ಕಾರ್ಕಳ: ಯೋಜನಾಬದ್ದ ಭತ್ತದ ಕೃಷಿಯಿಂದ ಲಾಭ ಪಡೆಯಲು ಸಾಧ್ಯ. ಹಡೀಲು ಬಿದ್ದ ಗದ್ದೆಯನ್ನು ಭತ್ತ ಬೆಳೆದರೆ ಅಂತರ್ಜಲ ಗಣನೀಯವಾಗಿ ಹೆಚ್ಚಿಸಬಹುದು. ಹಡೀಲು ಬಿದ್ದ ಗದ್ದೆಗಳನ್ನು ಉಳುಮೆ ಮಾಡಲು ಭಾಕಿಸಂ ನಿಂದ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಭಾಕಿಸಂ ಜಿಲ್ಲಾಧ್ಯಕ್ಷ ನವೀನ್ ಚಂದ್ರ ಜೈನ್ ಹೇಳಿದರು.
ಅವರು ಬೆಳ್ಮಣ್ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಗ್ರಾಮಗಳಲ್ಲಿ ಅಂತರ್ಜಲ ಹೆಚ್ಚಳ – ನಮ್ಮ ಛಲ ಎಂಬ ಗುರಿಯೊಂದಿಗೆ ರೈತರೊಂದಿಗೆ ಸಂವಾದ ಕಾರ್ಯಕ್ರಮವನ್ನು ಇನ್ನಾ ಹಾಲು ಉತ್ಪಾದಕರ ಸಂಘದಲ್ಲಿ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಆಯೋಜಕಿ ರೇಶ್ಮಾ ಉದಯ ಶೆಟ್ಟಿ ಮಾತನಾಡಿ, ಹಿರಿಯರು ನಮಗೆ ಕೊಟ್ಟಿರುವ ಪ್ರಾಕೃತಿಕ ಸಂಪತ್ತನ್ನು ಮುಂದಿನ ಜನಾಂಗಕ್ಕೆ ಹಸ್ತಾಂತರಿಸುವ ಮಹತ್ತರ ಜವಾಬ್ದಾರಿ ನಮಗಿದೆ. ನೀರನ್ನು ಸಂರಕ್ಷಿಸದೆ ಹೋದರೆ ಭವಿಷ್ಯದಲ್ಲಿ ಆಪತ್ತು ಕಾದಿದೆ. ಜಲ ಸಂರಕ್ಷಣೆಯ ಕೆಲಸವನ್ನು ಇತರರಿಗಿಂತ ರೈತರು ಪರಿಣಾಮಕಾರಿಯಾಗಿ ಮಾಡಬಹುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಲಸಂರಕ್ಷಣೆ, ಇಂಗುಗುಂಡಿ, ಕೃಷಿ ಹೊಂಡ ಮೊದಲಾದ ಮಾಹಿತಿಯನ್ನು ಜಿ.ಪಂ ನ ಸಂಪನ್ಮೂಲ ವ್ಯಕ್ತಿ ಜೋಸೆಫ್ ರೆಬೆಲ್ಲೋ ನೀಡಿದರು. ಪ್ರಧಾನ ಮಂತ್ರಿ ಕೃಷಿ ಸಮ್ಮಾನ ಯೋಜನೆಯ ಅರ್ಜಿಗಳನ್ನು ಸ್ವೀಕರಿಸಲಾಯಿತು.
ಇನ್ನಾ ಗ್ರಾ.ಪಂ. ಅಧ್ಯಕ್ಷೆ ಬಬಿತಾ ದಿವಾಕರ್, ಉಪಾಧ್ಯಕ್ಷ ಕುಶಾ ಮೂಲ್ಯಾ , ತೆಂಗು ಉತ್ಪಾದಕರ ಸಂಘದ ಅಧ್ಯಕ್ಷ ಸಂಜೀವ ಶೆಟ್ಟಿ , ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಹರೀಶ್ ಶೆಟ್ಟಿ ಉಪಸ್ಥಿತರಿದ್ದರು.
ಭಾಕಿಸಂನ ಪ್ರ.ಕಾರ್ಯದರ್ಶಿ ಚಂದ್ರಹಾಸ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.