ಎ.17ರಂದು ಗುರ್ಮೆ ಸುರೇಶ್ ಶೆಟ್ಟಿ ನಾಮಪತ್ರ ಸಲ್ಲಿಕೆ: 25 ಸಾವಿರ ಮಂದಿ ಭಾಗಿ

ಕಾಪು: ಕಾಪು‌‌ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿ ಬಿಜೆಪಿ ಅಭ್ಯರ್ಥಿಯಾಗಿ ಎ.17ರಂದು ನಾಮಪತ್ರ ಸಲ್ಲಿಸಲಿದ್ದೇನೆ ಎಂದು ಸುರೇಶ್ ಶೆಟ್ಟಿ ಗುರ್ಮೆ ತಿಳಿಸಿದರು.

ಶನಿವಾರ ಕಾಪು ಕೆ ಒನ್ ಹೊಟೇಲ್ ಸಭಾಂಗಣದಲ್ಲಿ ಜರಗಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎ.17ರಂದು ಬೆಳಗ್ಗೆ 10 ಗಂಟೆಗೆ ಕಾಪು ಶ್ರೀ ಜನಾರ್ದನ‌‌ ದೇವಸ್ಥಾನದಲ್ಲಿ ಸಮಾವೇಶ ನಡೆಯಲಿದ್ದು, 25 ಸಾವಿರ ಮಂದಿ ಭಾಗವಹಿಸಲಿದ್ದಾರೆ.

ತಮಿಳುನಾಡು ರಾಜ್ಯ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಅವರು ಪ್ರದಾನ ಭಾಷಣ ಮಾಡಲಿದ್ದಾರೆ. ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸುನಿಲ್ ಕುಮಾರ್, ಶಾಸಕರಾದ ಲಾಲಾಜಿ ಆರ್. ಮೆಂಡನ್, ರಘುಪತಿ ಭಟ್ ಭಾಗವಹಿಸಲಿದ್ದಾರೆ.

ಸಮಾವೇಶದ ನಂತರ ಜನಾರ್ದನ ದೇವಸ್ಥಾನದಿಂದ ತಾಲೂಕು ಆಡಳಿತ ಸೌಧದವರೆಗೆ ಪಾದಯಾತ್ರೆ ಮೂಲಕ ಸಾಗಿ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಲಾಗುವುದು ಎಂದು ಮಾಹಿತಿ ನೀಡಿದರು.

ಚುನಾವಣಾ‌ ತಯಾರಿ ಪಕ್ರಿಯೆ ಚುರುಕುಗೊಂಡಿದೆ. ಪ್ರದಾನಿ ನರೇಂದ್ರ ಮೋದಿ ಅವರ ಯೋಚನೆ, ಯೋಜನೆಗಳು ನಮ್ಮ ಕೈ ಬಿಡುವುದಿಲ್ಲ. ಶಾಸಕ‌ ಲಾಲಾಜಿ ಆರ್. ಮೆಂಡನ್ ಅವಧಿಯಲ್ಲಿ ಮೂರು ಸಾವಿರ ಕೋ. ರೂ.‌ಅನುದಾನ ಕ್ಷೇತ್ರಕ್ಕೆ ತಂದಿದ್ದಾರೆ. ಕಾರ್ಯಕರ್ತರು ಸಂಘಟನಾತ್ಮಕವಾಗಿ ಪಕ್ಷದ ಗೆಲುವಿಗೆ ತೊಡಗಿಸಿಕೊಳ್ಳಲಿದ್ದಾರೆ ಎಂದರು.

ಶಾಸಕ ಲಾಲಾಜಿ. ಆರ್ ಮೆಂಡನ್ ಮಾತನಾಡಿ, ಕಾಪು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಎಲ್ಲರೂ ಒಗ್ಗೂಡಿ ಕೆಲಸ ಮಾಡುತ್ತೇವೆ. ಕಾಪು ಕ್ಷೇತ್ರದ ಅಭಿವೃದ್ಧಿಯಲ್ಲಿ ಮಾದರಿಯಾಗಿದೆ. ಸಂಘಟನೆ ಕಾರ್ಯ ಮಾಡುತ್ತ ಕಷ್ಟಪಟ್ಟು ಪಕ್ಷವನ್ನು ಬೆಳೆಸಿದ್ದೇವೆ. ಮುಂದೆಯೂ ಬೆಳೆಸುತ್ತೇವೆ ಎಂದು ತಿಳಿಸಿದರು.ಉಸ್ತುವಾರಿ, ದಿಲ್ಲಿ ಬಿಜೆಪಿ ಶಾಸಕ ವಿಜಯೇಂದ್ರ ಗುಪ್ತ ಮಾತನಾಡಿ, ಹಿಂದುತ್ವ ಮತ್ತು ಅಭಿವೃದ್ಧಿ ಅಜೆಂಡ ನಮ್ಮ ಚುನಾವಣೆಯ ಅಸ್ತ್ರವಾಗಿದೆ ಎಂದರು.

ಕಾಪು ಕ್ಷೇತ್ರ ಬಿಜೆಪಿ ಅಧ್ಯಕ್ಷ ಶ್ರೀಕಾಂತ್ ನಾಯಕ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ನಿಕಟ ಪೂರ್ವ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಪಕ್ಷದ ಮುಖಂಡರಾದ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಗಂಗಾಧರ್ ಸುವರ್ಣ, ಗೀತಾಂಜಲಿ ಸುವರ್ಣ, ಶಿಲ್ಪಾ ಸುವರ್ಣ ಪತ್ರಿಕಾಗೋಷ್ಠಿಯಲ್ಲಿದ್ದರು.