ಉಡುಪಿ: ದೇಶ ಭಕ್ತ ಸಂಘಟನೆಯಾಗಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ಥಾಪಕರಾಗಿರುವ ಡಾ.ಕೇಶವ ಬಲಿರಾಮ ಡಾ. ಹೆಡ್ಗೆವಾರ್ ರವರು ದೇಶದ ಎಲ್ಲಾ ಪ್ರಜೆಗಳಿಗೂ ದೇಶ ಭಕ್ತಿಯನ್ನು ಮೂಡಿಸಬೇಕು ಎನ್ನುವ ದೃಷ್ಟಿಯಿಂದ ತನ್ನ ಜೀವನವನ್ನೇ ಈ ದೇಶಕ್ಕೋಸ್ಕರ ಸಮರ್ಪಣೆ ಮಾಡಿರುವ ಕಾರಣ ಇವರ ಹೆಸರನ್ನು ಕೊಡವೂರು ವಾರ್ಡಿನ ಹೊಸ ರಸ್ತೆಗೆ ನಾಮಕರಣ ಮಾಡಲಾಗಿದೆ ಎಂದು ನಗರಸಭೆ ಸದಸ್ಯ ವಿಜಯ್ ಕೊಡವೂರು ಹೇಳಿದರು.
ಮಹಾನ್ ವ್ಯಕ್ತಿಯ ಹೆಸರನ್ನು ಕೊಡವೂರು ವಾರ್ಡಿನಲ್ಲಿ ಹೊಸ ರಸ್ತೆಗೆ ನಾಮಕರಣ ಮಾಡುವ ಮೂಲಕ ಅವರ ಜೀವನ ಚರಿತ್ರೆಯನ್ನು ಮುಂದಿನ ಪೀಳಿಗೆಗೆ ನೆನಪಿಸುವ ಕಾರ್ಯ ಆಗಬೇಕು ಮತ್ತು ದೇಶ ಭಕ್ತಿಯನ್ನು ಜಾಗೃತ ಗೊಳಿಸಬೇಕು ಎನ್ನುವ ದೃಷ್ಟಿಯಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಪ್ರಾರಂಭಿಸಿ ಚಿಕ್ಕ ಚಿಕ್ಕ ಮಕ್ಕಳಿಂದಲೇ ವ್ಯಕ್ತಿ ನಿರ್ಮಾಣದ ಕಾರ್ಯವನ್ನು ನಾಗಪುರದಲ್ಲಿ ಪ್ರಾರಂಭ ಮಾಡಿದರು. ಅಂತಹ ಮಹಾನ್ ವ್ಯಕ್ತಿಯನ್ನು ನಾವೂ ನಿತ್ಯ ಸ್ಮರಣೆ ಮಾಡಬೇಕು ಮತ್ತು ಅವರು ನಡೆದ ದಾರಿಯಲ್ಲಿ ನಡೆಯಬೇಕು. ಇವರ ಹೆಸರನ್ನು ಮುಂದಿನ ಪೀಳಿಗೆಗೆ ಮತ್ತು ನಿತ್ಯ ನೆನಪು ಮಾಡುವಂತ ನಿಟ್ಟಿನಲ್ಲಿ ಅವರ ಜನ್ಮ ದಿನದ ಅಂಗವಾಗಿ ಇಲ್ಲಿನ ರಸ್ತೆಗೆ ನಾಮಕರಣ ಮಾಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ವಾರ್ಡ್ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಅಶೋಕ್ ಶೆಟ್ಟಿಗಾರ್ , ಸ್ಥಳೀಯರಾದ ವಿನಯ್ ಪಡುಕೆರೆ, ರಾಮಪ್ಪ ಮೆಂಡನ್, ರಾಜೀವ್ ಸುವರ್ಣ, ಪ್ರಭಾಕರ್ ಜತ್ತನ್ , ಚಂದ್ರಕಾಂತ್ ಮತ್ತಿತರರು ಹಾಜರಿದ್ದರು.