ಉಡುಪಿ ಬಿಜೆಪಿ ಅಭ್ಯರ್ಥಿ ಯಶ್ ಪಾಲ್ ಸುವರ್ಣ ಭರ್ಜರಿ ರೋಡ್ ಶೋ: ಅಭಿವೃದ್ದಿ ಆಡಳಿತವೇ ಶ್ರೀ ರಕ್ಷೆ ಎಂದ ನಾಯಕರು

ಉಡುಪಿ : ಉಡುಪಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಶ್ಪಾಲ್ ಸುವರ್ಣ ಅವರ ಪರವಾಗಿ ಬಿಜೆಪಿ ನಾಯಕರು ಮಲ್ಪೆಯ ಏಳೂರು ಮೊಗವೀರ ಸಭಾಭವನದ ಬಳಿಯಿಂದ ವಂಡಭಾಂಡೇಶ್ವರದ ಬಲರಾಮ ದೇವಸ್ಥಾನದ ವರೆಗೆ ಪಾದಯಾತ್ರೆಯ ಮೂಲಕ ಭರ್ಜರಿ ರೋಡ್ ಶೋ ನಡೆಸಿ ಮತಯಾಚಿಸಿದರು. ಈ ವೇಳೆ ಬಿಜೆಪಿ ಅಭ್ಯರ್ಥಿ ಯಶ್ಪಾಲ್ ಸುವರ್ಣ ಮಾತನಾಡಿ, ಮಂಗಳೂರಿನಲ್ಲಿ ತನ್ನ ಕುಟುಂಬದೊಂದಿಗೆ ವಾಸ ಮಾಡಿಕೊಂಡಿದ್ದು ಚುನಾವಣೆ ಸಂದರ್ಭದಲ್ಲಿ ಸೀಟನ್ನು ಪಡೆದುಕೊಂಡು ಬಂದು ನಿಮ್ಮ ಸೇವೆ ಮಾಡುವುದಾಗಿ ಹೇಳುವ ಇತರ ಪಕ್ಷದ ಅಭ್ಯರ್ಥಿಗಳಂತೆ ನಾನಲ್ಲ. ನನ್ನ ಪ್ರತಿನಿತ್ಯದ ದಿನಚರಿ ಆರಂಭವಾಗುವುದೇ ಉಡುಪಿ ಮತ್ತು ಮಲ್ಪೆಯಲ್ಲಿ ಎನ್ನುವುದನ್ನು ಧೈರ್ಯದಿಂದ ಹೇಳುತ್ತೇನೆ. ಈ ಹಿಂದೆ ಹೇಗೆ ಮೀನುಗಾರ ಸಮುದಾಯದೊಂದಿಗೆ ನಿಂತಿದ್ದಂತೆಯೆ ಮುಂದೆಯೂ ಇದ್ದು ಸೇವೆ ಸಲ್ಲಿಸಲು ಬದ್ದನಾಗಿದ್ದೇನೆ. ಕಾಂಗ್ರೆಸಿಗರು ಕಳೆದ 60 ವರ್ಷಗಳಲ್ಲಿ ತಮ್ಮ ಅಭಿವೃದ್ಧಿಯನ್ನು ಕೇವಲ ಭಾಷಣ ಮತ್ತು ಪತ್ರಿಕೆಗೆ ಸೀಮಿತಗೊಳಿಸಿದ್ದರೆ ಬಿಜೆಪಿ ಮಾಡಿದ ಅಭಿವೃದ್ದಿ ಉಡುಪಿಯಲ್ಲಿ ಎದ್ದು ಕಾಣುವ ರೀತಿ ಇದ್ದು ಅದೇ ಚುನಾವಣೆ ಗೆಲ್ಲಲು ಶ್ರೀರಕ್ಷೆಯಾಗಲಿದೆ. ಕಳೆದ 9 ವರ್ಷಗಳಲ್ಲಿ ನರೇಂದ್ರ ಮೋದಿಯವರ ಆಡಳಿತ ದಿಂದ ಇಂದು ಭಾರತವನ್ನು ಗೌರವದಿಂದ ಕಾಣುವ ಪರಿಸ್ಥಿತಿ ಇದ್ದು ಇದು ನಮಗೆ ಹೆಮ್ಮೆಯ ವಿಚಾರವಾಗಿದೆ. ಮಲ್ಪೆ ಮೀನುಗಾರಿಕಾ ಬಂದರಿನ ಸಮಗ್ರ ಅಭಿವೃದ್ದಿಯ ಮೂಲಕ ಕನಿಷ್ಠ 10000 ಮಂದಿ ಯುವಕರಿಗೆ ಇಲ್ಲಿಯೇ ಉದ್ಯೋಗ ಲಭಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಅವರು ಹೇಳಿದರು.

