ಕಾರ್ಕಳ: ಬಜರಂಗದಳವನ್ನು ನಿಷೇಧಿಸುವುದು ಸೇರಿದಂತೆ ಕಾನೂನು ಕ್ರಮ ತೆಗೆದುಕೊಳ್ಳುವ ವಿಚಾರವನ್ನು ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿದೆ. ಡಿ. ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯನವರು ನಾವು ಪಿಎಫ್ಐ ನಿಷೇಧ ಮಾಡಿದ್ದೇವೆಂಬ ಸಂಕಟ ಹಾಗೂ ದ್ವೇಷವನ್ನು ಬಜರಂಗದಳ ನಿಷೇಧದ ಮೂಲಕ ತೀರಿಸಿಕೊಳ್ಳಲು ಹೊರಟಿದ್ದಾರೆ ಎಂದು ಕಾರ್ಕಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಚಿವ ವಿ.ಸುನೀಲ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಕಾಂಗ್ರೆಸ್ಸಿನ ಬಜರಂಗ ದಳ ನಿಷೇಧ ಭರವಸೆ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು ಡಿಕೆಶಿ ಮತ್ತು ಸಿದ್ದರಾಮಯ್ಯನವರೇ ನಾವು ಪಿಎಫ್ಐ ನಿಷೇಧಿಸಿದ ಸಂಕಟ ಮತ್ತು ದ್ವೇಷದಲ್ಲಿ ಬಜರಂಗದಳ ನಿಷೇಧಿಸಲು ಹೊರಟಿದ್ದೀರಾ ಎಂದು ಕೇಳಿದ್ದಾರೆ. ನಿಮ್ಮ ಹಿಂದು ವಿರೋಧಿ ನಿಲುವಿಗೆ ಧಿಕ್ಕಾರ. ಬಜರಂಗದಳ ಎನ್ನುವುದು ಸಮಾಜ ವಿರೋಧಿ ಸಂಘಟನೆಯಲ್ಲ. ಹಿಂದು ಸಮಾಜದ ರಕ್ಷಣೆಗಾಗಿ, ಗೋ ಮಾತೆಯ ಹಿತಕ್ಕಾಗಿ, ಹಿಂದು ಸೋದರಿಯರ ಮಾನ, ಸಮ್ಮಾನ ಸಂರಕ್ಷಣೆಗಾಗಿ ಎಂಥ ತ್ಯಾಗಕ್ಕೂ ಸಿದ್ಧವಾಗಿರುವ ಕಾರ್ಯಕರ್ತರ ಪಡೆ. ಮುಸ್ಲಿಂಮರ ಓಲೈಕೆಗಾಗಿ ಬಜರಂಗದಳ ನಿಷೇಧಿಸುತ್ತೇವೆಂಬ ದಾಷ್ಟ್ಯವೇ ಎಂದು ಇನ್ನೊಂದು ಟ್ವೀಟ್ನಲ್ಲಿ ಪ್ರಶ್ನಿಸಿದ್ದಾರೆ.
ಪಿಎಫ್ಐ ಒಂದು ಭಯೋತ್ಪಾದಕ ಸಂಘಟನೆ ಎಂಬ ಕಾರಣಕ್ಕೆ ನಿಷೇಧ ಮಾಡಿದ್ದೇವೆ. ಬಜರಂಗ ದಳ ಹಾಗೂ ಪಿಎಫ್ಐಯನ್ನು ಒಂದೇ ತಕ್ಕಡಿಯಲ್ಲಿ ಅಳತೆ ಮಾಡುವ ಕಾಂಗ್ರೆಸಿಗರ ಮನಸು ರೋಗಗ್ರಸ್ತವಾಗಿದೆ. ಬಜರಂಗದಳ ಹಿಂದು ಸಮಾಜ ಮತ್ತು ದೇಶ ಹಿತದ ಸಂಘಟನೆಯಾಗಿದೆ. ದೇಶಪ್ರೇಮವನ್ನು ಕಾಂಗ್ರೆಸ್ ನಿಷೇಧಿಸುತ್ತದೆಯೇ? ಎಂದು ಕೇಳಿದ್ದಾರೆ.