ಮಣಿಪಾಲ: ಡಾ| ಟಿಎಂಎ ಪೈ ಅವರ ಸತತ ಪ್ರಯತ್ನ ಶೀಲತೆಯಿಂದಾಗಿ ಇಂದು ಮಣಿಪಾಲವನ್ನು ಪ್ರಪಂಚವೇ ಕಣ್ಣೆತ್ತಿ ನೋಡುವಂತಾಗಿದೆ ಮತ್ತು ಉಡುಪಿಗೆ ಮಣಿಪಾಲ ಒಂದು ಹೆಮ್ಮೆಯ ಸಂಕೇತವಾಗಿದೆ ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಹೇಳಿದರು.
ಮಣಿಪಾಲ ಸಮೂಹ ಸಂಸ್ಥೆಗಳ ವತಿಯಿಂದ ಹೊಟೇಲ್ ವ್ಯಾಲಿವ್ಯೂ ಸಭಾಂಗಣದಲ್ಲಿ ರವಿವಾರ ನಡೆದ ಸಂಸ್ಥಾಪಕರ ದಿನಾಚರಣೆಯಲ್ಲಿ (ಡಾ| ಟಿಎಂಎ ಪೈ ಅವರ 125ನೇ ಜನ್ಮದಿನ) ಮುಖ್ಯ ಅತಿಥಿಯಾಗಿ ಭಾಗವಹಿಸಿ ಆಶೀರ್ವಚನ ನೀಡಿದ ಶ್ರೀಪಾದರು, ಒಬ್ಬ ವ್ಯಕ್ತಿಯ ಜನ್ಮದಿನವನ್ನು ಸಾಮೂಹಿಕವಾಗಿ ಆಚರಿಸುವ ಹಿಂದೆ ಅವರು ಸಮಾಜಕ್ಕೆ ನೀಡಿದ ಕೊಡುಗೆ ಇರುತ್ತದೆ ಎಂದರು.
ಮಣ್ಣ ಪಳ್ಳದಂತಹ (ಮಣ್ಣಿನ ಹಳ್ಳ) ಪ್ರದೇಶದಲ್ಲಿ ಡಾ| ಪೈಯವರು ಕಂಡ ಹತ್ತು ಹಲವು ಕನಸುಗಳು ನನಸಾಗುವುದಕ್ಕೆ ಅವರ ಪ್ರಯತ್ನವಿದೆ. ಇದಕ್ಕಾಗಿ ಪ್ರಪಂಚವೇ ಮಣಿಪಾಲವನ್ನು ಅಚ್ಚರಿಯಿಂದ ನೋಡುವಂತಾಗಿದೆ ಎಂದು ಹೇಳಿದರು.
ಎಸೆಸೆಲ್ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದವರಿಗೆ ಪ್ಲಂಬಿಂಗ್, ಕಾಪೆìಂಟರಿ ಮೊದಲಾದ ವೃತ್ತಿ ಕೌಶಲ ಹೆಚ್ಚಿಸಲು 1940ರ ದಶಕದಲ್ಲಿಯೇ ಡಾ| ಟಿಎಂಎ ಪೈಯವರು ಅಕಾಡೆಮಿ ಆಫ್ ಜನರಲ್ ಎಜುಕೇಶನ್ (ಎಜಿಇ) ಸಂಸ್ಥೆಯನ್ನು ಹುಟ್ಟುಹಾಕಿದರು. ಈಗ ಹೊಸ ಶಿಕ್ಷಣ ನೀತಿಯಡಿ ಕೌಶಲಾಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. 1953ರಲ್ಲಿ ದೇಶದ ಮೊದಲ ಪಬ್ಲಿಕ್ ಪ್ರೈವೇಟ್ ಪಾರ್ಟ್‌ನರ್‌ಶಿಪ್ (ಪಿಪಿಪಿ) ಮಾದರಿಯ ವೈದ್ಯಕೀಯ ಕಾಲೇಜನ್ನು ಮಣಿಪಾಲದಲ್ಲಿ ಆರಂಭಿಸಿದರು. ಈಗ ಪಿಪಿಪಿ ಮಾದರಿ ರಾಷ್ಟ್ರದ ನೀತಿಯಾಗಿದೆ. ಜನಸಂಖ್ಯೆಯನ್ನು ದೇಶದ ಸಂಪತ್ತಾಗಿ ರೂಪಿಸುವ ಕನಸು ಕಂಡವರು ಡಾ| ಪೈ. ಇಂತಹವರೇ ದೂರದೃಷ್ಟಿಯುಳ್ಳವರು ಎಂದು ಸ್ವಾಗತಿಸಿದ ಮಾಹೆ ಸಹಕುಲಾಧಿಪತಿ, ಎಜಿಇ ಅಧ್ಯಕ್ಷ ಡಾ| ಎಚ್.ಎಸ್. ಬಲ್ಲಾಳ್ ಹೇಳಿದರು.
ಡಾ| ಟಿಎಂಎ ಪೈಯವರ ಜೀವನ ಗಾಥೆಯನ್ನು ಮಾಹೆ ಕುಲಪತಿ ಲೆ| ಜ| ಡಾ| ಎಂ.ಡಿ. ವೆಂಕಟೇಶ್ ಸ್ಮರಿಸಿ ಇಂದು ಭಾರತ ಸರಕಾರದಿಂದ ಮಾನ್ಯತೆ ಪಡೆದ ಶ್ರೇಷ್ಠ ಸಂಸ್ಥೆಯಾಗಿದೆ. ವಿದೇಶಗಳಲ್ಲಿಯೂ ಕ್ಯಾಂಪಸ್ ಹೊಂದಿದೆ ಎಂದರು.
