ಕಾರ್ಕಳ: ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವು ಬಲಪ್ರದರ್ಶನಕ್ಕೆ ತಾಲೀಮು ಆರಂಭಿಸಿದ್ದು ಕಾಂಗ್ರೆಸ್ ಅಭ್ಯರ್ಥಿ ಮುನಿಯಾಲು ಉದಯ ಕುಮಾರ್ ಶೆಟ್ಟಿ ಕೆಪಿಸಿಸಿ ನೀಡಿರುವ ಬಿ ಫಾರಂ ಪಡೆದುಕೊಂಡು ಮುನ್ನೂರಕ್ಕೂ ಹೆಚ್ಚು ವಾಹನ ಜಾಥದ ಮೂಲಕ ಮುಂಡ್ಕೂರಿನಿಂದ ಬೆಳ್ಮಣ್, ನಿಟ್ಟೆ, ಕಾರ್ಕಳ, ಮಾರಿಗುಡಿ, ಗೊಮ್ಮಟ ಬೆಟ್ಟ ಮೂಲಕ ಸಾಗಿ ಕಾರ್ಕಳದ ತಾಲೂಕು ಕಛೇರಿ ಬಳಿ ಇರುವ ತಮ್ಮ ಕಚೇರಿಗೆ ತಲುಪಿದರು. ಬಳಿಕ ದಿ. ಗೋಪಾಲ್ ಭಂಡಾರಿಯವರ ಕಛೇರಿಗೆ ಭೇಟಿ ನೀಡಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಭಾವುಕರಾದರು.
ಈ ಸಂದರ್ಭದಲ್ಲಿ ಮಾತನಾಡಿದ ಮುನಿಯಾಲು ಉದಯ ಕುಮಾರ್ ಶೆಟ್ಟಿ, ಗೋಪಾಲ್ ಭಂಡಾರಿಯವರ ಮಾರ್ಗದರ್ಶನದಲ್ಲಿ ನಡೆದು, ಪಕ್ಷಕ್ಕೆ ನಿಷ್ಠಾವಂತನಾಗಿ ದುಡಿಯುವೆ ಎಂದ ಅವರು ಭಂಡಾರಿಯವರಿಗೂ, ವೀರಪ್ಪ ಮೊಯ್ಲಿಯವರಿಗೂ ತಪ್ಪು ಮಾಡಿಲ್ಲ ಆದರೆ ಜನರಿಗೆ ತಪ್ಪು ಸಂದೇಶ ರವಾನೆಯಾಗಿದೆ ಇನ್ನು ಮುಂದೆ ಯಾವುದೇ ತಪ್ಪು ಆಗದಂತೆ ನಡೆದುಕೊಳ್ಳುವೆ ಎಂದರು.
ಒಗ್ಗಟಿನ ಬಲ ಪ್ರದರ್ಶಿಸಿದ ಮುಖಂಡರು:
ಟಿಕೆಟ್ ಹಂಚಿಕೆಯಲ್ಲಿ ಗೊಂದಲದಲ್ಲಿದ್ದ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಗಳಾದ ಕೆಪಿಸಿಸಿ ಸದಸ್ಯ ಸುರೇಂದ್ರ ಶೆಟ್ಟಿ, ಡಿ ಆರ್ ರಾಜು , ಮುನಿಯಾಲು ಉದಯ ಕುಮಾರ್ ಶೆಟ್ಟಿ ಒಗ್ಗಟ್ಟು ಪ್ರದರ್ಶಿಸಿದರು.
ಬಳಿಕ ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಟಿಕೆಟ್ ಅಕಾಂಕ್ಷಿ ಮಂಜುನಾಥ್ ಪೂಜಾರಿ ಹಾಗೂ ನೀರೆ ಕೃಷ್ಣ ಶೆಟ್ಟಿಯವರ ಮನೆಗೆ ಬೇಟಿ ನೀಡಿದರು.
ಕಾಂಗ್ರೆಸ್ ಮುಖಂಡ ಶೇಖರ್ ಮಡಿವಾಳ, ಬ್ಲಾಕ್ ಕಾಂಗ್ರೆಸ್ ಸದಾಶಿವ ದೇವಾಡಿಗ, ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನ್ ಚಂದ್ರ , ಜಿಲ್ಲಾ ಮುಖಂಡ ಅಶೋಕ್ ಕೊಡವೂರ್, ಕಾರ್ಕಳ ಕಾಂಗ್ರೆಸ್ ವಕ್ತಾರ ಶುಭದ ರಾವ್ ಉಪಸ್ಥಿತರಿದ್ದರು.