ಝಾನ್ಸಿ: ಉತ್ತರ ಪ್ರದೇಶದ ರಾಜಕಾರಣಿಯಾಗಿ ಪರಿವರ್ತಿತ ಮಾಫಿಯಾ ಡಾನ್ ಅತೀಕ್ ಅಹ್ಮದ್ ಪುತ್ರ ಅಸದ್ ಮತ್ತು ಉಮೇಶ್ ಪಾಲ್ ಹತ್ಯೆ ಪ್ರಕರಣದಲ್ಲಿ ಬೇಕಾಗಿದ್ದ ಗುಲಾಮ್ ಎಂಬಾತನು ಝಾನ್ಸಿಯಲ್ಲಿ ಉತ್ತರಪ್ರದೇಶ ಎಸ್‌ಟಿಎಫ್ ತಂಡದೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಬಲಿಯಾಗಿದ್ದಾರೆ ಎಂದು ಸುದ್ದಿ ಸಂಸ್ಥೆ ಎ.ಎನ್.ಐ ವರದಿ ಮಾಡಿದೆ.
ಪ್ರಯಾಗ್ ರಾಜ್ ನಲ್ಲಿ ನಡೆದ ಉಮೇಶ್ ಪಾಲ್ ಹತ್ಯೆ ಪ್ರಕರಣದಲ್ಲಿ ಬೇಕಾಗಿದ್ದ ಆರೋಪಿಗಳ ಮೇಲೆ ತಲಾ ಐದು ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು. ಝಾನ್ಸಿಯಲ್ಲಿ ಡಿವೈಎಸ್ಪಿ ನಾವೇಂದು ಮತ್ತು ಡಿವೈಎಸ್ಪಿ ವಿಮಲ್ ನೇತೃತ್ವದ ಯುಪಿ ಎಸ್ಟಿಎಫ್ ತಂಡದ ಎನ್ಕೌಂಟರ್ನಲ್ಲಿ ಇಬ್ಬರೂ ಬಲಿಯಾಗಿದ್ದಾರೆ. ಆರೋಪಿಗಳಿಂದ ಅತ್ಯಾಧುನಿಕ ವಿದೇಶಿ ನಿರ್ಮಿತ ಶಸ್ತ್ರಾಸ್ತ್ರ ವಶ ಪಡಿಸಿಕೊಳ್ಳಲಾಗಿದೆ ಎಂದು ಎಸ್‌ಟಿಎಫ್ ತಿಳಿಸಿರುವುದಾಗಿ ವರದಿಯಾಗಿದೆ.
ಈ ಮಧ್ಯೆ, ಉಮೇಶ್ ಪಾಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಗುಜರಾತ್‌ನ ಸಬರಮತಿ ಜೈಲಿನಿಂದ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ಗೆ ಕರೆತರಲಾದ ಅಪರಾಧಿ ಗ್ಯಾಂಗ್ ಸ್ಟರ್-ರಾಜಕಾರಣಿ ಅತೀಕ್ ಅಹ್ಮದ್ ನನ್ನು ಗುರುವಾರದಂದು ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಯಿತು.
ಅಹ್ಮದ್ ಮತ್ತು ಆತನ ಸಹೋದರ ಖಾಲಿದ್ ಅಜೀಂ ಅಲಿಯಾಸ್ ಅಶ್ರಫ್ ಅವರನ್ನು ವಿಚಾರಣೆಗಾಗಿ 14 ದಿನಗಳ ಕಸ್ಟಡಿಗೆ ನೀಡುವಂತೆ ಪ್ರಯಾಗರಾಜ್ ಪೊಲೀಸರು ಕೋರಿದ್ದಾರೆ. ಪ್ರಕರಣದ ವಿಚಾರಣೆ ನಡೆಯುತ್ತಿದೆ.
2006 ರ ಮಾರ್ಚ್ 28 ರಂದು ವಕೀಲ ಉಮೇಶ್ ಪಾಲ್ ಅಪಹರಣ ಪ್ರಕರಣದಲ್ಲಿ ಅಹ್ಮದ್ ಮತ್ತು ಇತರ ಇಬ್ಬರನ್ನು ತಪ್ಪಿತಸ್ಥರೆಂದು ನ್ಯಾಯಾಲಯವು ಘೋಷಿಸಿತು ಮತ್ತು ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿತು. ಪ್ರಕರಣದಲ್ಲಿ ಅಹ್ಮದ್ ಸಹೋದರ ಅಶ್ರಫ್ ಮತ್ತು ಇತರ ಆರು ಮಂದಿಯನ್ನು ಖುಲಾಸೆಗೊಳಿಸಲಾಗಿದೆ. 2005ರಲ್ಲಿ ಪ್ರಯಾಗ್‌ರಾಜ್‌ನಲ್ಲಿ ನಡೆದ ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಶಾಸಕ ರಾಜು ಪಾಲ್ ಹತ್ಯೆ ಪ್ರಕರಣದಲ್ಲಿ ಉಮೇಶ್ ಪಾಲ್ ಪ್ರಮುಖ ಸಾಕ್ಷಿಯಾಗಿದ್ದ. ಈತನನ್ನು ಪ್ರಯಾಗ್ ರಾಜ್ ನಲ್ಲಿ ಹಾಡುಹಗಲೇ ಗುಂಡಿಕ್ಕಿ ಕೊಲ್ಲಲಾಗಿದ್ದು, ಆರೋಪಿಗಳಲ್ಲಿ ಬಹುತೇಕರು ಎನ್ಕೌಂಟರ್ನಲ್ಲಿ ಬಲಿಯಾಗಿದ್ದಾರೆ.