ರಘುಪತಿ ಭಟ್ ಮಾತನಾಡಿ, ಯಶ್ಪಾಲ್ ಮೀನುಗಾರರ ಪ್ರತಿನಿಧಿಯಾಗಿ ಬಿಜೆಪಿ ಪಕ್ಷ ಅವಕಾಶ ನೀಡಿದ್ದು, ಮೀನುಗಾರರ ಸಮುದಾಯ ಅವರನ್ನು ಪೂರ್ಣ ಪ್ರಮಾಣದಿಂದ ಬೆಂಬಲಿಸಬೇಕು. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೇವಲ ಜಾತಿಯಲ್ಲಿ ಮೊಗವೀರ ಸಮುದಾಯಕ್ಕೆ ಸೇರಿದ್ದು ಮೀನುಗಾರರ ಪ್ರತಿನಿಧಿ ಎಂದು ಕರೆಯಲು ಸಾಧ್ಯವಿಲ್ಲ. ಆದರೆ ಯಶ್ಪಾಲ್ ಸುವರ್ಣ ನೈಜ ಮೀನುಗಾರರಾಗಿದ್ದು ಅವರು ಈ ಬಾರಿ ಸ್ಪಷ್ಟ ಬಹುಮತದೊಂದಿಗೆ ಗೆಲ್ಲಲಿದ್ದಾರೆ. ಬಿಜೆಪಿಗೆ ಮೀನುಗಾರರ ಋಣವಿದ್ದು ಪ್ರತಿ ಚುನಾವಣೆಯಲ್ಲಿ ಪಕ್ಷವನ್ನು ಬೆಂಬಲಿಸಿದೆ. ಅದರಂತೆ ಮೀನುಗಾರರಿಗೆ ಕೂಡ ಬಿಜೆಪಿ ಪಕ್ಷ ಪೂರ್ಣ ರೀತಿಯ ಬೆಂಬಲ ನೀಡಿಕೊಂಡು ಬಂದಿದ್ದು ಈ ಬಾರಿಯ ಚುನಾವಣೆಯಲ್ಲಿ ಬೆಂಬಲಿಸುವಂತೆ ಮನವಿ ಮಾಡಿದರು.

ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ಇಂದು ವಿಶ್ವದಲ್ಲಿ ಮೋದಿ ಆಡಳಿತದಿಂದಾಗಿ ಭಾರತ ಆರ್ಥಿಕವಾಗಿ 5 ನೇ ಸ್ಥಾನಕ್ಕೆ ಬರಲು ಕಾರಣವಾಗಿದ್ದು, ಕಾಂಗ್ರೆಸ್ ಒಂದು ವೇಳೆ ಅಧಿಕಾರಕ್ಕೆ ಬಂದಲ್ಲಿ ಶ್ರೀಲಂಕಾ ಮತ್ತು ಪಾಕಿಸ್ತಾನದ ಪರಿಸ್ಥಿತಿ ಭಾರತಕ್ಕೆ ಬರುವ ಸಾಧ್ಯತೆ ಇದ್ದು ಕರ್ನಾಟಕದ ಚುನಾವಣೆ ಮುಂದಿನ ವರ್ಷ ಬರುವ ಕೇಂದ್ರ ಚುನಾವಣೆಗೆ ಅಡಿಪಾಯ ವಾಗಿದ್ದು ಕರ್ನಾಟಕದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಬೇಕು. ಉಡುಪಿಯ ಬಿಜೆಪಿ ಅಭ್ಯರ್ಥಿ ಯಶ್ಪಾಲ್ ಸುವರ್ಣ ಅವರು ಚುನಾವಣೆಯಲ್ಲಿ ಅತೀ ಹೆಚ್ಚು ಅಂತರದಿಂದ ಗೆಲ್ಲುವಂತಾಗಬೇಕು ಇದಕ್ಕೆ ಕಾರ್ಯಕರ್ತರು ಕಟಿಬದ್ದರಾಗಬೇಕು. ಯಾವುದೇ ಅಪಪ್ರಚಾರಗಳಿಗೆ ಕಿವಿಗೊಡದೆ ಬಿಜೆಪಿ ಅಧಿಕಾರಕ್ಕೆ ಬರುವತ್ತ ಕೈಜೋಡಿಸೋಣ. ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಮೀನುಗಾರ ಕುಲಕಸುಬನ್ನು ನಿಂದಿಸುವ ಕೆಲಸವನ್ನು ಮಾಡಿದ್ದು ಇದಕ್ಕೆ ಸೂಕ್ತ ಉತ್ತರವನ್ನು ಈ ಬಾರಿಯ ಚುನಾವಣೆಯಲ್ಲಿ ನೀಡಬೇಕು ಎಂದರು.

