ಕಾರ್ಕಳ: ನಾಥಪಂಥದ ಕ್ಷಾತ್ರ ತೇಜಸ್ಸಿನ ಯೋಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಮೇ 6ರಂದು ಕಾರ್ಕಳಕ್ಕೆ ಆಗಮಿಸಿ ಬಿಜೆಪಿ ಅಭ್ಯರ್ಥಿ ವಿ.ಸುನಿಲ್‌ಕುಮಾರ್ ಅವರ ಪರ ರೋಡ್ ಶೋ ನಡೆಸಲಿದ್ದಾರೆ.
ಯೋಗಿ ಆದಿತ್ಯನಾಥ್ ಆಗಮನ ಹಿನ್ನೆಲೆಯಲ್ಲಿ ನಗರದಲ್ಲಿ ಪೊಲೀಸರು ಬಿಗು ಭದ್ರತೆ ಕೈಗೊಂಡಿದ್ದಾರೆ. ರೋಡ್ ಶೋ ವೇಳೆ ಭದ್ರತೆ ಹಿನ್ನೆಲೆಯಲ್ಲಿ ನಗರದಲ್ಲಿ ಅಂಗಡಿ ಮುಂಗಟ್ಟು
ಗಳನ್ನು ಮುಚ್ಚುವಂತೆ ಪೊಲೀಸರು ಈಗಾಗಲೇ ಸೂಚನೆ ನೀಡಿದ್ದಾರೆ. ರೋಡ್ ಶೋ ವೇಳೆ ಪೇಟೆಯೊಳಗೆ ವಾಹನ ಸಂಚಾರಕ್ಕೆ ಅವಕಾಶವಿಲ್ಲದ ಕಾರಣ ವಾಹನ ಸಂಚಾರದ ಮಾರ್ಗಗಳಲ್ಲಿ ವ್ಯತ್ಯಯವಾಗಲಿದೆ.
ಯೋಗಿ ಆದಿತ್ಯನಾಥ ಆಗಮನದ ಹಿಂದಿನ ದಿನ ಪೊಲೀಸರು, ಯೋಧರ ವಿವಿಧ ಬೆಟಾಲಿಯನ್ ನಗರದಲ್ಲಿ ಪೆರೆಡ್ ನಡೆಸಿದರು. ಯೋಗಿ ಆದಿತ್ಯನಾಥ್ ಆಗಮನ ಹಿನ್ನೆಲೆಯಲ್ಲಿ ನಕ್ಸಲ್ ಪೀಡಿತ ಭಾಗಗಳಾದ ಹೆಬ್ರಿ, ಈದು, ಮಾಳ ಸೇರಿದಂತೆ ಪಶ್ಚಿಮ ಘಟ್ಟ ತಪ್ಪಲು ಪ್ರದೇಶ ಹಾಗೂ ತಾಲೂಕಿನಾದ್ಯಂದ ಕಟ್ಟೆಚ್ಚರ ವಹಿಸಲಾಗಿದೆ. ಪೊಲೀಸರು ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಎಲ್ಲೆಡೆ ಹದ್ದಿನ ಕಣ್ಣಿರಿಸಲಾಗಿದೆ.
ಮಂಗಳೂರು, ಮೇ 5: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಶನಿವಾರ (ಮೇ 6) ಬಂಟ್ವಾಳ ಕ್ಷೇತ್ರ ವ್ಯಾಪ್ತಿಯ ಕೈಕಂಬ-ಬಿ.ಸಿ.ರೋಡ್‌ನಲ್ಲಿ ರೋಡ್ ಶೋ ಮೂಲಕ ಬಿಜೆಪಿ ಚುನಾವಣ ಪ್ರಚಾರ ನಡೆಸಲಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಾನೂನು ಸುವ್ಯವಸ್ಥೆ ಕಾಪಾಡಲು ಬೆಳಗ್ಗೆ 11ರಿಂದ ಸಂಜೆ 6ರ ವರೆಗೆ ಮೊಡಂಕಾಪು, ಕೈಕಂಬ, ಬಿ.ಸಿರೋಡ್ ಸುತ್ತಮುತ್ತಲಿನ ಪ್ರದೇಶಗಳು ಹಾಗೂ ಬಂಟ್ವಾಳ ಎಸ್‌ವಿಎಸ್ ಕಾಲೇಜಿನ ಹೆಲಿಪ್ಯಾಡ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಡ್ರೋನ್ ಹಾಗೂ ಹೆಲಿಕಾಪ್ಟರ್ ಹಾರಾಟ ನಿಷೇಧಿಸಿ ದ.ಕ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಅವರು ಆದೇಶ ಹೊರಡಿಸಿದ್ದಾರೆ.