ಮಣಿಪಾಲ: ಜಾತಿ ಮತ್ತು ಧರ್ಮದ ಅಡೆತಡೆಗಳನ್ನು ಮೀರಿ ಕಲೆ ಜನರನ್ನು ಒಂದು ಮಾಡುತ್ತದೆ ಮತ್ತು ಏಕತೆಯ ಸಂದೇಶವನ್ನು ಹರಡುತ್ತದೆ ಎಂದು ಬಿಹಾರದ ಮಧುಬನಿ ಕಲಾವಿದರು ಹೇಳಿದರು.
ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ವಿದ್ಯಾರ್ಥಿಗಳೊಂದಿಗೆ ಮಧುಬನಿ ಕಲಾವಿದರಾದ ಸರವಣ್ ಕುಮಾರ್ ಪಾಸ್ವಾನ್, ಸಂತೋಷ್ ಕುಮಾರ್ ಪಾಸ್ವಾನ್ ಮತ್ತು ಉಜಾಲಾ ಕುಮಾರಿ ಮಾತನಾಡಿ, ಕಲೆಯು ಸಾರ್ಥಕ ಜೀವನದ ಸಾಧನವಾಗಿದೆ ಎಂದು ಹೇಳಿದರು.
ಕಲಾವಿದರು ತಮ್ಮ ಹುಟ್ಟಿನ ಆಧಾರದ ಮೇಲೆ ತಾರತಮ್ಯವನ್ನು ಎದುರಿಸುವುದು ನಿಜವಾದರೂ ಕಲೆ ಇಂತಹ ಅಡೆತಡೆಗಳನ್ನು ದಾಟಿ ಮಾನವೀಯತೆಯನ್ನು ಮಾತ್ರ ಪ್ರತಿಪಾದಿಸುತ್ತದೆ ಎಂದು ತಮ್ಮ ಜೀವನದ ಅನುಭವಗಳನ್ನು ಹೇಳಿದರು.
ತಾವು ತಯಾರಿಸಿದ ವರ್ಣಚಿತ್ರಗಳನ್ನು ಪ್ರದರ್ಶಿಸಿದ ಅವರು -ರಾಮಾಯಣ ಮತ್ತು ಮಹಾಭಾರತವು ಮಧುಬನಿ ವರ್ಣಚಿತ್ರಗಳ ಪ್ರಮುಖ ವಿಷಯಗಳಾಗಿದೆ, ಆದರೆ ಎಲ್ಲಾ ಧರ್ಮಗಳ ಏಕತೆಯನ್ನು ಬಿಂಬಿಸುವ ಸೃಜನಾತ್ಮಕ ವಿಷಯಗಳನ್ನು ಪ್ರಯೋಗಿಸಬಹುದು ಎಂದು ಹೇಳಿದರು.
ಮಧುಬನಿ ವರ್ಣಚಿತ್ರಗಳಲ್ಲಿನ ಮಿಥಿಲಾ, ಗೋಧ್ನಾ ಮತ್ತು ತಾಂತ್ರಿಕ ಶೈಲಿಗಳನ್ನು ಮತ್ತು ನೈಸರ್ಗಿಕ ಬಣ್ಣಗಳನ್ನು ತಯಾರಿಸುವ ಪ್ರಕ್ರಿಯೆಯನ್ನು ವಿವರಿಸಿದರು.
ಜಿ.ಸಿ.ಪಿ.ಎ.ಎಸ್ ಮುಖ್ಯಸ್ಥ ಪ್ರೊ.ವರದೇಶ್ ಹಿರೇಗಂಗೆ, ಕಲಾವಿದ ಡಾ.ಜನಾರ್ದನ ಹಾವಂಜೆ, ಪ್ರೊ.ಫಣಿರಾಜ್ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಜಿಸಿಪಿಎಎಸ್ ಮತ್ತು ಭಾವನಾ ಫೌಂಡೇಶನ್ ಜಂಟಿಯಾಗಿ ಆಯೋಜಿಸಿದ್ದವು. ಕಲಾವಿದರಿಂದ ಮಧುಬನಿ ಕಲಾಕಾರ್ಯಾಗಾರವು ಏಪ್ರಿಲ್ 30 ರವರೆಗೆ ನಡೆಯಲಿದೆ.