ಹೂಗ್ಲಿ ನದಿಯಡಿ ದೇಶದ ಅತ್ಯಂತ ಆಳದ ಮೆಟ್ರೋ ಓಟ ಯಶಸ್ವಿ: ಭೂಮೇಲ್ಮೈಯಿಂದ 33 ಮೀಟರ್ ಕೆಳಗೆ ಓಡಲಿದೆ ರೈಲು

ಕೋಲ್ಕತ್ತಾ: ಹೂಗ್ಲಿ ನದಿಯ ಅಡಿಯಲ್ಲಿ ಮೆಟ್ರೋ ರೈಲಿನ ಪ್ರಾಯೋಗಿಕ ಚಾಲನೆಯನ್ನು ಮಾಡಲಾಗಿದ್ದು, ಪ್ರಥಮ ಪ್ರಯೋಗ ಯಶಸ್ವಿಯಾಗಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

ಶುಕ್ರವಾರ ಪ್ರಾಯೋಗಿಕ ಚಾಲನೆಯ ನಂತರ, “ರೈಲು ನೀರಿನ ಅಡಿಯಲ್ಲಿ ಚಲಿಸುತ್ತಿದೆ” ಎಂದು ವೈಷ್ಣವ್ ಟ್ವೀಟ್ ಮಾಡಿದ್ದಾರೆ.

ಬುಧವಾರ ಹೂಗ್ಲಿ ನದಿಯಡಿಯ ಸುರಂಗದ ಮೂಲಕ ತನ್ನ ಚೊಚ್ಚಲ ರೈಲು ಓಟದೊಂದಿಗೆ ಭಾರತೀಯ ರೈಲ್ವೆಯು ಇತಿಹಾಸವನ್ನು ಸೃಷ್ಟಿಸಿದೆ. ಭಾರತದಲ್ಲಿ ಮೊದಲ ಬಾರಿಗೆ, ಮೆಟ್ರೋ ರೈಲು ನದಿಯ ಅಡಿಯಲ್ಲಿ ಪ್ರಯಾಣವನ್ನು ಕೈಗೊಂಡಿದೆ.

ಈ ಐತಿಹಾಸಿಕ ಘಟನೆಯನ್ನು ವೀಕ್ಷಿಸಲು ಮೆಟ್ರೋ ರೈಲಿನ ಜನರಲ್ ಮ್ಯಾನೇಜರ್ ಪಿ. ಉದಯ್ ಕುಮಾರ್ ರೆಡ್ಡಿ ಮಹಾಕರನ್‌ನಿಂದ ಹೌರಾ ಮೈದಾನದ ರೇಕ್ ಸಂಖ್ಯೆ MR-612 ರಲ್ಲಿ ಪ್ರಯಾಣಿಸಿದ್ದಾರೆ. ಈ ರೇಕ್ 11:55 ಕ್ಕೆ ಹೂಗ್ಲಿ ನದಿಯನ್ನು ದಾಟಿತು. ಹೌರಾ ಮೈದಾನದಿಂದ ಎಸ್ಪ್ಲಾನೇಡ್‌ವರೆಗಿನ 4.8 ಕಿಮೀ ಭೂಗತ ವಿಭಾಗದಲ್ಲಿ ಪ್ರಾಯೋಗಿಕ ಓಟಗಳನ್ನು ನಡೆಸಲಾಗಿದೆ. ಈ ವರ್ಷಾಂತ್ಯಕ್ಕೆ ರೈಲಿನ ವಾಣಿಜ್ಯ ಓಟಗಳು ಪ್ರಾರಂಭವಾಗಬಹುದು ಎನ್ನಲಾಗಿದೆ.

ಒಮ್ಮೆ ಈ ಮಾರ್ಗವು ತೆರೆದರೆ, ಹೌರಾ ದೇಶದ ಅತ್ಯಂತ ಆಳವಾದ (ಭೂಮೇಲ್ಮೈಯಿಂದ 33 ಮೀಟರ್ ಕೆಳಗೆ) ಮೆಟ್ರೋ ನಿಲ್ದಾಣವಾಗಲಿದೆ. ಹೂಗ್ಲಿ ನದಿಯ ಅಡಿಯಲ್ಲಿ 520 ಮೀಟರ್ ದೂರವನ್ನು 45 ಸೆಕೆಂಡ್‌ಗಳಲ್ಲಿ ತಲುಪುವ ನಿರೀಕ್ಷೆಯಿದೆ.