ಉದ್ಯಾವರ ವ್ಯಾಪ್ತಿಯಲ್ಲಿ ಗುರ್ಮೆ ಸುರೇಶ್ ಶೆಟ್ಟಿ ಪಕ್ಷ ಪ್ರಚಾರ ಅಭಿಯಾನ

ಕಾಪು: ಇಲ್ಲಿನ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯಾಗಿರುವ ಗುರ್ಮೆ ಸುರೇಶ್ ಶೆಟ್ಟಿ ಶನಿವಾರ ಉದ್ಯಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ 10ನೇ ವಾರ್ಡ್ ಸಂಪಿಗೆ ನಗರ ಪ್ರದೇಶದಲ್ಲಿ ಭರ್ಜರಿ ಮತಯಾಚನೆ ಮಾಡಿದರು.

ಈ ಸಂದರ್ಭದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪರಿಷತ್ ಸದಸ್ಯ ಕೋಟ ಶ್ರೀನಿವಾಸ್ ಪೂಜಾರಿ, ಬಿಲ್ಲವ ಸಮಾಜದ ಏಳಿಗೆಗಾಗಿ ಬಿಜೆಪಿ ಸರ್ಕಾರವು ಹಲವಾರು ಅನುದಾನಗಳನ್ನು ನೀಡಿದೆ, ಮೀನುಗಾರರಿಗೆ ಹಾಗೂ ಮೀನುಗಾರಿಕಾ ಕ್ಷೇತ್ರಕ್ಕೆ ಹಲವಾರು ಅನುದಾನಗಳನ್ನು ನೀಡಿದ್ದು, ಮುಂದಿನ ದಿನಗಳಲ್ಲಿ ಅಭಿವೃದ್ದಿಗೆ ವೇಗ ನೀಡಲಿದೆ. ಕ್ಷೇತ್ರಕ್ಕೆ ಗುರ್ಮೆ ಸುರೇಶ್ ಶೆಟ್ಟಿ ಅವರ ಅಗತ್ಯವಿದ್ದು ಜನರ ಸಂಪೂರ್ಣ ಬೆಂಬಲ ಅವರಿಗೆ ದೊರೆಯಬೇಕು ಎಂದರು.

ಲಾಲಾಜಿ ಮೆಂಡನ್ ಮಾತನಾಡಿ ಶೈಕ್ಷಣಿಕ, ಸಾಮಾಜಿಕ ಹಾಗೂ ಧಾರ್ಮಿಕವಾಗಿ ಗುರುತಿಸಿಕೊಂಡಿರುವ ಸಮಾಜ ಸೇವಕ ಗುರ್ಮೆ ಸುರೇಶ್ ಶೆಟ್ಟಿ ಯವರ ಜೊತೆಗೆ ಇದ್ದು ಬಿಜೆಪಿಯನ್ನು ಗೆಲ್ಲಿಸುವ ಜವಾಬ್ದಾರಿಯನ್ನು ನಿಭಾಯಿಸುತ್ತೇನೆ. ಗುರ್ಮೆ ಸುರೇಶ್ ಶೆಟ್ಟಿಯವರಿಂದ ಕಾಪು ಕ್ಷೇತ್ರವು ಅಭಿವೃದ್ಧಿ ಕ್ಷೇತ್ರವಾಗಲಿದೆ ಎಂದರು.

ರಘುಪತಿ ಭಟ್ ಮಾತನಾಡಿ ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿರುವ ಪ್ರಣಾಳಿಕೆಯ ಬಗ್ಗೆ ತಿಳಿಸಿ ಗೋ ಹತ್ಯೆ ನಿಷೇದ ಕಾಯ್ದೆ ಹಿಂಪಡೆಯುವಿಕೆ, ಟಿಪ್ಪು ಜಯಂತಿ ಮರು ಆಚರಣೆ, ಭಜರಂಗದಳ ನಿಷೇಧ ಈ ರೀತಿಯ ಹಗಲು ಕನಸು ಕಾಣುವುದನ್ನು ಕಾಂಗ್ರೆಸ್ ಪಕ್ಷದವರು ಬಿಡಬೇಕು. ಧರ್ಮ ರಕ್ಷಣೆಗೋಸ್ಕರ ಇರುವ ಬಿಜೆಪಿ ಸರ್ಕಾರವೇ ಕರ್ನಾಟಕದಲ್ಲಿ ಮತ್ತೆ ಆಡಳಿತಕ್ಕೆ ಬರುವುದು ಎಂದು ಭರವಸೆ ವ್ಯಕ್ತಪಡಿಸಿದರು.

ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ ಶಾಸಕ ಲಾಲಾಜಿ ಮೆಂಡನ್ ಅವರ ಅಭಿವೃದ್ಧಿ ಕೆಲಸಗಳು ಆದರ್ಶವು ಕಾಪು ಕ್ಷೇತ್ರದಲ್ಲಿ ಬಿಜೆಪಿ ಗೆಲುವಿಗಾಗಿ ಶ್ರೀರಕ್ಷೆಯಾಗಲಿದೆ. ಬಿಜೆಪಿ ಪಕ್ಷದ ಸಿದ್ಧಾಂತ, ರಾಷ್ಟ್ರೀಯವಾದ ಹಾಗೂ ರಾಷ್ಟ್ರ ಪರ ಚಿಂತನೆಗಳು ಹಾಗೂ ಹಿರಿಯರೆಲ್ಲರು ನನ್ನ ಮೇಲೆ ಇಟ್ಟ ನಂಬಿಕೆಯನ್ನ ಉಳಿಸಿಕೊಂಡು ಹೋಗುತ್ತೇನೆ ಎಂದರು.

ಈ ಸಂದರ್ಭದಲ್ಲಿ ಉದ್ಯಾವರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ರವಿ ಕೋಟ್ಯಾನ್, ಆರ್.ಎಸ್.ಎಸ್ ಪ್ರಚಾರಕ ಪ್ರಸಾದ್ ಕುತ್ಯಾರ್, ಉದ್ಯಾವರ ಪಂಚಾಯತ್ ಅಧ್ಯಕ್ಷ ರಾಧಾಕೃಷ್ಣ ಶ್ರೀಯನ್, ರಾಜ್ಯ ಬಿಜೆಪಿ ಉಪಾಧ್ಯಕ್ಷೆ ನಯನ ಗಣೇಶ್, ಸಂಪಿಗೆ ನಗರ ಬೂತ್ ಅಧ್ಯಕ್ಷ ಶ್ರೀಧರ್ ಪಂಚಾಯತ್ ಸದಸ್ಯರು ಯೋಗೀಶ್ ಕೋಟ್ಯಾನ್, ವೀಣಾ ಶ್ರೀಧರ್, ಬಿಜೆಪಿ ಮುಖಂಡ ಸುರೇಂದ್ರ ಪಣಿಯೂರು, ವಿಜಯ್ ಕುಮಾರ್ ಉದ್ಯಾವರ, ಗಣೇಶ್ ಕುಮಾರ್ ಉದ್ಯಾವರ, ಸಂತೋಷ್ ಬೊಳ್ಜೆ, ಹಾಗೂ ಪಕ್ಷದ ಕಾರ್ಯಕರ್ತರು ಮತ್ತು ಬಿಜೆಪಿ ಪ್ರಮುಖರು ಉಪಸ್ಥಿತರಿದ್ದರು.