ಮಾಹೆ ಪ್ರಸಾರಾಂಗವಾದ ಮಣಿಪಾಲ್ ಯುನಿವರ್ಸಲ್ ಪ್ರಸ್ (ಎಂಯುಪಿ) ಮರುಮುದ್ರಿಸಿದ ಮೂಲ್ಕಿ ವಿಜಯಾ ಕಾಲೇಜಿನ ಡಾ| ಅಡ್ಯನಡ್ಕ ಕೃಷ್ಣ ಭಟ್ ಸಂಪಾದಿಸಿದ್ದ ಡಾ| ಪೈಯವರ ಸಾಧನೆಗಳನ್ನು ವಿವರಿಸುವ “ಸುದರ್ಶನ’ ಕೃತಿಯನ್ನು ಸ್ವಾಮೀಜಿ ಬಿಡುಗಡೆಗೊಳಿಸಿದರು.
ಎಜಿಇ ಕುಲಸಚಿವ, ಮಣಿಪಾಲ್ ಎಜುಕೇಶನ್ ಆ್ಯಂಡ್ ಮೆಡಿಕಲ್ ಗ್ರೂಪ್ (ಎಂಇಎಂಜಿ) ಅಧ್ಯಕ್ಷ ಡಾ| ರಂಜನ್ ಪೈಯವರು ಸ್ವಾಮೀಜಿಯವರನ್ನು ಗೌರವಿಸಿದರು. ಮಾಹೆ ಟ್ರಸ್ಟಿ ವಸಂತಿ ಆರ್. ಪೈ, ಮಣಿಪಾಲ್ ಮೀಡಿಯಾ ನೆಟ್‌ವರ್ಕ್ ಲಿ., ಕಾರ್ಯನಿರ್ವಾಹಕ ಅಧ್ಯಕ್ಷ ಟಿ. ಸತೀಶ್ ಯು. ಪೈ, ಡಾ| ಟಿ.ಎಂ.ಎ. ಪೈ ಫೌಂಡೇಶನ್ ಅಧ್ಯಕ್ಷ ಟಿ. ಅಶೋಕ್ ಪೈ ಉಪಸ್ಥಿತರಿದ್ದರು. ಮಾಹೆ ಸಹಕುಲಪತಿ ಡಾ| ನಾರಾಯಣ ಸಭಾಹಿತ್ ಅತಿಥಿ ಪರಿಚಯ ಮಾಡಿದರು. ಕುಲ ಸಚಿವ ಡಾ| ಗಿರಿಧರ್ ಕಿಣಿ ವಂದಿಸಿದರು. ಗಾಂಧಿಯನ್ ಸೆಂಟರ್‌ನ ಸುಶ್ಮಿತಾ ಶೆಟ್ಟಿ ನಿರ್ವಹಿಸಿದರು. “ಸುದರ್ಶನ’ ಕೃತಿ ಕುರಿತು ಪ್ರಾಧ್ಯಾಪಕ ಡಾ| ಶ್ರೀನಿವಾಸಾಚಾರ್ಯ ವಿವರಿಸಿದರು. ಪ್ರತಿಭಾನ್ವಿತ ವಿದ್ಯಾರ್ಥಿಗಳು, ಶ್ರೇಷ್ಠ ವೃತ್ತಿಪರ ಸಿಬಂದಿಗಳನ್ನು ಪುರಸ್ಕರಿಸಲಾಯಿತು.
ನಮ್ಮ ಗುರುಗಳಿಗೂ (ಶ್ರೀ ವಿಶ್ವೇಶತೀರ್ಥ ಶ್ರೀಪಾದರು) ಡಾ| ಟಿಎಂಎ ಪೈಯವರಿಗೂ ಇದ್ದ ಬಾಂಧವ್ಯ ಲೌಕಿಕವಾದುದಲ್ಲ, ದೈವಿಕವಾದುದು. ಅವರ ಹೆಸರಿನಲ್ಲಿಯೇ ಅದು (ಅನಂತ) ಅಡಕವಾಗಿದೆ. ಯಾವುದೇ ಕಾರ್ಯ ಮಾಡುವ ಮುನ್ನ ಡಾ| ಪೈಯವರು ಗುರುಗಳಲ್ಲಿ ಚರ್ಚೆ ನಡೆಸು ತ್ತಿದ್ದರು. ಇವರಿಬ್ಬರ ಒಡನಾಟ, ಬಾಂಧವ್ಯ ಕೃಷ್ಣಾರ್ಜುನರ ಸಂಬಂಧದಂತೆ. ನಮ್ಮ ಗುರುಗಳ 93ನೇ ಜನ್ಮನಕ್ಷತ್ರದ ದಿನವಾದ ಇಂದೇ ಡಾ| ಪೈಯವರ 125ನೇ ಜನ್ಮದಿನೋತ್ಸವ ನಡೆದಿರುವುದು ಆ ಬಾಂಧವ್ಯವನ್ನು ತೋರಿಸುತ್ತದೆ












