ಅಯೋಧ್ಯಾ: ರಾಮಮಂದಿರದ ನಿರ್ಮಾಣದ 60 ಪ್ರತಿಶತದಷ್ಟು ಪೂರ್ಣಗೊಂಡಿದ್ದು 2024 ರಲ್ಲಿ ಜನವರಿಯಲ್ಲಿ ರಾಮನು ದೇವಾಲಯದ ಮೂಲ ಗರ್ಭಗುಡಿಯನ್ನು ಸೇರಲಿದ್ದಾನೆ. ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಲಿರುವ ಬಿಲ್ಲು ಬಾಣದಿಂದ ಶಸ್ತ್ರಸಜ್ಜಿತವಾದ ಐದು ವರ್ಷದ ಬಾಲರಾಮನ ವಿಗ್ರಹವು ಗರ್ಭಗುಡಿಯಲ್ಲಿ ಸ್ಥಳವನ್ನು ಪಡೆಯಲಿದೆ ಎಂದು ಅಯೋಧ್ಯೆಯ ವರದಿಗಳು ತಿಳಿಸಿವೆ.
ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್, ಅಯೋಧ್ಯೆಯ ಸದಸ್ಯರೂ ಆಗಿರುವ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು ನಿನ್ನೆ ಅಯೋಧ್ಯೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಅರುಣ್ ಯೋಗಿರಾಜ್ ಕರ್ನಾಟಕದ ಕೃಷ್ಣ ಶಿಲೆಯನ್ನು ಬಳಸಿ 5 ವರ್ಷದ ನಿಂತಿರುವ ರಾಮನ ಮೂರ್ತಿಯನ್ನು ಕೆತ್ತಲಿದ್ದಾರೆ ಎಂದು ಹೇಳಿದರು.
ಟ್ರಸ್ಟ್ನ ಎರಡು ದಿನಗಳ ಸಭೆಯಲ್ಲಿ ಶಿಲ್ಪಕಲೆ ಕಾರ್ಯವನ್ನು ಅರುಣ್ ಅವರಿಗೆ ವಹಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಮೂರ್ತಿ ಕೆತ್ತನೆಗೆ ಕಪ್ಪು ಶಿಲೆ ಅಥವಾ ಕೃಷ್ಣ ಶಿಲೆ ಬಳಸಲಾಗುವುದು ಎಂದು ಅರುಣ್ ಯೋಗಿರಾಜ್ ಸ್ಟಾರ್ ಆಫ್ ಮೈಸೂರು ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ. “ರಾಮ್ ಲಲ್ಲಾ ವಿಗ್ರಹದ ಸೂಕ್ಷ್ಮ ವಿವರಗಳು, ವಿನ್ಯಾಸ, ಎತ್ತರ ಮತ್ತು ರೂಪವನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ ಆದರೆ ನಾನು ವಿಗ್ರಹವನ್ನು ಕೆತ್ತುತ್ತೇನೆ ಎಂದು ದೃಢಪಡಿಸಲಾಗಿದೆ” ಎಂದು ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸದೆ ಅರುಣ್ ಹೇಳಿರುವುದಾಗಿ ವರದಿ ಮಾಡಿದೆ.
ಪರಂಪರಾಗತ ಶಿಲ್ಪಕಲೆಯ ಕುಟುಂಬದ ಐದನೇ ಪೀಳಿಗೆಗೆ ಸೇರಿದ ಅರುಣ್ ರಾಜ್ ಅಭಿಜಾತ ಕಲಾವಿದ. 11 ನೇ ವಯಸ್ಸಿನಲ್ಲಿ ತನ್ನ ತಂದೆಯ ಮಾರ್ಗದರ್ಶನದಲ್ಲಿ ಶಿಲ್ಪಕಲೆ ಪ್ರಾರಂಭಿಸಿದ ಅರುಣ್ 2006 ರಲ್ಲಿ ಸ್ವತಂತ್ರ ಕಲಾವಿದರಾಗಿ ಹೊರಹೊಮ್ಮಿದರು. ಚೌಡಪ್ಪ ಆಚಾರ್, ಬಸವಣ್ಣ ಆಚಾರ್, ಬಸವಣ್ಣ ಶಿಲ್ಪಿ, ಯೋಗಿರಾಜ್ ಶಿಲ್ಪಿ ಇವರ ಕುಟುಂಬದ ಜನಪ್ರಿಯ ಕಲಾವಿದರಾಗಿದ್ದರು. ಅಜ್ಜ ಬಿ.ಬಸವಣ್ಣ ಶಿಲ್ಪಿ ಮೈಸೂರು ಒಡೆಯರ್ ಅರಮನೆಯಲ್ಲಿ ಗುರುತಿಸಿಕೊಂಡ ಕಲಾವಿದರು. ತನ್ನ ವಂಶಪಾರಂಪರ್ಯ ಕಲೆಯತ್ತ ಆಕರ್ಷಿತರಾದ ಅರುಣ್ ರಾಜ್ ಇಂದು ದೇಶಾದ್ಯಂತ ಗುರುತಿಸಿಕೊಂಡಿರುವ ಕಲಾವಿದ. ಇವರ ಕಲಾನೈಪುಣ್ಯಕ್ಕೆ ಹಲವಾರು ಪ್ರಶಸ್ತಿಗಳೂ ಸಂದಿವೆ.
ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯ ಕೇದಾರನಾಥ ದೇವಸ್ಥಾನದಲ್ಲಿ ಕುಳಿತ ಭಂಗಿಯಲ್ಲಿ ಆದಿ ಗುರು ಶಂಕರಾಚಾರ್ಯರ 12 ಅಡಿಯ 3ಡಿ ಪ್ರತಿಮೆ ಮತ್ತು ಇಂಡಿಯಾ ಗೇಟ್ನಲ್ಲಿ ಸ್ಥಾಪಿಸಲಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 30 ಅಡಿ ಪ್ರತಿಮೆ ಯೋಗಿರಾಜ್ ಅವರ ಕಲಾನೈಪುಣ್ಯಕ್ಕೆ ಹಿಡಿದ ಕೈಗನ್ನಡಿ.