ಪುತ್ತೂರು: ಪುತ್ತೂರು ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಅವರು ನೋವಿನಲ್ಲಿದ್ದ ಕಾರ್ಯಕರ್ತರನ್ನು ಸಮಾಧಾನಿಸಿದರು. ತಮ್ಮ ಚುನಾವಣೆಯಲ್ಲಿ ಕೊನೆಯ ಹಂತದ ವರೆಗೂ ಪೈಪೋಟಿಯನ್ನು ನೀಡಿ, 60 ಸಾವಿರಕ್ಕೂ ಅಧಿಕ ಮತದಾರರು ಬೆಂಬಲ ನೀಡುವ ಮೂಲಕ ಸಿದ್ಧಾಂತಕ್ಕೆ ಗೆಲುವು ಸಿಕ್ಕಿದೆ ಎಂದು ಅರುಣ್ ಕುಮಾರ್ ಪುತ್ತಿಲ ಹೇಳಿದರು.
ಮುಕ್ರಂಪಾಡಿಯಲ್ಲಿರುವ ಸುಭದ್ರಾ ಸಭಾಂಗಣದಲ್ಲಿ ತಮ್ಮ ಬೆಂಬಲಿಗರ ಜತೆ ಟಿ.ವಿ. ಪರದೆ ಮೂಲಕ ಫಲಿತಾಂಶ ಬಂದ ಬಳಿಕ ಕಾರ್ಯಕರ್ತರ ಜತೆ ಮಾತನಾಡಿದರು.
ಯಾವತ್ತೂ ನಿಮ್ಮ ಜತೆಗಿದ್ದೇನೆ: ಪುತ್ತಿಲ ಭರವಸೆ:
ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದ ಅವರು, ತನ್ನ ಜತೆ ಹಗಲು ಇರುಳೆನ್ನದೆ ದುಡಿದ್ದಿದ್ದೀರಿ. ನಿಮ್ಮ ಶ್ರಮ ವ್ಯರ್ಥವಾಗದಂತೆ ನಾನು ಯಾವತ್ತೂ ನಿಮ್ಮ ಜತೆಗಿದ್ದೇನೆ ಎಂದು ಭರವಸೆ ನೀಡಿದರು.
ಪಕ್ಷೇತರ ಅಭ್ಯರ್ಥಿಯಾದ ಅರುಣ್ ಕುಮಾರ್ ಪುತ್ತಿಲ ಮತ್ತು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ಅವರ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ನಡೆದು, ಕೊನೆಗೆ ಅಶೋಕ್ ರೈ ಗೆಲುವು ಪಡೆದರು. ಇಲ್ಲಿ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ 3ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದರು.
ಹಿಂದುತ್ವ ಮತ್ತು ಕಾರ್ಯಕರ್ತರಿಗೆ ಆಗಿರುವ ಅನ್ಯಾಯವನ್ನು ಪ್ರತಿಭಟಿಸಿ ಪುತ್ತಿಲ ಅವರು ಬಿಜೆಪಿಯ ವಿರುದ್ಧ ಬಂಡಾಯವಾಗಿ ಕಣಕ್ಕೆ ಇಳಿದಿದ್ದರು.