್ ಕುಮಾರ್ ಭಟ್, ಪ್ರಭಾಕರ್ ಗಾಣಿಗ, ವ್ಯವಸ್ಥಾಪನ ಸಮಿತಿ ಸದಸ್ಯ ಸಂತೋಷ್ ಕುಮಾರ್, ಉಪಾಧ್ಯಕ್ಷರಾದ ಶ್ರೀಶ ಭಟ್, ಹರಿಯಪ್ಪ ಕೋಟ್ಯಾನ್ ಸುದ್ದಿಗೋಷ್ಠಿಯಲ್ಲಿದ್ದರು.

ಗ್ರಾಮಾಧಿಪತಿ ಆರಾಧ್ಯ ದೇವರು

ಉದ್ಯಾವರ, ಮಟ್ಟು, ನಿಡಂಬೂರು ಮಾಗಣೆಯ ಕುತ್ಪಾಡಿ, ಕಡೇಕಾರು, ಕಿದಿಯೂರು, ಅಂಬಲಪಾಡಿ, ಬನ್ನಂಜೆ, ಕಪ್ಪೆಟ್ಟು ಹಾಗೂ ಕನ್ನರ್ಪಾಡಿ ಗ್ರಾಮದ ಸಮಸ್ತರಿಗೆ ಉದ್ಯಾವರ ಶ್ರೀ ಸಿದ್ಧಿ ವಿನಾಯಕನು ಗ್ರಾಮಾಧಿಪತಿಯಾಗಿ ಆರಾಧ್ಯ ದೇವರೆನಿಸಿದ್ದಾರೆ.

ಕಳೆದ 50 ವರ್ಷಗಳಿಂದ ಮೂರು ಬಾರಿ ಬ್ರಹ್ಮಕಲಶ ಹಾಗೂ ಹಲವು ಬಾರಿ ಜೀರ್ಣೋದ್ಧಾರ ಕಾರ್ಯದೊಂದಿಗೆ ಹಂತ ಹಂತವಾಗಿ ಅಭಿವೃದ್ದಿ ಕೆಲಸಗಳು ನಡೆದಿದೆ ಎಂದು ತಿಳಿಸಿದರು.

ಇಂದು ಹೊರಕಾಣಿಕೆ ಮೆರವಣಿಗೆ:

ಮೇ.19 ರಂದು ಮಧ್ಯಾಹ್ನ 3:30ಕ್ಕೆ ಅಂಬಲಪಾಡಿ ದೇವಸ್ಥಾನದಿಂದ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. ಮೆರವಣಿಗೆ ಕಿದಿಯೂರು, ಕಡೇಕಾರು, ಕುತ್ಪಾಡಿ, ಸಂಪಿಗೆ ನಗರ, ಗುಡ್ಡೆ ಅಂಗಡಿಯಾಗಿ ಶಂಭುಕಲ್ಲು ದೇವಸ್ಥಾನದ ಮೂಲಕ ಪಾದಯಾತ್ರೆ ಸಾಗಿ ಬರಲಿದೆ ಎಂದರು.

ಮೇ.21ರಂದು ಬ್ರಹ್ಮಕುಂಭಾಭಿಷೇಕ:

ಮೇ 21ರ ಬೆಳಿಗ್ಗೆ 9.15ಕ್ಕೆ ಶ್ರೀ ಸಿದ್ಧಿ ವಿನಾಯಕ ದೇವರಿಗೆ ಬ್ರಹ್ಮ ಕುಂಭಾಭಿಷೇಕ, ಮಹಾಪೂಜೆ, ಅನ್ನ ಸಂತರ್ಪಣೆ ನಡೆಯಲಿದೆ.

ಮೇ.23ರಂದು ರಾಶಿ ಪೂಜಾ ಮಹೋತ್ಸವ:

ಮೇ 23ರ ಬೆಳಿಗ್ಗೆ 5:38 ರಿಂದ ರಾಶಿ ಪೂಜೆ ಮಹೋತ್ಸವ ಆರಂಭಗೊಂಡು ಮೇ 24ರ ಬೆಳಿಗ್ಗೆ 5.34ರ ವರೆಗೆ ನಡೆಯಲಿದೆ. ಈ ಮಧ್ಯೆ ಅಹೋರಾತ್ರಿ ಅಖಂಡ ಭಜನೆ ನಡೆಯಲಿದೆ. ಮೇ 17 ರಿಂದ 24ರ ವರೆಗೆ ಪ್ರತಿದಿನ ಧಾರ್ಮಿಕ ಕಾರ್ಯಕ್ರಮದ ಜತೆಗೆ ಪ್ರವಚನ, ಸಭಾ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮಗಳು, ನಿರಂತರ ಭಜನೆ ನಡೆಯಲಿದೆ ಎಂದು ಮಾಹಿತಿ ನೀಡಿದರು.