ಹೆಬ್ರಿ ಪರಿಸರದಲ್ಲಿ ಸುನಿಲ್ ಪರ ಮತಯಾಚನೆ

ಕಾರ್ಕಳ: ಕಾರ್ಕಳ ಕಾಂಗ್ರೆಸ್ ಅಭ್ಯರ್ಥಿ ಕಳೆದ ಚುನಾವಣೆಯಲ್ಲಿ ಹತಾಶರಾಗಿ ಸಜ್ಜನ ಗೋಪಾಲ ಭಂಡಾರಿಯವರ ಶವಯಾತ್ರೆ ನಡೆಸಿ ಭಂಡಾರಿ ಹಾಗೂ ಅವರ ಕುಟುಂಬಸ್ಥರು ಕಣ್ಣೀರು ಹಾಕುವಂತೆ ಮಾಡಿದರು. ಅವರ ಸಾವಿಗೂ ಕಾರಣರಾದರು. ಈಗ ವಿ ಸುನಿಲ್‌ಕುಮಾರ್ ಅವರ ತೇಜೋವಧೆಗೆ ಮುಂದಾಗಿದ್ದಾರೆ.

ಕಣ್ಣಿರು ಹಾಕಿಸುವುದು, ತೇಜೋವಧೆ ನಡೆಸುವುದೇ ಕಾಂಗ್ರೆಸ್ ಅಭ್ಯರ್ಥಿಯ ಸಂಸ್ಕೃತಿಯಾಗಿದೆ. ಅವರಂದು ನಡೆದುಕೊಂಡ ಅಮಾನವೀಯ ವರ್ತನೆಯನ್ನು ಹೆಬ್ರಿ, ಕಾರ್ಕಳದ, ಜನ ಮರೆತಿಲ್ಲ ಎಂದು ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಣಿರಾಜ್ ಶೆಟ್ಟಿ ಹೇಳಿದರು.

ಹೆಬ್ರಿ ಪರಿಸರದಲ್ಲಿ ಬಿಜೆಪಿ ಅಭ್ಯರ್ಥಿ ವಿ.ಸುನಿಲ್‌ಕುಮಾರ್ ಪರ ಮತಯಾಚಿಸಿ ಮಾತನಾಡಿದ ಅವರು 2018ರ ಚುನಾವಣೆಯಲ್ಲಿ ಇದೇ ಕಾಂಗ್ರೆಸ್ ಅಭ್ಯರ್ಥಿ ಯಾವ ರೀತಿ ನಡೆದುಕೊಂಡಿದ್ದರು. ಅವರ ಮನಸ್ಸಿನ ಕಲ್ಮಶ ಅಂದು ಶವಯಾತ್ರೆ ನಡೆಸುವ ಮೂಲಕ ಪ್ರಕಟಗೊಂಡಿತ್ತು. ಅಷ್ಟೊಂದು ಕೀಳು ಮಟ್ಟಕ್ಕೆ ಅಂದು ಅವರು ಇಳಿದಿದ್ದರು. ಭಂಡಾರಿ ಬೆಂಬಲಿಗರಲ್ಲಿ ಈಗಲೂ ಈ ಬಗ್ಗೆ ನೋವಿದೆ. ಹೆಬ್ರಿ ಭಾಗದ ಜನ ಇದನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅಷ್ಟೆ ಅಲ್ಲ ಕಾರ್ಕಳ ಕ್ಷೇತ್ರದ ಪ್ರತಿಯೊಬ್ಬರ ಮನಸ್ಸಿನಲ್ಲಿ ಇಂದಿಗೂ ಈ ಬಗ್ಗೆ ವೇದನೆಯಿದೆ.

ಮೇಲ್ನೋಟಕ್ಕೆ ಸಜ್ಜನರಂತೆ ವರ್ತಿಸುತ್ತ ಒಳಗೆ ಕಲ್ಮಶ ತುಂಬಿಕೊಂಡು ಬೆಂಬಲಿಗರ ಮೂಲಕ ವಯಕ್ತಿಕ ನಿಂದನೆ, ತೇಜೋವಧೆ ಮಾಡುವ ಮನಸ್ತಿತಿ ಅವರದು. ಅಂದು ಕಾಂಗ್ರೆಸ್ ನಾಯಕ ಗೋಪಾಲ ಭಂಡಾರಿಯವರನ್ನು ಆ ರೀತಿ ನಡೆಸಿಕೊಂಡವರು ಇಂದು ಕಾರ್ಕಳ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕಾರಣರಾಗಿ ಸಂಸ್ಕೃತಿಯ ಪ್ರತೀಕವಾಗಿ ಕಾರ್ಕಳ ಕ್ಷೇತ್ರದ ಹೆಸರನ್ನು ವಿಶ್ವಮಟ್ಟಕ್ಕೆ ಏರಿಸಿದವರ ವಿರುದ್ಧವೇ ತನ್ನ ಬೆಂಬಲಿಗರ ಮೂಲಕ ತೇಜೋವಧೆಗೆ ಇಳಿದಿದ್ದಾರೆ.

