ಮೀನು ಮುಟ್ಟಿದ ಕಾರಣಕ್ಕೆ ಮಹಾಲಕ್ಷ್ಮಿ ದೇವಸ್ಥಾನ ಪ್ರವೇಶಿಸಲು ನಿರಾಕರಿಸಿದ ರಾಹುಲ್ ಗಾಂಧಿ..!

ಉಡುಪಿ: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕಾಪು ತಾಲೂಕಿನ ಉಚ್ಚಿಲದಲ್ಲಿ ಸಂವಾದ ಕಾರ್ಯಕ್ರಮದಲ್ಲಿ ಮೀನುಗಾರ ಮಹಿಳೆಯೊಬ್ಬರು ಉಡುಗೊರೆಯಾಗಿ ಅಂಜಲ್ ಮೀನನ್ನು ನೀಡಿದ್ದರು. ಮೀನು ಸ್ವೀಕರಿಸಿ ಮಹಿಳೆಯೊಂದಿಗೆ ಫೋಟೋ ತೆಗೆಸಿಕೊಂಡ ಬಳಿಕ ಮೀನು ಮುಟ್ಟಿದ ಕಾರಣಕ್ಕೆ ರಾಹುಲ್ ಮಹಾಲಕ್ಷ್ಮಿ ದೇವಸ್ಥಾನ ಪ್ರವೇಶಿಸಲು ನಿರಾಕರಿಸಿದ ಘಟನೆ ನಡೆದಿದೆ.

ಏಪ್ರಿಲ್ 27 ರಂದು ಉಚ್ಚಿಲದಲ್ಲಿರುವ ಶ್ರೀ ಮಹಾಲಕ್ಷ್ಮಿ ದೇವಸ್ಥಾನಕ್ಕೆ ರಾಹುಲ್ ಭೇಟಿ ನೀಡಿದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ಮೀನುಗಾರರೊಂದಿಗಿನ ಸಮಾವೇಶದ ಕೊನೆಯಲ್ಲಿ ಮೀನುಗಾರ ಮಹಿಳೆಯೊಬ್ಬರು ರಾಹುಲ್ ಗಾಂಧಿ ಅವರಿಗೆ ಬೃಹತ್ ಗಾತ್ರದ ಅಂಜಲ್ ಮೀನನ್ನು ಉಡುಗೊರೆಯಾಗಿ ನೀಡಿದಾಗ ರಾಹುಲ್ ಪ್ರೀತಿಯಿಂದ ಮೀನನ್ನು ಸ್ವೀಕರಿಸಿದರು.

ಸಮಾವೇಶದ ಬಳಿಕ ಅವರನ್ನು ಮೊಗವೀರ ಸಮುದಾಯದ ಪ್ರಮುಖ ದೇವಸ್ಥಾನವಾದ ಉಚ್ಚಿಲದ ಶ್ರೀ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಭೇಟಿ ನೀಡಾಲು ಮುಂದಾದಾಗ ಪ್ರವೇಶ ದ್ವಾರದ ಬಳಿ ಬಂದ ರಾಹುಲ್ ಮೀನನ್ನು ಮುಟ್ಟಿದೆ ಎಂದು ಹೇಳಿ ದೇವಸ್ಥಾನ ಪ್ರವೇಶಿಸಲು ನಿರಾಕರಿಸಿದರು. ನಂತರ ದೇವಸ್ಥಾನದ ಅಂಗಳದಲ್ಲಿ ದೇವಸ್ಥಾನದ ಅರ್ಚಕರು ಹಾಗೂ ದೇವಸ್ಥಾನದ ಆಡಳಿತ ಸಮಿತಿಯವರು ರಾಹುಲ್ ಗಾಂಧಿ ಅವರನ್ನು ಸನ್ಮಾನಿಸಿದರು.