ʼದಿ ಕೇರಳ ಸ್ಟೋರಿʼಗೆ ʼಎʼ ಸರ್ಟಿಫಿಕೇಟ್:‌10 ದೃಶ್ಯಗಳಿಗೆ ಕತ್ತರಿ ಹಾಕಿದ ಸೆನ್ಸಾರ್‌ ಬೋರ್ಡ್

ಕೊಚ್ಚಿ: ಕಳೆದ ವರ್ಷ ಟೀಸರ್‌ ರಿಲೀಸ್‌ ಆದಾಗಿನಿಂದಲೂ ಭಾರೀ ಸದ್ದು ಮಾಡಿದ ʼದಿ ಕೇರಳ ಸ್ಟೋರಿʼ ಇತ್ತೀಚೆಗೆ ಟ್ರೇಲರ್‌ ಮೂಲಕ ದೇಶದ ಗಮನ ಸೆಳೆದಿದೆ. ಇನ್ನೇನು ಸಿನಿಮಾ ತೆರೆಗೆ ಬರಲು ದಿನಗಣನೆ ಬಾಕಿ ಉಳಿದಿದೆ.

ರಿಲೀಸ್‌ ಗೂ ಮುನ್ನ ಚಿತ್ರದ ಬಗ್ಗೆ ಪರ – ವಿರೋಧ ಮಾತುಗಳು ಕೇಳಿ ಬರುತ್ತಿದೆ. ಸುದೀಪ್ತೋ ಸೆನ್‌ ನಿರ್ದೇಶನದ ಸಿನಿಮಾಕ್ಕೆ ಕೇರಳದಲ್ಲೇ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಸಿನಿಮಾ ನಿಷೇಧ ಮಾಡುವಂತೆ ಸಿಪಿಎಂ ನೇತೃತ್ವದ ಎಲ್‌ಡಿಎಫ್, ಕಾಂಗ್ರೆಸ್‌ ನೇತೃತ್ವದ ಯುಡಿಎಫ್ ಒತ್ತಾಯಿಸುತ್ತಿವೆ. ಇದರ ಜತೆಗೆ ಕೇರಳದ ಸಂಸ್ಕೃತಿ ಸಚಿವ ಸಾಜಿ ಚೆರಿಯನ್‌ ಈಗಾಗಲೇ ಸಿನಿಮಾ ನಿಷೇಧದ ಬಗ್ಗೆ ಮಾತನಾಡಿದ್ದಾರೆ.

ಈ ನಡುವೆ ಸಿನಿಮಾಕ್ಕೆ ಸೆನ್ಸಾರ್‌ ಬೋರ್ಡ್‌ ʼಎʼ ಸರ್ಟಿಫಿಕೇಟ್‌ ನೀಡಿ, 10 ದೃಶ್ಯಗಳಿಗೆ ಕತ್ತರಿ ಹಾಕಿದೆ. ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ ಸಿನಿಮಾವನ್ನು ನೋಡಿ, ʼಎʼ ಸರ್ಟಿಫಿಕೇಟ್‌ ನೀಡಿದೆ.

ಯಾವೆಲ್ಲಾ ದೃಶಕ್ಕೆ ಕತ್ತರಿ:  10 ದೃಶ್ಯಗಳಿಗೆ ಸೆನ್ಸಾರ್‌ ಬೋರ್ಡ್‌ ಕತ್ತರಿ ಹಾಕಿದೆ. ಮುಖ್ಯವಾಗಿ ಕೇರಳದ ಮಾಜಿ ಸಿಎಂ ವಿಎಸ್ ಅಚ್ಯುತಾನಂದನ್ ಅವರು ಸಂದರ್ಶನವೊಂದರಲ್ಲಿ ಮತಾಂತರದ ಬಗ್ಗೆ ಮಾತಾನಾಡುವ ಸಂಪೂರ್ಣ ದೃಶ್ಯವನ್ನು ತೆಗೆದು ಹಾಕುವಂತೆ ಹೇಳಿದೆ. ಹಿಂದೂ ದೇವರಿಗೆ ಸಂಬಂಧಿಸಿದ ಡೈಲಾಗ್ಸ್‌, “ಭಾರತೀಯ ಕಮ್ಯುನಿಸ್ಟರು ದೊಡ್ಡ ಬೂಟಾಟಿಕೆವುಳ್ಳವರು ಎನ್ನುವ ಡೈಲಾಗ್ಸ್‌ ಸೇರಿದಂತೆ 10 ದೃಶ್ಯಗಳನ್ನು ಸೆನ್ಸಾರ್‌ ಬೋರ್ಡ್‌ ತೆಗೆದು ಹಾಕಿದೆ.

ಸಾಕ್ಷ್ಯ ನೀಡಿದರೆ 11 ಲಕ್ಷ ರೂ.:

“32,000 ಯುವತಿಯರು ಇಸ್ಲಾಂಗೆ ಮತಾಂತರವಾಗಿ, ಐಸಿಸ್‌ಗೆ ಸೇರ್ಪಡೆಯಾದರು ಎಂದು ಸಿನಿಮಾದ ಟ್ರೇಲರ್‌ ನಲ್ಲಿ ಹೇಳಲಾಗಿದೆ. ಈ ರೀತಿ ಆದ 32,000 ಅಲ್ಲ , 32 ಮಹಿಳೆಯರ ಬಗ್ಗೆ ಸಾಕ್ಷ್ಯ ನೀಡಿದರೆ 11 ಲಕ್ಷ ರೂ. ನೀಡುತ್ತೇನೆ,’ ಎಂದು ವಕೀಲ, ನಟ ಸಿ.ಶುಕ್ಕೂರ್‌ ಸವಾಲು ಹಾಕಿದ್ದಾರೆ.

ಇದಲ್ಲದೇ ಕೇರಳದ ಮುಸ್ಲಿಂ ಯೂತ್ ಲೀಗ್ 32,000 ಮಲಯಾಳಿ ಮಹಿಳೆಯರು ಐಎಸ್ ಉಗ್ರಗಾಮಿಗಳಾಗಿದ್ದಾರೆ ಎಂದು ಸಾಬೀತುಪಡಿಸುವವರಿಗೆ 1 ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದೆ.

ಟೀಸರ್‌ ನಲ್ಲಿ ಹೇಳಲಾದ ವಿಚಾರಗಳು ನಿಜವಾಗಿದ್ದರೆ ಅದರ ಕುರಿತಾದ ಸೂಕ್ತ ದಾಖಲೆಗಳನ್ನು ನೀಡಿ ಎಂದು ಚಿತ್ರತಂಡಕ್ಕೆ ಸೆನ್ಸಾರ್‌ ಬೋರ್ಡ್‌ ಹೇಳಿದೆ ಎಂದು ವರದಿ ತಿಳಿಸಿದೆ.

ಇದೇ ಮೇ 5 ರಂದು ಸಿನಿಮಾ ತೆರೆಗೆ ಬರಲಿದೆ.