ದಿಕ್ಸೂಚಿ ಭಾಷಣ ಮಾಡಿದ ಬಿಜೆಪಿ ನಾಯಕ ಹರಿಕೃಷ್ಣ ಬಂಟ್ವಾಳ್ ಅವರು ಮಾತನಾಡಿ ಕಾಂಗ್ರೆಸ್‌ನಲ್ಲಿ ಹಿಂದುತ್ವದ ಬೇರು ಇಲ್ಲ ಅದು ಇರುವುದಾದರೆ ಕೇವಲ ಬಿಜೆಪಿ ಪಕ್ಷದಲ್ಲಿ ಮಾತ್ರ. ಅದಕ್ಕಾಗಿ ಕಾಂಗ್ರೆಸ್ ಪಕ್ಷ ಬಜರಂಗದಳವನ್ನು ನಿಷೇಧಿಸಲು ಹೊರಟಿದ್ದು ಇದರ ವಿರುದ್ದ ನಾವು ಕಾಂಗ್ರೆಸ್ ಗೆ ಸೂಕ್ತ ಉತ್ತರವನ್ನು ಚುನಾವಣೆಯಲ್ಲಿ ನೀಡಬೇಕಾಗಿದೆ. ಕಾಂಗ್ರೆಸ್ ಪಕ್ಷ ಬಿಜೆಪಿಯ ಡ್ಯಾಮ್ ಒಡೆದಿದೆ ಎನ್ನುತ್ತಿದೆ ಆದರೆ ಕಾಂಗ್ರೆಸಿನ ಡ್ರಮ್ಮು ಒಡೆದಿದೆ ಮುಂದಿನ ದಿನಗಳಲ್ಲಿ ಬೂತ್ ಮುಕ್ತ ಕಾಂಗ್ರೆಸ್ ಆಗಬೇಕಾಗಿದೆ. ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರದ ಕೂಪವಾಗಿದ್ದು ಜನರನ್ನು ಮರಳು ಮಾಡಲು ಸುಳ್ಳು ಗ್ಯಾರಂಟಿ ಕಾರ್ಡ್ ಭರವಸೆ ನೀಡಿದೆ ಎಂದರು.

