ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಬಿಜೆಪಿ ಹಾಗೂ ಹಿಂದೂ ಕಾರ್ಯಕರ್ತರ ಮೇಲೆ ಪೊಲೀಸ್ ದೌರ್ಜನ್ಯ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಪುತ್ತೂರು ಡಿವೈಎಸ್ಪಿ ಸೇರಿ ಮೂವರು ಪೊಲೀಸ್ ಸಿಬ್ಬಂದಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ ಹಾಗೂ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಪಿಎಸ್‌ಐ) ಶ್ರೀನಾಥ್ ರೆಡ್ಡಿ ಮತ್ತು ಅದೇ ಠಾಣೆಯ ಪೊಲೀಸ್ ಪೇದೆ ಹರ್ಷಿತ್ನನ್ನು ಅಮಾನತುಗೊಳಿಸಲಾಗಿದೆ.
ಫಿರ್ಯಾದಿ ಅವಿನಾಶ್ ತಂದೆ ವೇಣುನಾಥ ನರಿಮೋಗ್ರು ಅವರು ನೀಡಿದ ದೂರಿನ ಮೇರೆಗೆ ಪುತ್ತೂರು ನಗರ ಠಾಣೆ Cr no.39/23 u/s 323,324,506 r/w 34IPC ರಂತೆ ಪ್ರಕರಣ ದಾಖಲಾಗಿದೆ.
ಪ್ರಕರಣದ ತನಿಖೆಯನ್ನು ಬಂಟ್ವಾಳ ಡಿ.ಎಸ್.ಪಿ ಗೆ ವಹಿಸಲಾಗಿದ್ದು, ಪುತ್ತೂರು ಡಿ.ಎಸ್.ಪಿ ವಿರುದ್ಧ ಸೂಕ್ತ ಇಲಾಖಾ ಶಿಸ್ತು ಕ್ರಮ ಕೈಗೊಳ್ಳಲು ವರದಿಯನ್ನು ಮೇಲಾಧಿಕಾರಿಗಳಿಗೆ ಸಲ್ಲಿಸಲಾಗುವುದು.
ದ.ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ್ ಅಮಟೆ ಪುತ್ತೂರು ಪೊಲೀಸ್ ಠಾಣೆಗೆ ಭೇಟಿ ನೀಡಿ ವಿಚಾರಣೆ ನಡೆಸಿದ್ದು, ಪುತ್ತೂರು ಠಾಣೆಯ ಡಿವೈಎಸ್ಪಿ, ಪುತ್ತೂರು ಗ್ರಾಮಾಂತರ ಪಿಎಸ್‌ಐ, ಪೊಲೀಸ್ ಸಿಬ್ಬಂದಿ ಹರ್ಷಿತ್ ವಿರುದ್ಧ ಪ್ರಕರಣ ದಾಖಲಾಗಿದ್ದು ಬಂಟ್ವಾಳ ಡಿವೈಎಸ್ಪಿಗೆ ಪ್ರಕರಣದ ತನಿಖೆ ಜವಾಬ್ದಾರಿ ವಹಿಸಿದ್ದಾರೆ. ಹೆಚ್ಚುವರಿ ಪೊಲೀಸ್ ಅಧೀಕ್ಷಕರಿಂದ ವಿಚಾರಣೆ ವರದಿ ಸಲ್ಲಿಕೆಯಾಗಿದ್ದು, ಆ ವರದಿ ಆಧಾರದ ಮೇಲೆ ಪುತ್ತೂರು ಗ್ರಾಮಾಂತರ ಠಾಣೆ ಪಿ.ಎಸ್.ಐ ಹಾಗೂ ಸಿಬ್ಬಂದಿ ಹರ್ಷಿತ್ ಅನ್ನು ಸೇವೆಯಿಂದ ಅಮಾನತುಗೊಳಿಸಿ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ್ ಅಮಟೆ ಆದೇಶ ಹೊರಡಿಸಿದ್ದಾರೆ.