ಸಮುದ್ರದಲ್ಲಿ ವಾಯು ಅಬ್ಬರ, ಮೀನುಗಾರಿಕೆ ತತ್ತರ; ಹೆಚ್ಚಾಯ್ತು ಮೋಚಾ ಚಂಡಮಾರುತ ಭೀತಿ..!!

ಮಂಗಳೂರು: ನೋಡಲು ಪ್ರಶಾಂತವಾಗಿರುವ ಸಮುದ್ರದಲ್ಲಿ ಮುಂದಕ್ಕೆ ಹೋದಂತೆ ಗಾಳಿಯ ಅಬ್ಬರ. ಗಂಟೆಗೆ 28 ಕಿ.ಮೀನಿಂದ 32 ಕಿ.ಮೀ.ವರೆಗೆ ವೇಗದ ಗಾಳಿ ಬೀಸುತ್ತಿದೆ. ಹೀಗಾಗಿ ಮೀನುಗಾರರು ಕಂಗಾಲಾಗಿದ್ದಾರೆ. ಆಳಸಮುದ್ರದ ಮೀನುಗಾರಿಕೆ (fishing) ಸಂಪೂರ್ಣ ಬಂದ್ ಆಗುವ ಪರಿಸ್ಥಿತಿಯಲ್ಲಿದೆ.

ಅಷ್ಟೇ ಅಲ್ಲ, ಇತರ ಮೀನುಗಾರರೂ ತಮ್ಮ ಬೋಟುಗಳನ್ನು ಕಡಲಿಗಿಳಿಸಿಲ್ಲ.

ಬಂಗಾಳಕೊಲ್ಲಿಯಲ್ಲಿ (Bay of Bengal) ವಾಯುಭಾರ ಕುಸಿತವಾಗಿದ್ದು, ಇನ್ನೆರಡು ದಿನಗಳಲ್ಲಿ ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ರೂಪುಗೊಳ್ಳುವ ಸಾಧ್ಯತೆಯಿದೆ. ಈ ಚಂಡಮಾರುತಕ್ಕೆ ಈಗಾಗಲೇ ಮೋಚಾ (Mocha cyclone) ಎಂದು ಹೆಸರಿಡಲಾಗಿದೆ. ಇದು ಸುಂದರಬನ್​ ಪ್ರದೇಶಗಳ ಅಕ್ಕಪಕ್ಕದಲ್ಲಿ ವಾಸಿಸುವ ಜನರಿಗೆ ಅಪಾಯ ತಂದೊಡ್ಡಲಿದೆ. ಆದರೆ ಕರ್ನಾಟಕದಲ್ಲೂ ಗಾಳಿ-ಮಳೆಯಾಗಲಿದೆ. ಈಗಾಗಲೇ ಕಳೆದ ನಾಲ್ಕೈದು ದಿನಗಳಿಂದ ರಾಜ್ಯದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಸಮುದ್ರಗಳಲ್ಲಿ ಬಲವಾದ ಗಾಳಿ ಬೀಸುತ್ತಿದೆ.

ಈ ಕುರಿತು ಹವಾಮಾನ ಇಲಾಖೆಯೂ ಎಚ್ಚರಿಕೆಯನ್ನು ಕಳೆದ ಮೂರು ನಾಲ್ಕು ದಿನಗಳಿಂದ ನೀಡುತ್ತಿದೆ. ಇದರಿಂದ ಆಳಸಮುದ್ರ ಮತ್ತು ಎಲ್ಲ ರೀತಿಯ ಮೀನುಗಾರಿಕೆಗೆ ಅಡ್ಡಿ, ಆತಂಕ ಉಂಟಾಗಿದೆ. ನಾಲ್ಕೈದು ದಿನಗಳ ಹಿಂದೆ ಗಾಳಿಯ ವೇಗ ಗಂಟೆಗೆ 45 ಕಿ.ಮೀನಷ್ಟು ಇತ್ತು ಎಂಬ ಮಾಹಿತಿಯಿದ್ದು, ಮೀನುಗಾರರು ಸಮುದ್ರಕ್ಕಿಳಿದು ಬಲೆ ಹಾಕಲು ಹಿಂದೇಟು ಹಾಕುತ್ತಿದ್ದಾರೆ.

ಮೀನು ದುಬಾರಿ:

ಮೀನುಗಾರರು ಕಡಲಿಗಿಳಿಯದ ಕಾರಣ ಮೀನಿನ ಬೆಲೆಯೂ ನಿಧಾನವಾಗಿ ಏರುತ್ತಿದೆ. ಕೊಡ್ನಾಯಿ ಮೀನಿಗೆ 300 ರೂ, ಬೂತಾಯಿಗೆ 150, ಬಂಗುಡೆಗೆ 200, ಪಾಂಪ್ಲೆಟ್ ಗೆ 1000ರೂ, ಅಂಜಲ್ ಗೆ 900 ರೂವರೆಗೆ ದರಪಟ್ಟಿ ಇದೆ. ಇದು ಸೀಸನಲ್ ಆಗಿ ಹೆಚ್ಚು ಕಮ್ಮಿ ಆಗುತ್ತದೆ. ಆದರೆ ಕಳೆದ ಮೂರು ನಾಲ್ಕು ದಿನಗಳಿಂದ ಮೀನುಗಾರರು ಸಮುದ್ರಕ್ಕೆ ತಲೆ ಹಾಕದ ಕಾರಣ ಮೀನಿಗೂ ಡಿಮಾಂಡ್, ದರವೂ ಜಾಸ್ತಿ.