ಈ ವೇಳೆ ಮಾಜಿ ವಿಧಾನಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು ಮಾತನಾಡಿ, ಈ ಬಾರಿಯ ಚುನಾವಣೆ ಪ್ರತಿಯೊಬ್ಬರಿಗೂ ಪವಿತ್ರವಾಗಿದ್ದು, ಏಕೆಂದರೆ ಗಡಿಯಲ್ಲಿ ಜೀವದ ಹಂಗು ತೊರೆದು ದೇಶವನ್ನು ಕಾಯುವಾಗ ಅನೇಕ ವರ್ಷಗಳಿಂದ ಕರಾವಳಿ ಭಯೋತ್ಪದಾಕರ ಸ್ಲೀಪರ್ ಸೆಲ್ ಆಗುತ್ತಿದ್ದು, ನಮ್ಮ ಮುಂದಿನ ಮಕ್ಕಳ ಭವಿಷ್ಯದ ಬಗ್ಗೆ ಗಂಭೀರ ಚಿಂತನೆ ನಡೆಸಿ ಮತದಾನ ಮಾಡಬೇಕಾಗಿದೆ. ಬಿಜೆಪಿಯಿಂದ ಉಡುಪಿಯ ಚಿತ್ರಣ ಬದಲಾವಣೆ ಮಾಡಿದ್ದು ಅದನ್ನು ಮುಂದುವರೆಸುವ ಕೆಲಸ ಯಶ್ಪಾಲ್ ಸುವರ್ಣ ಅವರಿಂದ ನಡೆಯಬೇಕು. ವಿಶ್ವದಲ್ಲಿ ಸುದ್ದಿಯಾದ ಹಿಜಾಬ್ ಹಗರಣದ ಹೋರಾಟದ ನಾಯಕತ್ವವನ್ನು ವಹಿಸಿ ಹೆಣ್ಣು ಮಕ್ಕಳಿಗೆ ನ್ಯಾಯ ನೀಡಿದ ಕೀರ್ತಿ ಯಶ್ಪಾಲ್ ಅವರದ್ದಾಗಿದೆ ಎಂದರು. ದೇಶವನ್ನು ಮುನ್ನಡೆಸುವ ಕೆಲಸವನ್ನು ನರೇಂದ್ರ ಮೋದಿ ಮಾಡುತ್ತಿದ್ದು ಮಹಿಳೆಯರಿಗೆ ಉಜ್ವಲ ಗ್ಯಾಸ್, ಪ್ರತಿ ಮನೆಗೆ ಶೌಚಾಲಯ, ಕೋವಿಡ್ ಸಮಯದಲ್ಲಿ ಪ್ರತಿಯೊಬ್ಬರಿಗೆ ಉಚಿತ ಲಸಿಕೆ ನೀಡುವ ಮೂಲಕ ಬಡವರ ಪರವಾಗಿ ಇದ್ದ ಸರಕಾರ ಬಿಜೆಪಿಯಾಗಿದೆ. ಕಾಂಗ್ರೆಸ್ ಅಧಿಕಾರವಧಿಯಲ್ಲಿ 23 ಹಿಂದೂ ಕಾರ್ಯಕರ್ತರ ಕೊಲೆ, ದನಗಳ್ಳ ಕಬೀರ್ ಪೊಲೀಸರಿಂದ ಸತ್ತದ್ದಕ್ಕೆ 15 ಲಕ್ಷ ರೂಪಾಯಿ ಪರಿಹಾರ ನೀಡಿ ಒಂದು ಸಮುದಾಯಕ್ಕೆ ಒಲೈಸುವ ಕೆಲಸ ಮಾಡಿದೆ. ಮತ್ತೆ ಪುನಃ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಿಜೆಪಿಯ ಯೋಜನೆಗಳನ್ನು ವಾಪಾಸು ಪಡೆಯುವುದಾಗಿ ಹೇಳುತ್ತಿದೆ. ಅದಕ್ಕೆ ಉದಾಹರಣೆ ಎಂಬಂತೆ ಹಿಂದೂ ಸಮಾಜದ ರಕ್ಷಣೆಗೆ ನಿಂತಿರುವ ಬಜರಂಗದಳವನ್ನು ನಿಷೇಧಿಸುವುದಾಗಿ ಹೇಳಿದ್ದು, ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡುವ ಸಂಕಲ್ಪವನ್ನು ಪ್ರತಿಯೊಬ್ಬ ಕಾರ್ಯಕರ್ತರು ಮಾಡಬೇಕು ಎಂದರು.

