ಕಾಪು: ನಿನ್ನೆ ಸಂಜೆ ವೇಳೆಗೆ ಸುರಿದ ಭಾರೀ ಗಾಳಿ ಮಳೆಗೆ ಚಲಿಸುತ್ತಿದ್ದ ರಿಕ್ಷಾ ಮೇಲೆ ಬೃಹತ್ ಗಾತ್ರದ ಮರ ಬಿದ್ದು ರಿಕ್ಷಾದಲ್ಲಿದ್ದ ಪ್ರಯಾಣಿಕರಿಬ್ಬರು ಸಾವನಪ್ಪಿದ ಘಟನೆ ಉಡುಪಿ ಜಿಲ್ಲೆಯ ಕಾಪು – ಶಿರ್ವ ರಸ್ತೆಯಲ್ಲಿ ನಡೆದಿದೆ. ಇಲ್ಲಿನ ಮಲ್ಲಾರು ಚಂದ್ರನಗರದ ಬಳಿ ಗುರುವಾರ ರಾತ್ರಿ ವೇಳೆ ಈ ಅವಘಡ ಸಂಭವಿಸಿದೆ.
ಪಾದೂರು ಕೂರಾಲು ರೈಸ್ ಮಿಲ್ ಬಳಿಯ ನಿವಾಸಿ 45 ವರ್ಷದ ಪುಷ್ಪಾ ಕುಲಾಲ್ ಮತ್ತು ಕಳತ್ತೂರು ನಿವಾಸಿ 48ವರ್ಷದ ಕೃಷ್ಣ ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ರಿಕ್ಷಾ ಚಾಲಕ ಶರೀಫ್ ರಿಕ್ಷಾದಿಂದ ಜಿಗಿದು ಪವಾಡ ಸದೃಶ ರೀತಿಯಲ್ಲಿ ಅಪಾಯದಿಂದ ಪಾರಾಗಿದ್ದಾರೆ.
ಕಾಪುವಿನಿಂದ ಪಾದೂರಿಗೆ ತೆರಳುತಿದ್ದ ರಿಕ್ಷಾದ ಮೇಲೆ ಧೂಪದ ಮರ ಉರುಳಿ ಬಿದ್ದಿದ್ದು ಇಬ್ಬರು ಪ್ರಯಾಣಿಕರು ರಿಕ್ಷಾದೊಳಗೆ ಸಿಲುಕಿಕೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ ರಿಕ್ಷಾ ಸಂಪೂರ್ಣ ನಜ್ಜುಗುಜ್ಜಾಗಿದ್ದು ಮರವನ್ನು ತೆರವುಗೊಳಿಸಲು ಹರಸಾಹಸ ಪಡಬೇಕಾಯಿತು. ಪೊಲೀಸ್, ಮೆಸ್ಕಾಂ, ಅರಣ್ಯ ಇಲಾಖೆ, ಅಗ್ನಿಶಾಮಕ ದಳ ಸಹಿತ ನೂರಾರು ಸಾರ್ವಜನಿಕರ ಸಹಕಾರ ಹಾಗು ಜೆಸಿಬಿ, ಕ್ರೇನ್ ಸಹಾಯದಿಂದ ಸತತ ಒಂದೂವರೆ ಗಂಟೆಗಳ ಪರಿಶ್ರಮದ ಬಳಿಕ ಮರವನ್ನು ಬದಿಗೆ ಸರಿಸಲಾಯಿತು. ಘಟನೆಯಿಂದಾಗಿ ಸಂಚಾರದಲ್ಲಿ ಅಸ್ತವ್ಯಸ್ತತೆ ಉಂಟಾಯಿತು.
ಮೃತದೇಹಗಳನ್ನು ಆಂಬ್ಯುಲೆನ್ಸ್ ಮೂಲಕ ಉಡುಪಿ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿತು. ಮ್ರುತರಲ್ಲಿ ಪುಷ್ಪಾ ಕುಲಾಲ್ ಪತಿ ಮತ್ತು ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದರೆ, ಕೃಷ್ಣ ಪತ್ನಿ ಮತ್ತು ಇಬ್ಬರು ಗಂಡುಮಕ್ಕಳನ್ನು ಅಗಲಿದ್ದಾರೆ.