ಮಣಿಪುರದಲ್ಲಿ ಕುಕಿ-ಮೈತೈ ಹಿಂಸಾಚಾರ: ಮುಖ್ಯಮಂತ್ರಿಯಿಂದ ಸರ್ವಪಕ್ಷ ಸಭೆ; ಹಿಂಸಾಚಾರಕ್ಕೆ ಕೇಂದ್ರದ ಹತೋಟಿ

ಇಂಫಾಲ: ರಾಜ್ಯದಲ್ಲಿ ಕುಕಿ-ಮೈತೈ ಹಿಂಸಾಚಾರದ ನಡುವೆ ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರು ಶನಿವಾರ ಸರ್ವಪಕ್ಷ ಸಭೆ ನಡೆಸಿದರು. ಕೆಲವು ಪ್ರದೇಶಗಳಲ್ಲಿ ಸಣ್ಣ, ವಿರಳ ಹಿಂಸಾಚಾರ ಭುಗಿಲೆದ್ದರೂ ಭದ್ರತಾ ಪಡೆಗಳು ಸುವ್ಯವಸ್ಥೆಯನ್ನು ಕಾಪಾಡಿಕೊಂಡು ಬಂದಿವೆ ಎಂದು ಮೂಲಗಳು ತಿಳಿಸಿವೆ.

ಬಿರೇನ್ ಸಿಂಗ್ ಮತ್ತು ಮಾಜಿ ಮುಖ್ಯಮಂತ್ರಿ ಒಕ್ರಾಮ್ ಇಬೋಬಿ ಸಿಂಗ್ ಅವರು ಉದ್ವಿಗ್ನತೆಯನ್ನು ಶಮನಗೊಳಿಸಲು ಪಕ್ಷಾತೀತವಾಗಿ ಕೆಲಸ ಮಾಡಬೇಕು ಎಂದು ಒಪ್ಪಿಕೊಂಡಿದ್ದಾರೆ ಮತ್ತು ರಾಜ್ಯವನ್ನು ಸಾಮಾನ್ಯ ಸ್ಥಿತಿಗೆ ತರಲು ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ.

ಮಣಿಪುರದ ಹಲವಾರು ಜಿಲ್ಲೆಗಳಲ್ಲಿ ಹಲವು ದಿನಗಳ ಕಾಲ ಹಿಂಸಾಚಾರ ಆವರಿಸಿದ ನಂತರ, ಬಿರೇನ್ ಸಿಂಗ್ ನೇತೃತ್ವದ ಸರ್ಕಾರವು ಹಿಂಸಾಚಾರವನ್ನು ತಡೆಗಟ್ಟುವ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ಸ್ಪಷ್ಟ ವೈಫಲ್ಯವನ್ನು ಸೂಚಿಸಿರುವುದರಿಂದ ಕೇಂದ್ರವು ಗುರುವಾರ ಮಣಿಪುರದಲ್ಲಿ ಭದ್ರತೆಯ ಉಸ್ತುವಾರಿ ವಹಿಸಲು 355 ನೇ ವಿಧಿಯನ್ನು ಘೋಷಿಸಿದೆ. ಹಿಂಸಾಚಾರದಲ್ಲಿ ಹಲವಾರು ಸಾವು ನೋವುಗಳು ಸಂಭವಿಸಿವೆ.

‘ತೀವ್ರ ಪ್ರಕರಣಗಳಲ್ಲಿ’ ‘ಕಂಡಲ್ಲೇ ಗುಂಡಿಕ್ಕುವ’ ಆದೇಶವನ್ನು ಹೊರಡಿಸಿದ ಸರ್ಕಾರ ಎ.ಆರ್ ಮತ್ತು ಸೇನೆಯ 55 ಕಾಲಮ್‌ಗಳು, ಹಲವರನ್ನು ಆರ್.ಎ.ಎಫ್ ಏರ್ಲಿಫ್ಟ್ ಮಾಡಿದೆ.

ಪ್ರಕರಣದ ವಿವರ:

