ನವದೆಹಲಿ: ಕಿರಣ್ ರಿಜಿಜು ಅವರನ್ನು ಗುರುವಾರ ಕೇಂದ್ರ ಕಾನೂನು ಸಚಿವ ಸ್ಥಾನದಿಂದ ತೆರವುಗೊಳಿಸಲಾಗಿದೆ ಎಂದು ರಾಷ್ಟ್ರಪತಿ ಭವನದ ಹೇಳಿಕೆ ತಿಳಿಸಿದೆ. ಅವರ ಸ್ಥಾನಕ್ಕೆ ಅರ್ಜುನ್ ರಾಮ್ ಮೇಘವಾಲ್ ಆಯ್ಕೆಯಾಗಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಸಲಹೆಯಂತೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕೇಂದ್ರ ಸಚಿವ ಸಂಪುಟದಲ್ಲಿ ಸಚಿವರಿಗೆ ಖಾತೆಗಳನ್ನು ಮರುಹಂಚಿಕೆ ಮಾಡಿದ್ದಾರೆ. “ಭೂ ವಿಜ್ಞಾನ ಸಚಿವಾಲಯದ ಖಾತೆಯನ್ನು ಕಿರಣ್ ರಿಜಿಜು ಅವರಿಗೆ ನಿಯೋಜಿಸಲಾಗಿದೆ” ಎಂದು ಹೇಳಿಕೆ ತಿಳಿಸಿದೆ.
ರಿಜಿಜು ಜುಲೈ 8, 2021 ರಂದು ಕಾನೂನು ಮತ್ತು ನ್ಯಾಯ ಸಚಿವರಾಗಿ ಅಧಿಕಾರ ವಹಿಸಿಕೊಂಡರು. ಇದಕ್ಕೂ ಮೊದಲು, ಅವರು ಮೇ 2019 ರಿಂದ ಜುಲೈ 2021 ರವರೆಗೆ ಯುವ ವ್ಯವಹಾರಗಳು ಮತ್ತು ಕ್ರೀಡೆಗಳ ರಾಜ್ಯ (ಸ್ವತಂತ್ರ ಉಸ್ತುವಾರಿ) ಸಚಿವರಾಗಿ ಸೇವೆ ಸಲ್ಲಿಸಿದರು. ದೆಹಲಿ ವಿಶ್ವವಿದ್ಯಾಲಯದಿಂದ ಕಾನೂನು ಪದವೀಧರರಾದ ರಿಜಿಜು ಅರುಣಾಚಲ ಪ್ರದೇಶದಿಂದ ಮೂರು ಬಾರಿ ಲೋಕಸಭಾ ಸಂಸದರಾಗಿದ್ದಾರೆ.
ಕಳೆದ ವರ್ಷದಿಂದ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ನೇಮಕಾತಿ ವ್ಯವಸ್ಥೆಗೆ ಸಂಬಂಧಿಸಿದಂತೆ ಕೇಂದ್ರ ಮತ್ತು ಸುಪ್ರೀಂ ಕೋರ್ಟ್ ನಡುವೆ ಜಟಾಪಟಿ ನಡೆಯುತ್ತಿದ್ದು ಹಲವಾರು ಸಂದರ್ಭಗಳಲ್ಲಿ ರಿಜಿಜು ಕೊಲಿಜಿಯಂ ವ್ಯವಸ್ಥೆ ಹಾಗೂ ನ್ಯಾಯಾಂಗದ ಬಗ್ಗೆ ಬಹಿರಂಗವಾಗಿ ಟಿಪ್ಪಣಿಗಳನ್ನು ನೀಡುತ್ತಿದ್ದರು. ಇದೀಗ ಅರ್ಜುನ್ ರಾಮ್ ಮೇಘವಾಲ್ ಕಾನೂನು ಸಚಿವರಾಗಿ ಕಾರ್ಯನಿರ್ವಹಿಸಲಿದ್ದಾರೆ.