ಅಂದು ಕಾಂಗ್ರೆಸ್ ನಾಯಕ, ಇಂದು ಬಿಜೆಪಿ ನಾಯಕನ ತೇಜೋವಧೆ. ಹೀಗೆ ಪ್ರತಿ ಚುನಾವಣೆ ವೇಳೆಗೆ ಸಮಯಕ್ಕೆ ತಕ್ಕಂತೆ ಅವಕಾಶ ರಾಜಕಾರಣಿಯಾಗಿ ಸಿಂಪತಿ ಗಿಟ್ಟಿಸಿಕೊಂಡು ಚುನಾವಣೆ ಎದುರಿಸುತ್ತಿರುವ ಇಂತಹ ಮನಸ್ತಿಯ ಅಭ್ಯರ್ಥಿ ಅನ್ನು ಕ್ಷೇತ್ರದ ಮತದಾರರು ದೂರವಿಟ್ಟು ಕ್ಷೇತ್ರದ ಎಲ್ಲ ಜನರನ್ನು ಪ್ರೀತಿಸುವ, ದ್ವೇಷ, ತೇಜೋವಧೆ ನಡೆಸದೆ ಸರ್ವರ ಅಭಿವೃದ್ಧಿ ಹಿತ ಬಯಸುವ ವಿ.ಸುನಿಲ್‌ಕುಮಾರ್ ಅವರನ್ನು ಗೆಲ್ಲಿಸುವ ಶಪಥ ಮಾಡಬೇಕು ಎಂದು ಕರೆ ನೀಡಿದರು.

ಮಾರಿಯಮ್ಮ ದೇಗುಲ ಮೇಲೆ ಇವರಿಗ್ಯಾಕೆ ಕಣ್ಣು?

ಕಾರ್ಕಳ ನಗರದ ಅಧಿದೇವತೆ ಶ್ರೀ ಮಾರಿಯಮ್ಮ ದೇವರ ಭವ್ಯ ದೇಗುಲ ನಿರ್ಮಾಣದ ಬಗ್ಗೆಯೂ ಕಾರ್ಕಳ ಕಾಂಗ್ರೆಸ್ಸಿನ ಕೆಟ್ಟ ದೃಷ್ಟಿ ಬಿದ್ದಿದೆ. ದೇವಸ್ಥಾನದ ಜೀರ್ಣೋದ್ಧಾರ, ಬ್ರಹ್ಮಕಲಶದ ಬಗ್ಗೆ ಟೀಕೆಗಳನ್ನು ಮಾಡುತ್ತ ಧಾರ್ಮಿಕ ನಂಬಿಕೆಯನ್ನೆ ಪ್ರಶ್ನಿಸುವ ಮಟ್ಟಕ್ಕೆ ಕಾಂಗ್ರೆಸ್ಸಿಗರ ರಾಜಕೀಯ ಮನಸ್ತಿತಿ ಬೆಳೆದಿದೆ. ದೇವಸ್ಥಾನ ನಿರ್ಮಾಣ, ಉತ್ಸವಗಳ ಬಗ್ಗೆಯೇ ಟೀಕಿಸುವ ಕಾಂಗ್ರೆಸ್ಸಿನ ಬಗ್ಗೆ ಕ್ಷೇತ್ರದ ಜನ ಎಚ್ಚರ ವಹಿಸಬೇಕು.

ಇವರನ್ನು ಬೆಂಬಲಿಸಿದರೆ ಹಿಂದೂ ಧಾರ್ಮಿಕ ಕೇಂದ್ರಗಳಿಗೆ ಧಕ್ಕೆ ಬರಬಹುದು. ಹಿಂದೂ ಧಾರ್ಮಿಕ ಕೇಂದ್ರಗಳ ಮೇಲೆ ಇವರಿಗ್ಯಾಕೆ ಇಷ್ಟೊಂದು ಕಣ್ಣು ಎಂದು ಮಣಿರಾಜ್ ಶೆಟ್ಟಿ ಪ್ರಶ್ನಿಸಿದ್ದು, ಕ್ಷೇತ್ರದ ಮತದಾರರು ಇಂತಹವರನ್ನು ಬೆಂಬಲಿಸುವ ಅಭ್ಯರ್ಥಿಯನ್ನು ದೂರವಿರಿಸಬೇಕು ಎಂದಿದ್ದಾರೆ.