ಎಲ್ಲೆಲ್ಲಿ ಸಮಸ್ಯೆ?

ಇಡೀ ಕರ್ನಾಟಕ ಕರಾವಳಿಯಲ್ಲಿ ಈ ಸಮಸ್ಯೆ ಇದೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ಉಡುಪಿ ಜಿಲ್ಲೆಯ ಮಲ್ಪೆ, ಗಂಗೊಳ್ಳಿ, ಉತ್ತರ ಕನ್ನಡ ಜಿಲ್ಲೆಯ ಭಟ್ಕಳ, ಹೊನ್ನಾವರ, ತದಡಿ, ಕಾರವಾರ ಸಹಿತ ಎಲ್ಲ ಕಡೆಗಳಲ್ಲಿ ಬಹುತೇಕ ಮೀನುಗಾರರು ಕಡಲಿಗಿಳಿಯುತ್ತಿಲ್ಲ. ಬಹುತೇಕ ಪರ್ಸಿನ್, ಟ್ರಾಲ್ ಬೋಟುಗಳು, ಸಣ್ಣ ಟ್ರಾಲ್ ಬೋಟುಗಳೂ ದಡದಲ್ಲಿ ಲಂಗರು ಹಾಕಿದ ಸ್ಥಿತಿಯಲ್ಲಿವೆ. ಕಳೆದ ಮೂರು ದಿನಗಳಿಂದ ನಾಡ ದೋಣಿಗಳೂ ಕಡಲು ಮುಟ್ಟಿಲ್ಲ.

ಏನು ಸಮಸ್ಯೆ?

ಮೀನುಗಾರಿಕೆಗೆ ತೆರಳಲು ಗಂಟೆಗೆ 7ರಿಂದ 15 ಕಿ.ಮೀನಷ್ಟು ಗಾಳಿಯ ವೇಗ ಇರಬೇಕು. ಹಾಗಿದ್ದರೆ, ಬೋಟುಗಳು ಸಮುದ್ರದ ಮಧ್ಯೆ ಸಾಗಲು ಅನುಕೂಲವಾಗುತ್ತದೆ. ಸಾಮಾನ್ಯವಾಗಿ ಗಂಟೆಗೆ ವೇಗ ಅಷ್ಟೇ ಇರುತ್ತದೆ. ಸ್ವಲ್ಪ ಹೆಚ್ಚು ಕಮ್ಮಿ ಆಗಬಹುದು. ಆದರೆ ಇತ್ತೀಚೆಗೆ ವೇಗ ಜಾಸ್ತಿಯಾಗಿದೆ. ಗಾಳಿಯ ವೇಗಕ್ಕೆ ಮೀನುಗಾರರು ತತ್ತರಗೊಂಡಿದ್ದಾರೆ.

ಇದೀಗ ಸಮುದ್ರದಲ್ಲಿ ಗಂಟೆಗೆ 28ರಿಂದ 32 ಕಿ.ಮೀ.ವರೆಗೆ ವೇಗದಲ್ಲಿ ಗಾಳಿ ಬೀಸುತ್ತಿದ್ದು, ಬೆಳಗಿನ ಜಾವದಲ್ಲಿ ಸುಮಾರು 11 ಗಂಟೆವರೆಗೆ ಗಂಟೆಗೆ 14ರಿಂದ 21 ಕಿ.ಮೀ. ವೇಗವಿದೆ. ಸಂಜೆ ಇದು ಅಧಿಕವಾಗುತ್ತಿದ್ದು, ಹೀಗಾಗಿ ಮೀನುಗಾರರು ಬಲೆ ಹಾಕಲು ಹಿಂದೇಟು ಹಾಕುತ್ತಿದ್ದಾರೆ.

ಅಲೆಗಳ ಅಬ್ಬರ:

ಇದೇ ರೀತಿ ಸಮುದ್ರದಲ್ಲಿ ಅಲೆಗಳ ಅಬ್ಬರವೂ ಜಾಸ್ತಿ ಇದೆ. ಬೀಚ್ ಗೆ ತೆರಳುವ ಮಂದಿಗೆ ಇದರ ತೀವ್ರತೆ ಅಷ್ಟೊಂದು ಗೊತ್ತಾಗದೇ ಇದ್ದರೂ ಮೊದಲಿಗಿಂತ ಜಾಸ್ತಿ ಕಾಣಿಸತೊಡಗಿದೆ. ಹೀಗಾಗಿ ಪ್ರವಾಸಕ್ಕೆ ತೆರಳುವವರು ಹುಚ್ಚಾಟಕ್ಕೆ ಕಡಿವಾಣ ಹಾಕಿ, ನೀರು ಕಂಡೊಡನೆ ಹಾರಿ, ಮುಂದೆ ಹೋಗುವುದು, ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದಕ್ಕೆ ಕಡಿವಾಣ ಹಾಕುವುದು ಒಳಿತು ಎಂದು ಸಮುದ್ರ ರಕ್ಷಕರು ಹೇಳುತ್ತಾರೆ.