ಹೆಮ್ಮಾಡಿ: ವ್ಯಕ್ತಿಯೋರ್ವನ ಮೃತದೇಹ ಬುಧವಾರ ಬೆಳಗ್ಗೆ ಹೆಮ್ಮಾಡಿ ಸಮೀಪದ ಮೂವತ್ತುಮುಡಿ ನದಿಯಲ್ಲಿ ಪತ್ತೆಯಾಗಿದೆ. ಪಡುಕೋಣೆ ನಿವಾಸಿ ನಾರಾಯಣ ಚಂದನ್ (60) ಮೃತ ದುರ್ದೈವಿ. ಪತ್ನಿಯ ಮನೆಗೆ ಹೋಗುತ್ತೇನೆಂದು ಸೋಮವಾರ ಪಡುಕೋಣೆಯ ತಮ್ಮ ಮನೆಯಿಂದ ತೆರಳಿದ್ದ ನಾರಾಯಣ ಚಂದನ್ ಸಂಜೆ ಅರಾಟೆಯಲ್ಲಿರುವ ತಮ್ಮ ಪತ್ನಿಯ ಮನೆಗೆ ಬಂದಿದ್ದರು. ವೃದ್ದಾಪ್ಯ ವೇತನಕ್ಕೆ ಅರ್ಜಿ ಸಲ್ಲಿಸುವ ತರಾತುರಿಯಲ್ಲಿದ್ದ ಅವರು ರಾತ್ರಿ ಪತ್ನಿಯ ಮನೆಯಲ್ಲೇ ಉಳಿದುಕೊಂಡಿದ್ದು, ಮಂಗಳವಾರ ಬೆಳಗ್ಗೆ ಪತ್ನಿಯ ಮನೆಯಿಂದ ವೃದ್ದಾಪ್ಯ ವೇತನಕ್ಕೆ ಅರ್ಜಿ ನೀಡಲು ತೆರಳುತ್ತೇನೆಂದು ಹೇಳಿ ಹೋದವರು ಮತ್ತೆ ಮನೆಗೆ ವಾಪಾಸ್ಸಾಗಿರಲಿಲ್ಲ. ಬುಧವಾರ ಬೆಳಗ್ಗೆ ನಾರಾಯಣ್ ಚಂದನ್ ಮೃತದೇಹ ಮೂವತ್ತುಮುಡಿಯ ಕಿರು ಸೇತುವೆ ಬಳಿಯ ಚಕ್ರಾನದಿಯಲ್ಲಿ ಪತ್ತೆಯಾಗಿದೆ. ಕೂಡಲೇ ಸ್ಥಳೀಯರು ಕುಂದಾಪುರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕಾಗಮಿಸಿದ ಕುಂದಾಪುರ ಠಾಣೆಯ ಎಎಸ್‍ಐ ಸುಧಾಕರ್ ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಸಹಾಯದಿಂದ ಮೃತದೇಹವನ್ನು ಮೇಲಕ್ಕೆತ್ತಿ ಗಂಗೊಳ್ಳಿಯ ಆಪತ್ಭಾಂಧವ ಆಂಬುಲೆನ್ಸ್ ಮೂಲಕ ಶವಾಗಾರಕ್ಕೆ ಕೊಂಡೊಯ್ದಿದ್ದಾರೆ. ನಾರಾಯಣ್ ಚಂದನ್ ಈ ಹಿಂದೆ ಬೆಂಗಳೂರಿನ ಹೋಟೆಲ್‍ವೊಂದರಲ್ಲಿ ದುಡಿಯುತ್ತಿದ್ದು, ಕಳೆದ ವರ್ಷವಷ್ಟೇ ಅನಾರೋಗ್ಯದಿಂದ ಕೆಲಸ ಬಿಟ್ಟು ಮನೆಗೆ ಮರಳಿದ್ದರು ಎನ್ನಲಾಗಿದೆ.
ಬಳಿಕ ಕೆಲಸಕ್ಕೆ ಹೋಗದೆ ನಾರಾಯಣ್ ಮನೆಯಲ್ಲೇ ಇದ್ದಿದ್ದರು. ಅನಾರೋಗ್ಯದಿಂದ ಖಿನ್ನತೆಗೊಳಗಾಗಿರುವ ಅವರು ಕಾಲು ಜಾರಿ ನದಿಗೆ ಬಿದ್ದರಬಹುದೆಂದು ಶಂಕಿಸಲಾಗಿದೆ. ಈ ಬಗ್ಗೆ ಕುಂದಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ನಾರಾಯಣ ಚಂದನ್ ನಾಲ್ವರು ಪುತ್ರಿಯರು, ಓರ್ವ ಪುತ್ರ ಹಾಗೂ ಪತ್ನಿಯನ್ನು ಅಗಲಿದ್ದಾರೆ.