ಬೆಳ್ತಂಗಡಿ: ಎ.17ರಂದು ರಕ್ಷಿತ್ ಶಿವರಾಮ್ ನಾಮಪತ್ರ ಸಲ್ಲಿಕೆ

ಬೆಳ್ತಂಗಡಿ: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ಅವರು ಎ.17ರಂದು ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಮಾಜಿ ಶಾಸಕ ಕೆ. ವಸಂತ ಬಂಗೇರ ಮತ್ತು ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ಕೆ. ಶೈಲೇಶ್ ಕುಮಾರ್ ಹೇಳಿದರು.

ಎ.12ರಂದು ಶ್ರೀ ಗುರುನಾರಾಯಣ ಸಂಕೀರ್ಣದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿದರು.

ನಾಮಪತ್ರ ಸಲ್ಲಿಸುವ ದಿನ ಬೆಳಿಗ್ಗೆ ಗುರುವಾಯನಕೆರೆ ಕಿನ್ಯಮ್ಮ ಯಾನೆ ಗುಣವತಿ ಅಮ್ಮ ಸಭಾಭವನದಲ್ಲಿ ಕಾರ್ಯಕರ್ತರ ಬೃಹತ್ ಸಭೆ ನಡೆಯಲಿದೆ. ಖ್ಯಾತ ವಾಗ್ಮಿ ನಿಕೇತ್ ರಾಜ್ , ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಕೆ. ಹರೀಶ್ ಕುಮಾರ್, ಮಾಜಿ ಸಚಿವ ಕೆ. ಗಂಗಾಧರ ಗೌಡ, ಪಕ್ಷದ ಹಿರಿಯ ನಾಯಕರುಗಳು, ಕಾರ್ಯಕರ್ತರು ಸೇರಿದಂತೆ 25 ಸಾವಿರ ಮಂದಿ ಭಾಗವಹಿಸಲಿದ್ದಾರೆ. ಈ ಸಭೆಯಲ್ಲಿ ಬಿಜೆಪಿಯ ಹಲವು ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಸೇರಲಿದ್ದಾರೆ. ಬಳಿಕ ಶಾಂತಿಯುತ ಮೆರವಣಿಗೆಯೊಂದಿಗೆ ಚುನಾವಣಾ ಕಚೇರಿಗೆ ಬಂದು ನಾಮಪತ್ರ ಸಲ್ಲಿಸಲಾಗುವುದು.ಈಗಾಗಲೇ ತಾಲೂಕಿನ 241 ಬೂತ್ ಗಳಲ್ಲಿ ಪಕ್ಷದ ಕಾರ್ಯಕರ್ತರು ಸಕ್ರಿಯವಾಗಿ ತೊಡಗಿಸಿಕೊಂಡು ಪಕ್ಷದ ಗ್ಯಾರಂಟಿ ಕಾರ್ಡ್ ವಿತರಿಸಲಾಗಿದೆ. ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀಡಿದ ಗ್ಯಾರಂಟಿಯಂತೆ ಪ್ರತಿ ಮನೆಯ ಒಡತಿಗೆ ಪ್ರತಿ ತಿಂಗಳು ರೂ 2000, ಮನೆಗೆ 200 ಯೂನಿಟ್ ಉಚಿತ ವಿದ್ಯುತ್,10 ಕೆ.ಜಿ. ಅಕ್ಕಿ, ನಿರುದ್ಯೋಗಿ ಯುವಕರಿಗೆ ತಿಂಗಳಿಗೆ ರೂ.3000 ನೀಡಲಾಗುವುದು ಎಂದು ಹೇಳಿದ ಬಂಗೇರ ಮತ್ತು ಶೈಲೇಶ್ ಅವರು 2013ರ ಅವಧಿಯಲ್ಲಿ ಸಿದ್ದರಾಮಯ್ಯ ಮುಖ್ಯ ಮಂತ್ರಿಯಾಗಿದ್ದ ಸಂದರ್ಭದಲ್ಲಿ ಬಡವರಿಗೆ ಹೆಚ್ಚಿನ ಪ್ರೋತ್ಸಾಹ ನೀಡಿದೆ. ಆ ಅವಧಿಯಲ್ಲಿ ಕೆ.ಎಂ.ಎಫ್ ಮೂಲಕ ರಾಜ್ಯದಲ್ಲಿ ಹೈನುಗಾರರಿಗೆ ಪ್ರತಿ ಲೀಟರ್ ಹಾಲಿಗೆ ಪ್ರೋತ್ಸಾಹಧನ ನೀಡಿದ ಫಲವಾಗಿ ಹೈನುಗಾರಿಕೆ ಕರ್ನಾಟಕ ರಾಜ್ಯ ದೇಶದಲ್ಲಿಯೇ ಮಾದರಿಯಾಗಿ ಮೂಡಿ ಬಂದಿದೆ. ಈಗ ಬಿಜೆಪಿ ಸರಕಾರ ನಂದಿನಿಯನ್ನು ಅಮುಲ್ ಜೊತಗೆ ವಿಲೀನ ಮಾಡಲು ಹೊರಟಿದೆ ಎಂದರು. ರಾಜ್ಯದಲ್ಲಿ ಹಣಕಾಸು ಸಂಸ್ಥೆಯಲ್ಲಿ ಹೆಸರು ಗಳಿಸಿದ್ದ ವಿಜಯ ಬ್ಯಾಂಕ್ ನ್ನು ಬ್ಯಾಂಕ್ ಆಫ್ ಬರೋಡದೊಂದಿಗೆ ವಿಲೀನ ಮಾಡುವ ಸಂದರ್ಭದಲ್ಲಿ ಹೋರಾಟ ಮಾಡಿದರೂ ಬಿಜೆಪಿ ಸರಕಾರ ನಷ್ಟದಲ್ಲಿದ್ದ ಬ್ಯಾಂಕ್ ಆಫ್ ಬರೋಡದೊಂದಿಗೆ ವಿಲೀನ ಮಾಡಿದೆ.ಅದರಂತೆ ಇದನ್ನು ಮಾಡಲು ಹೊರಟಿದೆ.

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರ ಬರುವುದು ಗ್ಯಾರಂಟಿ. ಸಿದ್ದರಾಮಯ್ಯರೇ ಮುಖ್ಯ ಮಂತ್ರಿ ಆಗಲಿದ್ದಾರೆ ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ರಂಜನ್ ಜಿ.ಗೌಡ, ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಸಲೀಂ ಗುರುವಾಯನಕೆರೆ, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ರಾಜಶೇಖರ್ ಶೆಟ್ಟಿ, ಪ್ರಮುಖರಾದ ಈಶ್ವರ ಭಟ್ ಎಂ, ಮನೋಹರ್ ಕುಮಾರ್ ಇಳಂತಿಲ, ಪದ್ಮನಾಭ ಸಾಲಿಯಾನ್ ಮಾಲಾಡಿ, ವಿನ್ಸೆಂಟ್ ಡಿಸೋಜ ಮಡಂತ್ಯಾರ್ ಮತ್ತು ಹಕೀಮ್ ಕೊಕ್ಕಡ ಉಪಸ್ಥಿತರಿದ್ದರು.