ಕಾರ್ಕಳ: ಬಿಜೆಪಿ ವತಿಯಿಂದ ವಿಶೇಷ ಮಹಾ ಪ್ರಚಾರ ಅಭಿಯಾನ ಕಾರ್ಕಳ ವಿಧಾನ ಸಭಾ ಕ್ಷೇತ್ರದಾದ್ಯಂತ ರವಿವಾರ ನಡೆಯಿತು. ಹಿರಿಯರು, ಕಿರಿಯರು, ಮಹಿಳೆಯರೂ ಎನ್ನದೆ ಹತ್ತು ಸಾವಿರಕ್ಕೂ ಮಿಕ್ಕಿದ ಕಾರ್ಯಕರ್ತರು ಮತ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದು ಗಮನ ಸೆಳೆಯಿತು.
ಕಾರ್ಕಳ, ಹೆಬ್ರಿ ತಾಲೂಕುಗಳ 34 ಗ್ರಾಮ ಪಂಚಾಯತ್ ವ್ಯಾಪ್ತಿಯ 209 ಬೂತ್‌ಗಳಲ್ಲಿ, ಪ್ರತಿ ಬೂತ್‌ಗಳಲ್ಲಿ 75 ರಿಂದ 100 ಮಂದಿ ಕಾರ್ಯಕರ್ತರು ಸೇರಿ ಪ್ರಚಾರ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.
ಸಹಸ್ರಾರು ಕಾರ್ಯಕರ್ತರು ಕ್ಷೇತ್ರದ ಪ್ರತಿ ಮನೆಗಳಿಗೆ ತೆರಳಿ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರಕಾರದ ಸಾಧನೆ, ಕ್ಷೇತ್ರದಲ್ಲಿ ಶಾಸಕ, ಸಚಿವ ವಿ. ಸುನಿಲ್ ಕುಮಾರ್ ಅವರು ಕಳೆದ 5 ವರ್ಷಗಳಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮತದಾರರಿಗೆ ಮನವರಿಕೆ ಮಾಡಿದರು. ಮುಳುಗು ಸೇತುವೆಗಳಿಗೆ ಮುಕ್ತಿ, ಪ್ರತಿ ಹಳ್ಳಿಗಳನ್ನು ಸಂಪರ್ಕಿಸುವ ರಸ್ತೆಗಳ ಅಭಿವೃದ್ಧಿ, ಪ್ರತಿ ಮನೆಗೂ ಕುಡಿಯುವ ನೀರು, ಅಂತರ್ಜಲ ಮಟ್ಟ ಏರಿಕೆಗೆ 209 ಕಿಂಡಿ ಅಣೆಕಟ್ಟು ನಿರ್ಮಾಣ, ಆಸ್ಪತ್ರೆಗಳಲ್ಲಿ ಐಸಿಯು, ಮಕ್ಕಳ ಐಸಿಯು ಘಟಕ, ಕೊರೊನಾ ಸಂದರ್ಭ ಆರೋಗ್ಯ ನಿರ್ವಹಣೆ, ಮಕ್ಕಳ ಕಲಿಕೆಗೆ ಮಗ್ಗಿ ಪುಸ್ತಕ ವಿತರಣೆ, ವಾತ್ಸಲ್ಯ ಯೋಜನೆಯಡಿ ಮಕ್ಕಳ ಆರೋಗ್ಯ ತಪಾಸಣೆ, ಶಾಲೆಗಳ ಕಟ್ಟಡ ಉನ್ನತೀಕರಣ, ಐಟಿಐ ಕಾಲೇಜು, ಜರ್ಮನ್ ತಾಂತ್ರಿಕ ತರಬೇತಿ ಸಂಸ್ಥೆ, ಯಕ್ಷರಂಗಾಯಣ, ಸ್ವರ್ಣ ನದಿಗೆ ಅಣೆಕಟ್ಟು, 25 ಸಾವಿರಕ್ಕೂ ಅಧಿಕ ಇಂಗುಗುಂಡಿ ನಿರ್ಮಾಣ, ಮೊರಾರ್ಜಿ, ವಸತಿ ಶಾಲೆ, ಪಾಲಿಟೆಕ್ನಿಕ್ ಕಾಲೇಜು ಹೀಗೆ ಶಿಕ್ಷಣ, ಉದ್ಯೋಗಕ್ಕೆ ಒತ್ತು ನೀಡಿದ ಬಗ್ಗೆ ಹಾಗೂ ಬಡವರಿಗೆ 94ಸಿ 94 ಸಿಸಿಯಲ್ಲಿ ಹಕ್ಕುಪತ್ರ ವಿತರಣೆ, ಸರಕಾರಿ ಕಟ್ಟಡಗಳ ಆಧುನೀಕರಣ, ಪ್ರತಿ ಗ್ರಾಮಗಳಲ್ಲಿ ಸಮುದಾಯ ಭವನ ನಿರ್ಮಾಣ, ದೈವ-ದೇವಸ್ಥಾನಗಳ ಅಭಿವೃದ್ಧಿಗೆ ಅನುದಾನ ಹಾಗೂ ಕಾರ್ಕಳ ಉತ್ಸವ, ಪರಶುರಾಮ ಥೀಂ ಪಾರ್ಕ್, ಪಾರ್ಕ್‌ಗಳ ನಿರ್ಮಾಣ ಕೆರೆಗಳ ಅಭಿವೃದ್ಧಿಗಳ ಕುರಿತು ವಹಿಸಿದ ಕಾಳಜಿಯ ಸಮಗ್ರ ಮಾಹಿತಿಯನ್ನು ಮತದಾರರಿಗೆ ನೀಡಿ ಈ ಬಾರಿಯ ಚುನಾವಣೆಯಲ್ಲಿ ಮತೊಮ್ಮೆ ಬಿಜೆಪಿ ಅಭ್ಯರ್ಥಿ ವಿ ಸುನಿಲ್‌ಕುಮಾರ್ ಅವರಿಗೆ ಮತ ನೀಡಿ ಗೆಲ್ಲಿಸುವಂತೆ ತಿಳಿಸಿದರು.
ಕಾಂಗ್ರೆಸ್ಸಿನ ಸುಳ್ಳು ಗ್ಯಾರಂಟಿ ಕಾರ್ಡ್ ಬಗ್ಗೆ ಜನ ನಂಬದಂತೆ ಹಾಗೂ ಅವರ ಅಪಪ್ರಚಾರಗಳಿಗೆ ಕಿವಿಗೊಡದೆ ಅಭಿವೃದ್ಧಿಯನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಕಣ್ಣು ಕೋರೈಸುವ ಬಿಸಿಲನ ವಾತಾವರಣದಲ್ಲೂ ಉತ್ಸಾಹ ಕಳೆದುಕೊಳ್ಳದೆ ನೀರು, ಮಜ್ಜಿಗೆ, ತಂಪುಪಾನೀಯ ಸೇವಿಸಿ ಬಾಯಾರಿಕೆ ನೀಗಿಸುತ್ತ ಎಲ್ಲರೂ ಉತ್ಸಾಹದಿಂದ ಕೇಸರಿ ಶಾಲು, ಟೋಪಿ, ಕರಪತ್ರಗಳನ್ನು ಹಿಡಿದು ಮನೆಮನೆಗೆ ತೆರಳಿದರು.
ಬಿಜೆಪಿ ಅಭ್ಯರ್ಥಿ ವಿ. ಸುನಿಲ್ ಕುಮಾರ್, ಕ್ಷೇತ್ರ ಬಿಜೆಪಿ ಸಮಿತಿ, ವಿವಿಧ ಮೋರ್ಚಾ, ಘಟಕದ ಪದಾಧಿಕಾರಿಗಳು, ಬೂತ್ ಮಟ್ಟದ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.