ಮಾಜಿ ರಕ್ಷಣಾ ಸಚಿವ ಎ ಕೆ ಎಂಟನ್ ಅವರ ಪುತ್ರ ಇತ್ತೀಚೆಗೆ ಬಿಜೆಪಿ ಸೇರಿದ್ದ ಅನಿಲ್ ಎಂಟನಿ ಅವರು ಮಾತನಾಡಿ ಭಾರತ ಮೋದಿ ನೇತೃತ್ವದಲ್ಲಿ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದು ಅವರು ಅಧಿಕಾರಕ್ಕೆ ಬಂದ ಬಳಿಕ ಜಿಡಿಪಿಯಲ್ಲಿ ಏರಿಕೆ, ಮೂಲಭೂತ ಸೌಕರ್ಯದಲ್ಲಿ ಅಭಿವೃದ್ದಿ ದೇಶದಲ್ಲಿ 74 ಏರ್ ಪೋರ್ಟ್ ಇದ್ದಲ್ಲಿ ಇಂದು 150 ಕ್ಕೆ ಏರಿದೆ, 7 ಎಐಎಮ್ ಇದ್ದಲ್ಲಿ 23 ಆಗಿವೆ. ಸ್ಟಾರ್ಟ್ ಅಪ್ 500 ಇದ್ದು ಅದು ಇಂದು 1 ಲಕ್ಷ ಆಗಿದೆ ಇದರಿಂದ ಹೆಚ್ಚಿನ ಉದ್ಯೋಗ ಲಭಿಸಲು ಕಾರಣವಾಗಿದೆ. ಇದರ ಹೆಚ್ಚಿನ ಲಾಭ ಪಡೆದಿರುವುದು ಕರ್ನಾಟಕ ರಾಜ್ಯವಾಗಿದ್ದು ಇದು ಮತ್ತೆ ಮುಂದುವರೆಯಬೇಕಾದಲ್ಲಿ ಡಬಲ್ ಇಂಜಿನ್ ಸರಕಾರ ಬರಬೇಕಾಗಿದೆ. ಕಾಂಗ್ರೆಸ್ ಪಕ್ಷ ಭ್ರಷ್ಠಾಚಾರವಾದರೆ ಬಿಜೆಪಿ ವಿಕಾಸ ಆದ್ದರಿಂದ ಬ್ರಷ್ಟಾಚಾರ ಮುಕ್ತ ಸರಕಾರಕ್ಕಾಗಿ ಬಿಜೆಪಿಯನ್ನು ಬೆಂಬಲಿಸಬೇಕು ಎಂದರು.

ಪಾದಯಾತ್ರೆಯ ಮಧ್ಯೆ ದಾರಿಯಲ್ಲಿ ಮಾಜಿ ಸಚಿವೆ ಹಾಗೂ ಸಂಸದೆ ಮನೋರಮಾ ಮಧ್ವರಾಜ್ ಅವರ ನಿವಾಸಕ್ಕೆ ಭೇಟಿ ನೀಡಿದ ಬಿಜೆಪಿ ಅಭ್ಯರ್ಥಿ ಯಶ್ಪಾಲ್ ಸುವರ್ಣ ಮನೋರಮಾ ಅವರ ಆಶೀರ್ವಾದ ಪಡೆದರು.

ಮಲ್ಪೆಯ ಏಳೂರು ಮೊಗವೀರ ಸಭಾಭವನದ ಬಳಿಯಿಂದ ಆರಂಭವಾದ ಪಾದಯಾತ್ರೆಯಲ್ಲಿ ದಾರಿಯುದ್ದಕ್ಕೂ ಮೇರವಣಿಗೆಯಲ್ಲಿ ಕೇಸರಿ ಶಾಲುಗಳು ರಾರಾಜಿಸಿದ್ದು ಸಂಪೂರ್ಣ ಕೇಸರಿಮಯವಾಗಿತ್ತು.

ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯ್ಕ, ರಾಷ್ಟ್ರೀಯ ಬಿಜೆಪಿ ಮಹಿಳಾ ಮೊರ್ಚಾ ಅಧ್ಯಕ್ಷರಾದ ಗೀತಾ ವಿವೇಕಾನಂದ, ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್, ನಾಯಕರಾದ ವೀಣಾ ಶೆಟ್ಟಿ, ಸುಪ್ರಸಾದ್ ಶೆಟ್ಟಿ, ರಾಘವೇಂದ್ರ ಕಿಣಿ, ದಿನಕರ ಬಾಬು, ಸುಮಿತ್ರಾ ನಾಯಕ್, ಲಕ್ಷ್ಮೀ ಮಂಜುನಾಥ ಕೊಳ, ಮಟ್ಟಾರ್ ರತ್ನಾಕರ ಹೆಗ್ಡೆ, ಬಿ ಎನ್ ಶಂಕರ ಪೂಜಾರಿ, ವಿಜಯ್ ಕೊಡವೂರು, ಶ್ರೀಶ ಭಟ್ ಹಾಗೂ ಇತರರು ಉಪಸ್ಥಿತರಿದ್ದರು.