ಉಡುಪಿ: ನಗರಸಭಾ ವ್ಯಾಪ್ತಿಯಲ್ಲಿ ಮಳೆಗಾಲ ಪ್ರಾರಂಭವಾಗುವವರೆಗೆ ಸಮರ್ಪಕ ರೀತಿಯಲ್ಲಿ ಕುಡಿಯುವ ನೀರು ಪೂರೈಸಲು ಬೇಕಾದ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ನಗರಸಭೆ ಅಧಿಕಾರಿಗಳಿಗೆ ಶಾಸಕ ಯಶ್ ಪಾಲ್ ಸುವರ್ಣ ಸೂಚನೆ ನೀಡಿದರು.
ಅವರು ಮಂಗಳವಾರದಂದು ನಗರಸಭೆಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಪ್ರಸ್ತುತ ಕುಡಿಯುವ ನೀರಿಗೆ 3 ದಿನಗಳಿಗೊಮ್ಮೆ ನೀರು ಸರಬರಾಜು ಮಾಡುವ ರೇಷನಿಂಗ್ ವ್ಯವಸ್ಥೆಯನ್ನು ಅಳವಡಿಸಿದ್ದು ಅದನ್ನು ಮುಂದುವರಿಸುವಂತೆ ಹೇಳಿದರು.
ವಾರ್ಡ್ ಗಳಲ್ಲಿ ಕುಡಿಯುವ ನೀರಿನ ಬೇಡಿಕೆಯನ್ನು ಗಮನಿಸಿ, ನಗರ ಸಭಾ ಸದಸ್ಯರಿಗೆ ಮಾಹಿತಿ ನೀಡಿ ಸಾರ್ವಜನಿಕರಿಗೆ ಅನುಕೂಲವಾಗುವ ಸಮಯದಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವಂತೆ ಸೂಚಿಸಿದ ಅವರು, ಮಳೆಗಾಲದ ಪೂರ್ವ ಸಿದ್ದತೆಗಳನ್ನು ಮಾಡಲು ತಿಳಿಸಿದರು.
ಮಳೆಗಾಲ ಆರಂಭವಾಗುವುದಕ್ಕೂ ಮುನ್ನ ಚರಂಡಿಗಳ ಹೂಳೆತ್ತುವುದು, ಟಾಸ್ಕ್ ಫೋರ್ಸ್ ಹಾಗೂ ಇತರ ತುರ್ತು ಕಾರ್ಯಗಳ ಬಗ್ಗೆ ಸಭೆ ನಡೆಸುವುದಾಗಿ ಅಧಿಕಾರಿಗಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ನಿಕಟ ಪೂರ್ವ ನಗರಸಭಾ ಅಧ್ಯಕ್ಷೆ ಸುಮಿತ್ರಾ ನಾಯಕ್,ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್, ಪೌರಾಯುಕ್ತ ರಮೇಶ್ ನಾಯ್ಕ್, ನಗರಸಭಾ ಸದಸ್ಯರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.