ಮಂಗಳೂರು: ಪ್ರಖರ ಹಿಂದುತ್ವವಾದಿ ಅರುಣ್ ಕುಮಾರ್ ಪುತ್ತಿಲ ಪುತ್ತೂರಿನಿಂದ ಬಿಜೆಪಿ ಟಿಕೆಟ್ಗೆ ಪ್ರಬಲ ಆಕಾಂಕ್ಷಿಯಾಗಿದ್ದರೂ, ಪಕ್ಷವು ಹಾಲಿ ಶಾಸಕ ಸಂಜೀವ ಮಠಂದೂರು ಅವರಿಗೆ ಟಿಕೆಟ್ ನಿರಾಕರಿಸಿದ್ದಲ್ಲದೆ, ಪುತ್ತೂರಿನಿಂದ ಆಶಾ ತಿಮ್ಮಪ್ಪ ಅವರನ್ನು ಕಣಕ್ಕಿಳಿಸಿತು. ಈ ಹಿಂದೆ ಸಂಘಪರಿವಾರದಲ್ಲಿ ಗುರುತಿಸಿಕೊಂಡಿದ್ದ ಉದ್ಯಮಿ ಅಶೋಕ್ ಕುಮಾರ್ ರೈ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ 66607 ಮತಗಳೊಂದಿಗೆ ಪುತ್ತೂರಿನಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ಜಿದ್ದಾಜಿದ್ದಿನ ಪೈಪೋಟಿ ಇದ್ದಾಗಲೂ ಅರುಣ್ ಕುಮಾರ್ ಪುತ್ತಿಲ ಪಕ್ಷೇತರರಾಗಿ ಸ್ಪರ್ಧಿಸಿ 62458 ಮತಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಕೇವಲ 37558 ಮತ ಗಳಿಸಿದ್ದಾರೆ. ಒಂದು ವೇಳೆ ಬಿಜೆಪಿಯು ಅರುಣ್ ಕುಮಾರ್ ಪುತ್ತಿಲ ಅವರನ್ನು ಕಣಕ್ಕಿಳಿಸಿದ್ದಲ್ಲಿ ಕಾಂಗ್ರೆಸ್ ವಿರುದ್ದ 90,000 ಮತಗಳಿಂದ ಗೆಲ್ಲುತ್ತಿದ್ದರು ಎಂದು ಅಂದಾಜಿಸಲಾಗುತ್ತಿದೆ.
ದ.ಕ ಜಿಲ್ಲೆಯಲ್ಲಿ ಅರುಣ್ ಕುಮಾರ್ ಪುತ್ತಿಲ ಅವರಿಗೆ ಭಾರೀ ಜನ ಬೆಂಬಲವಿದ್ದು, ‘ಪುತ್ತೂರಿಗೆ ಪುತ್ತಿಲ’ ಎನ್ನುವ ಅಭಿಯಾನ ತಕ್ಕ ಮಟ್ಟಿಗೆ ಯಶಸ್ವಿಯಾಗಿದೆ. ಇದೀಗ ಮುಂದಿನ ದಿನಗಳಲ್ಲಿ ಲೋಕಸಭಾ ಚುನಾವಣೆಯಲ್ಲಿ ದ.ಕ ಜಿಲ್ಲೆಯಿಂದ ಸಂಸದರಾಗಿ ಪುತ್ತಿಲ ಅವರನ್ನು ಗೆಲ್ಲಿಸಿಕೊಡುವ ಲೆಕ್ಕಾಚಾರಗಳು ಅದಾಗಲೇ ಶುರುವಾಗಿವೆ. 2024 ರ ಲೋಕಸಭಾ ಚುನಾವಣೆಗೂ ಮುನ್ನ ಭಾರತೀಯ ಜನತಾ ಪಕ್ಷ ಅಥವಾ ಪಕ್ಷೇತರರಾಗಿಯಾದರೂ ಸರಿ ಅರುಣ್ ಕುಮಾರ್ ಪುತ್ತಿಲ ಅವರನ್ನೇ ಆಯ್ಕೆ ಮಾಡಲು ದ.ಕ ಜನತೆ ಮುಂದಾಗಿರುವ ಸೂಚನೆಗಳು ಕಂಡು ಬರುತ್ತಿವೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಭಾರೀ ಚರ್ಚೆಯಾಗುತ್ತಿದ್ದು, ಚುನಾವಣೆಯಲ್ಲಿ ಸೋತರೂ ಜನರ ಮನಗೆದ್ದ ಅರುಣ್ ಕುಮಾರ್ ಪುತ್ತಿಲ ಅವರನ್ನು ತಮ್ಮ ಮುಂದಿನ ಸಂಸದರಾಗಿ ಆಯ್ಕೆ ಮಾಡಲು ಮತದಾರರು ತುದಿಗಾಲಲ್ಲಿ ನಿಂತಿರುವಂತೆ ಕಂಡುಬರುತ್ತಿದೆ.