ಪಕ್ಷದ ಕಾರ್ಯತಂತ್ರದಂತೆ ಚುನಾವಣೆ ಎದುರಿಸುತ್ತೇವೆ: ಪ್ರಸಾದ್ ರಾಜ್ ಕಾಂಚನ್

ಉಡುಪಿ: ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆ ಮತ್ತು ತಂತ್ರಗಾರಿಕೆ ಇಟ್ಟುಕೊಂಡು ಚುನಾವಣೆ ಎದುರಿಸುತ್ತೇವೆ ಹೊರತು ಎದುರಾಳಿ ಅಭ್ಯರ್ಥಿಗಳ ಆಲೋಚನೆಯಿಂದಲ್ಲ. ಬಿಜೆಪಿಯ ಅಭ್ಯರ್ಥಿ ಒಂದೇ ಸಮುದಾಯಕ್ಕೆ ಸಂಬಂಧಪಟ್ಟಿದ್ದರೂ, ಇಲ್ಲಿನ ಮತದಾರರು ಬುದ್ದಿವಂತರು ಮತ್ತು ವಿದ್ಯಾವಂತರೂ ಆಗಿರುವ ಕಾರಣ ಸರಿಯಾದ ಶಾಸಕನನ್ನು ಆಯ್ಕೆ ಮಾಡಲಿದ್ದಾರೆ ಎಂದು ಉಡುಪಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ಹೇಳಿದರು.

ಅವರು ಕಾಂಗ್ರೆಸ್ ಭವನದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.

ಕಳೆದ ಆರು ತಿಂಗಳಿನಿಂದ ಕ್ಷೇತ್ರದಲ್ಲಿ ಸಿದ್ದತೆ ನಡೆಸುತ್ತಿದ್ದು, 100 ಸದಸ್ಯರ ಕಮಿಟಿ ರಚನೆ ಮಾಡಲಾಗಿದೆ. ಚುನಾವಣಾ ಪ್ರಚಾರದಲ್ಲಿ ತೊಡಗುವ ಕಾರ್ಯ ನಡೆದಿದ್ದು, ಈ ಚುನಾವಣೆಯನ್ನು ಸವಾಲಾಗಿ ತೆಗೆದುಕೊಂಡಿದ್ದೇವೆ. ಕ್ಷೇತ್ರದ ಜನತೆ ಬಿಜೆಪಿ ದುರಾಡಳಿತದಿಂದ ಬೇಸತ್ತಿದ್ದು, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕೆಂಬ ನಿರೀಕ್ಷೆಯಲ್ಲಿದ್ದಾರೆ. ಜನರಿಗೆ ಬೇಕಾದ ವಿದ್ಯಾವಂತ ಅಭ್ಯರ್ಥಿಗಳನ್ನು ಕಾಂಗ್ರೆಸ್ ಪಕ್ಷ ನೀಡಿದ್ದು, ಜನರಿಂದಲೂ ಉತ್ತಮ ಸ್ಪಂದನೆ ದೊರೆಯುತ್ತಿದೆ ಎಂದರು.

ಏ.17 ರಂದು ನಾಮಪತ್ರ ಸಲ್ಲಿಸಲಿದ್ದು, ಕಾರ್ಯಕರ್ತರ ಸಂಪೂರ್ಣ ಬೆಂಬಲವಿದೆ. 26 ವರ್ಷ ಪ್ರಾಯದಿಂದಲೇ ಕಾಂಗ್ರೆಸ್ ಪಕ್ಷದಲ್ಲಿ ವಿವಿಧ ಜವಾಬ್ದಾರಿಗಳನ್ನು ವಹಿಸಿಕೊಂಡಿದ್ದು ರಾಜಕೀಯ ತನಗೆ ಹೊಸದಲ್ಲ ಎಂದರು.

ಸುದ್ದಿಗೋಷ್ಠಿಯಲ್ಲಿ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ದಿನಕರ ಹೇರೂರು, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ, ಕುಶಲ್ ಶೆಟ್ಟಿ, ಭಾಸ್ಕರ್ ರಾವ್ ಕಿದಿಯೂರು ಉಪಸ್ಥಿತರಿದ್ದರು.