ಬೆಂಗಳೂರು: ಕಾಂಗ್ರೆಸ್ನಲ್ಲಿ ಬಾಕಿ ಉಳಿದಿರುವ 58 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಗುರುವಾರ ತಡರಾತ್ರಿವರೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಚುನಾವಣಾ ಸಮಿತಿಯಿಂದ ಮಹತ್ವದ ಚರ್ಚೆ ನಡೆದಿದ್ದು, ಇಂದು(ಶುಕ್ರವಾರ) ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.
ಗುರುವಾರ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ವರಿಷ್ಠ ರಾಹುಲ್ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ, ಸ್ಕ್ರೀನಿಂಗ್ ಸಮಿತಿಯ ಮೋಹನ್ ಪ್ರಕಾಶ್ ಭಾಗವಹಿಸಿದ್ದರು. ಸೋಮವಾರವಷ್ಟೇ ಎಐಸಿಸಿ ಸ್ಕ್ರೀನಿಂಗ್ ಸಮಿತಿಯು ಸಿದ್ದರಾಮಯ್ಯ, ಶಿವಕುಮಾರ್ ಅವರನ್ನು ದೆಹಲಿಗೆ ಕರೆಸಿಕೊಂಡು 58 ಕ್ಷೇತ್ರಗಳ ಅಭ್ಯರ್ಥಿಗಳ ಕುರಿತು ಚರ್ಚೆ ನಡೆಸಿತ್ತು.
ಇದೀಗ ಗುರುವಾರ 58 ಕ್ಷೇತ್ರಗಳಲ್ಲಿ ಅಭ್ಯರ್ಥಿ ಅಂತಿಮಗೊಳಿಸಲು ಅಡ್ಡಿಯಿರುವ ಸಮಸ್ಯೆಗಳು, ಬಿಜೆಪಿಯ ಬಂಡಾಯ ಅಭ್ಯರ್ಥಿಗಳು ಸೇರಿದಂತೆ ಹಲವು ವಿಚಾರಗಳ ಬಗ್ಗೆ ವಿವರವಾಗಿ ಚರ್ಚಿಸಿ ಬಹುತೇಕ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ದಾರೆ. ಮೂಲಗಳ ಪ್ರಕಾರ ಶುಕ್ರವಾರ ಮೂರನೇ ಪಟ್ಟಿ ಬಿಡುಗಡೆ ಆಗುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.