ನವದೆಹಲಿ: ಏಪ್ರಿಲ್ 22 ರಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದೆಹಲಿಯಲ್ಲಿರುವ ತಮ್ಮ ಅಧಿಕೃತ ಬಂಗಲೆಯನ್ನು ಖಾಲಿ ಮಾಡಿ ತಮ್ಮ ತಾಯಿ ಸೋನಿಯಾ ಗಾಂಧಿಯವರ ನಿವಾಸಕ್ಕೆ ತೆರಳಿದರು. ಕಳೆದ ತಿಂಗಳು ಮಾನನಷ್ಟ ಮೊಕದ್ದಮೆಯಲ್ಲಿ ಕೆಳ ನ್ಯಾಯಾಲಯವು ಶಿಕ್ಷೆ ವಿಧಿಸಿದ ನಂತರ ಲೋಕಸಭೆಯಿಂದ ಅನರ್ಹಗೊಂಡಿದ್ದರಿಂದ ಏಪ್ರಿಲ್ 22 ರೊಳಗೆ ಅಧಿಕೃತ 12, ತುಘಲಕ್ ಲೇನ್ ನಿವಾಸವನ್ನು ಖಾಲಿ ಮಾಡುವಂತೆ ಕೇಳಿಕೊಳ್ಳಲಾಗಿತ್ತು.
“ಸತ್ಯವನ್ನು ಹೇಳಿದ್ದಕ್ಕೆ ನಾನು ಬೆಲೆ ತೆರುತ್ತಿದ್ದೇನೆ, ಇದಕ್ಕಾಗಿ ಯಾವುದೇ ಬೆಲೆ ತೆರಲು ನಾನು ಸಿದ್ಧ, ”ಎಂದು ಅವರು ಹೇಳಿದರು. ಬೆಲೆ ಏರಿಕೆ ಮತ್ತು ಭ್ರಷ್ಟಾಚಾರದ ಸಮಸ್ಯೆಗಳನ್ನು ದುಪ್ಪಟ್ಟು ಬಲದಿಂದ ಪ್ರಸ್ತಾಪಿಸುವುದನ್ನು ಮುಂದುವರಿಸುತ್ತೇನೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.
ಎರಡು ದಶಕಗಳಿಂದ ತಂಗಿದ್ದ ಬಂಗಲೆಯಿಂದ ತಮ್ಮ ಎಲ್ಲ ವಸ್ತುಗಳನ್ನು ಶನಿವಾರದಂದು ಟ್ರಕ್ ನಲ್ಲಿ ತುಂಬಿಸಿ ಹೊರಕ್ಕೆ ಸ್ಥಳಾಂತರಿಸಿದರು. ರಾಹುಲ್ ತಾಯಿ ಸೋನಿಯಾ ಗಾಂಧಿ ಮತ್ತು ಸಹೋದರಿ ಪ್ರಿಯಾಂಕಾ ವಾದ್ರಾ ಬೆಳಿಗ್ಗೆ ಬಂಗಲೆಗೆ ಭೇಟಿ ನೀಡಿದರು. ತೆರವುಗೊಂಡ ಮನೆಯ ಕೀಲಿಗಳನ್ನು ಕೇಂದ್ರ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಹಸ್ತಾಂತರಿಸಿದರು.
ರಾಹುಲ್ ಸದ್ಯಕ್ಕೆ 10, ಜನಪಥ್‌ನಲ್ಲಿ ಸೋನಿಯಾ ಗಾಂಧಿ ಅವರೊಂದಿಗೆ ಸ್ವಲ್ಪ ಕಾಲ ಉಳಿದುಕೊಳ್ಳಲಿದ್ದು ನಂತರ ಬೇರೆ ಮನೆಯನ್ನು ಕಂಡುಕೊಳ್ಳಿರುವುದಾಗಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.