ಗೃಹಪ್ರವೇಶಕ್ಕೆ ಬಂದವರಿಗೆಲ್ಲಾ ಒಂದೊಂದು ಗಿಡ ಕೊಟ್ಟರು: ಕಾರ್ಕಳದಲ್ಲಿ ಪರಿಸರ ಕಾಳಜಿ ಮೆರೆದ ಪರಿಸರ ಪ್ರೇಮಿಗಳು

ಪರಿಸರ ಪ್ರೀತಿ ಅನ್ನೋದು ನಮ್ಮಲ್ಲೇ ಹುಟ್ಟುವಂತದ್ದು. ತಮ್ಮ ಪರಿಸರದ ಬಗ್ಗೆ ಕಾಳಜಿ ಇರುವವರು ಹೇಗಾದರೂ ಮಾಡಿ ತಮ್ಮ ಪರಿಸರಕ್ಕೆ ಏನಾದರೂ ಕೊಡುಗೆ ನೀಡುತ್ತಲೇ ಇರುತ್ತಾರೆ.

ಶನಿವಾರ  ಕಾರ್ಕಳದ ಸಾಣೂರಿನಲ್ಲಿ ಗೃಹಪ್ರವೇಶದ ಗೌಜಿ. ಗೃಹಪ್ರವೇಶದಲ್ಲಿ ಭಾಗವಹಿಸಿದರಿಗೆ ಸಿಹಿ,ಭೋಜನ ನೀಡುವುದು ಎಲ್ಲಾ ಕಡೆ ಮಾಮೂಲು, ಆದರೆ ಈ ಮನೆಯವರು ಬಂದವರಿಗೆ ಬಗೆಬಗೆಯ ಗಿಡಗಳನ್ನು ನೀಡಿ ಪರಿಸರ ಕಾಳಜಿ ಮೆರೆದಿದ್ದಾರೆ. ಹೌದು ಶನಿವಾರ ಪುಲ್ಕೇರಿ ನವೀನ್ ಪ್ರಭು ಅವರ ಮನೆಯ ಗೃಹಪ್ರವೇಶದಲ್ಲಿ ಈ ನಾನಾ ವಿಧದ ಪರಿಸರಕ್ಕೆ ಪೂರಕವಾಗುವ ಗಿಡಗಳನ್ನು ವಿತರಿಸಲಾಗಿದ್ದು ಇದು ಎಲ್ಲರ ಗಮನ ಸೆಳೆದಿದೆ.

ಬಗೆಬಗೆಯ ಗಿಡಗಳು:

ಅಂದ ಹಾಗೆ ಈ ರೀತಿ ಪರಿಸರಕ್ಕೆ ಪೂರಕವೆನ್ನಿಸೋ ಗಿಡಗಳನ್ನು ವಿತರಿಸಬೇಕು, ಆಮೂಲಕ ಜನರಲ್ಲಿ ಪರಿಸರ ಪ್ರೀತಿ ಮೂಡಿಸಬೇಕು ಎನ್ನುವ ಯೋಜನೆ ಹಾಕಿ ಗಿಡಗಳನ್ನು ಉಚಿತವಾಗಿ ವಿತರಿಸಿದವರು ಕಾರ್ಕಳ ಶಿವ  ಎಡ್ವಟೈಸರ್ಸ್ ನ ಮಾಲಕ ವರದರಾಜ್ ಪ್ರಭು,

ವರದರಾಜ ಪ್ರಭು
ನವೀನ್ ಪ್ರಭು

 

ಗೃಹಪ್ರವೇಶಕ್ಕೆ ಆಗಮಿಸಿದ  ಎಲ್ಲರಿಗೂ  ದಾಳಿಂಬೆ, ನೇರಳೆ, ಸೀತಾಫಲ, ಬಿರುಂಡಿ, ಮಲ್ಲಿಗೆ, ಕಾಕಡ, ನಂದಿಬಟ್ಟಲು, ದಾಸವಾಳ, ಸಂಪಿಗೆ, ಸೇವಂತಿಗೆ, ಕರಿಬೇವು, ಕಹಿಬೇವು, ಲಿಂಬೆಯ ಗಿಡಗಳನ್ನು ನೂರಾರು ಸಂಖ್ಯೆಯಲ್ಲಿ ವಿತರಿಸಲಾಗಿದ್ದು ಗಿಡಗಳನ್ನು  ವಿಶೇಷ ಪರಿಸರ ಸಂದೇಶವುಳ್ಳ ಕಾಗದದ ಚೀಲದಲ್ಲಿ ನೀಡಲಾಗಿದೆ. ಆ ಮೂಲಕ ಪರಿಸರ ಪ್ರೀತಿಯನ್ನು ಸಾರಿದ್ದಾರೆ ವರದ ರಾಜ ಪ್ರಭು. ಪರಿಸರದ ಬಗ್ಗೆ ಈ ರೀತಿಯ ಕಾಳಜಿ ತೋರಿಸುವ, ಕಾರ್ಯಕ್ರಮಗಳಲ್ಲಿ ಗಿಡಗಳನ್ನು ವಿತರಿಸಿ ಹಸಿರೀಕರಣ ಮಾಡುವುದರಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ  ಎನ್ನುವ ಅರಿವು ಮೂಡಿಸುವವರ ಸಂಖ್ಯೆ ಜಾಸ್ತಿಯಾಗಲಿ ಎನ್ನುವುದು ನಮ್ಮ ಹಾರೈಕೆ.