ಮಣಿಪುರ ಹೈಕೋರ್ಟಿನ ಆದೇಶದ ಮೇರೆಗೆ ಇಲ್ಲಿನ ಹಿಂದೂ ಬಹುಸಂಖ್ಯಾತ ಸಾಮಾನ್ಯ ವರ್ಗದ ಮೈತೈ ಸಮುದಾಯವನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸುವ ವಿಚಾರದಲ್ಲಿ ಭೂಮಾಪನ ವಿಚಾರವಾಗಿ ಮುಖ್ಯಮಂತ್ರಿ ಬಿರೇನ್ ಸಿಂಗ್ ಭೇಟಿಯ ಮುನ್ನಾದಿನ ಏಪ್ರಿಲ್ 28 ರಂದು ಚುರಾಚಂದ್‌ಪುರದಲ್ಲಿ ಜನರ ಗುಂಪುಗಳು 12 ಗಂಟೆಗಳ ಬಂದ್‌ಗೆ ಕರೆ ನೀಡಿದ ಸಂದರ್ಭ ಹಿಂಸಾಚಾರ ಪ್ರಾರಂಭವಾಯಿತು. ಮೇ 4 ರಂದು ‘ಬುಡಕಟ್ಟು ಒಗ್ಗಟ್ಟಿನ ಮೆರವಣಿಗೆ’ಯ ಸಂದರ್ಭದಲ್ಲಿ ಪರಿಸ್ಥಿತಿ ಹದಗೆಟ್ಟಿತು. ಹತ್ತು ಜಿಲ್ಲೆಗಳ ಬುಡಕಟ್ಟು ಜನಾಂಗದವರು ಬಹುಸಂಖ್ಯಾತ ಮೈತೈ ಸಮುದಾಯಕ್ಕೆ ಎಸ್ಟಿ ಸ್ಥಾನಮಾನ ನೀಡುವುದನ್ನು ಪ್ರತಿಭಟಿಸಿ ರಾಜ್ಯಕ್ಕೇ ಬೆಂಕಿ ಇಡಲು ಶುರುವಿಟ್ಟುಕೊಂಡರು.

ಹಿಂದೂ ಬಹುಸಂಖ್ಯಾತ ಮೈತೈ ಸಮುದಾಯವನ್ನು ಪರಿಶಿಷ್ಟ ಪಂಗಡದಲ್ಲಿ ಸೇರಿಸುವ ನಿರ್ಧಾರಕ್ಕೆ ಅಲ್ಲಿನ ಕ್ರಿಶ್ಚಿಯನ್ ಮತಾನುಯಾಯಿಗಳಾದ ಕುಕಿ ಬುಡಕಟ್ಟು ಜನಾಂಗದವರಿಂದ ಭಾರೀ ಪ್ರತಿರೋಧ ವ್ಯಕ್ತವಾಗಿದ್ದು, ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಮೈತೈ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿದಲ್ಲಿ ಸರ್ಕಾರದ ಪ್ರಯೋಜನಗಳು ಅವರಿಗೂ ದೊರೆಯುವುದು ಕ್ರಿಶ್ಚಿಯನ್ನರಾದ ಕುಕಿ ಬುಡಕಟ್ಟು ಜನಾಂಗದವರು ಬಯಸುವುದಿಲ್ಲ ಎನ್ನಲಾಗಿದೆ.

ಅತ್ತ ಅಕ್ರಮ ವಲಸಿಗರು ಮ್ಯಾನ್ಮಾರ್‌ನಿಂದ ದಾಟಿ ಬೆಟ್ಟಗಳಲ್ಲಿ ‘ಬುಡಕಟ್ಟು’ ಜನಾಂಗಗಳಂತೆ ನೆಲೆಸುವ ಸಮಸ್ಯೆ ಇದೆ. ಅವರು ರಾಜ್ಯದ ಜನಸಂಖ್ಯಾಶಾಸ್ತ್ರಕ್ಕೆ ಬೆದರಿಕೆ ಹಾಕುತ್ತಾರೆ ಎಂದು ಮೈತೈ ತಮ್ಮ ಸಮಸ್ಯೆ ಹೇಳಿಕೊಳ್ಳುತ್ತಾರೆ. ಮ್ಯಾನ್ಮಾರ್ ಗಡಿಯಲ್ಲಿ ಸೇನೆಯು ಡ್ರೋನ್‌ಗಳನ್ನು ಬಳಸಿ ಕಣ್ಗಾವಲು ಹೆಚ್ಚಿಸಿದೆ. ಕಣಿವೆ ಮೂಲದ ದಂಗೆಕೋರರು ಗಡಿಯುದ್ದಕ್ಕೂ ದಟ್ಟವಾದ ಕಾಡುಗಳಲ್ಲಿ ನೆಲೆಸಿರುವುದು ಮಣಿಪುರದಲ್ಲಿ ಸಹಜತೆಯನ್ನು ಪುನಃಸ್ಥಾಪಿಸಲು ನಡೆಯುತ್ತಿರುವ ಪ್ರಯತ್ನಗಳಿಗೆ ಹಾನಿಕಾರಕವಾಗಬಹುದು ಎಂದು ವಿಷಯದ ಪರಿಚಯವಿರುವ ಜನರು ಹೇಳುತ್ತಾರೆ.