ಉಡುಪಿ: ಪ್ರಪಂಚದಾದ್ಯಂತ ಯಕ್ಷಗಾನ ಗೊಂಬೆಯಾಟದ ಸೊಗಡನ್ನು ಪ್ರಪಂಚದಾದ್ಯಂತ ಪಸರಿಸಿದ ಕೊಗ್ಗ ಕಾಮತ್ ಅವರ ದಾರಿಯಲ್ಲಿಯೇ ಅವರ ಮಗ ಭಾಸ್ಕರ ಕೊಗ್ಗ ಕಾಮತ್ ಅವರು ಹೆಜ್ಜೆ ಹಾಕಿರುವುದು ಕಲೆಯ ಉಳಿವಿನ ದೃಷ್ಟಿಯಿಂದ ಶ್ಲಾಘನೀಯ. ಕಲೆ, ಕಲಾವಿದರಿಗೆ ಪ್ರೋತ್ಸಾಹ ಸಮಾಜದ ಆದ್ಯ ಕರ್ತವ್ಯವಾಗಬೇಕು ಎಂದು ಕರ್ನಾಟಕ ಜಾನಪದ ಪರಿಷತ್ತಿನ ಉಡುಪಿ ಜಿಲ್ಲಾಧ್ಯಕ್ಷ, ತಲ್ಲೂರು ಫ್ಯಾಮಿಲಿ ಟ್ರಸ್ಟ್ ಉಡುಪಿ ಪ್ರವರ್ತಕ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.
ಬೈಂದೂರಿನಲ್ಲಿ ಅವರು ಭಾನುವಾರ ಶ್ರೀ ಸೇನೇಶ್ವರ ದೇವಳದ ಆವರಣದಲ್ಲಿ ಬೈಂದೂರಿನ ಪ್ರಸಿದ್ಧ ಸಾಂಸ್ಕೃತಿಕ ಸಂಘಟನೆ `ಸುರಭಿ ‘ಯ 23ನೇ ವರ್ಷಾಚರಣೆಯ ಪ್ರಯುಕ್ತ ಹಮ್ಮಿಕೊಂಡ `ಸುರಭಿ ಜೈಸಿರಿ ಸಾಂಸ್ಕೃತಿಕ ವರ್ಷಧಾರೆ ‘ ಮೂರು ದಿನಗಳ ಕಾರ್ಯಕ್ರಮದ ಕೊನೆಯ ದಿನದಂದು ಸಂಸ್ಥೆ ಕೊಡ ಮಾಡುವ 9ನೇ ವರ್ಷದ ಪ್ರತಿಷ್ಠಿತ `ಬಿಂದುಶ್ರೀ ‘ ಪ್ರಶಸ್ತಿಯನ್ನು ಖ್ಯಾತ ಯಕ್ಷಗಾನ ಗೊಂಬೆಯಾಟ ಕಲಾವಿದ ಭಾಸ್ಕರ ಕೊಗ್ಗ ಕಾಮತ್ ಅವರಿಗೆ ಪ್ರದಾನ ಮಾಡಿ ಮಾತನಾಡಿದರು.
ಅವರು ಗೊಂಬೆಯಾಟ ಕಲೆ ಮಾತ್ರವಲ್ಲದೆ, ಅದರಲ್ಲಿ ತೊಡಗಿಸಿಕೊಂಡಿರುವ ಕಲಾವಿದರನ್ನು ಸಾಕುವುದು ದೊಡ್ಡ ಸವಾಲಿನ ಕೆಲಸ. ಸುಮಾರು 6 ತಲೆಮಾರುಗಳಿಂದ ನಡೆದುಕೊಂಡು ಬಂದಿರುವ ಈ ಕಲೆಯನ್ನು ಉಳಿಸಿ ಬೆಳೆಸುವುದು ಸಮಾಜದ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಭಾಸ್ಕರ ಕೊಗ್ಗ ಕಾಮತ್ ಅವರನ್ನು ಗುರುತಿಸಿ ಅವರಿಗೆ ಪ್ರಶಸ್ತಿ ನೀಡಿ ಪ್ರೋತ್ಸಾಹಿಸುವ ಕಾರ್ಯ ನಡೆಸಿರುವ ಸುರಭಿ ಬೈಂದೂರು ಸಂಘಟನೆ ಕಾರ್ಯ ಪ್ರಶಂಸನೀಯ ಎಂದು ಅವರು ತಿಳಿಸಿದರು.
ಬಹಳಷ್ಟು ಜಾನಪದ ಕಲೆಗಳು ಇಂದು ಅವಸಾನದ ಅಂಚಿನಲ್ಲಿವೆ ಎಂದರೆ ತಪ್ಪಲ್ಲ. ಕಾರಣ ಅವುಗಳಿಗೆ ಸಮಾಜದ, ಸರಕಾರದ ಪ್ರೋತ್ಸಾಹದ ಕೊರತೆಯಿದೆ. ಅವುಗಳನ್ನು ಹೊಸಪೀಳಿಗೆಗೆ ದಾಟಿಸುವ ಕಾರ್ಯ ನಡೆಯದಿರುವುದು ಕೂಡಾ ಕಾರಣವಾಗಿದೆ. ಕರಾವಳಿಯ ಗಂಡುಕಲೆ ಯಕ್ಷಗಾನ ಇದೇ ಹಾದಿಯಲ್ಲಿದ್ದರೂ, ಸಮಾಜದ ನಿರಂತರ ಪ್ರೋತ್ಸಾಹದಿಂದ ಹೊಸತನವನ್ನು ಪಡೆದುಕೊಂಡು ಚೇತರಿಸಿಕೊಂಡು ವಿಜೃಂಭಿಸುತ್ತಿದೆ. ಈ ಯಕ್ಷ ಪ್ರೀತಿಗೆ ಮನಸೋತು ನನ್ನ 60ನೇ ವರ್ಷದಲ್ಲಿ ಯಕ್ಷಗಾನವನ್ನು ಅಭ್ಯಾಸಿಸಿ 400ಕ್ಕೂ ಅಧಿಕ ಬಾರಿ ಪಾತ್ರಗಳನ್ನು ಸೈ ಎನ್ನುವಂತೆ ನಿರ್ವಹಿಸಿದ ಸಂತೃಪ್ತಿ ನನ್ನದು. ಅಂದರೆ ಕಲೆಯನ್ನು ಉಳಿಸಿ ಬೆಳೆಸಬೇಕಾದರೆ ಅದನ್ನು ಅಬಾಲವೃದ್ಧರಾಗಿ ಅಭ್ಯಾಸಿಸುವ ವಾತಾವರಣ ಸೃಷ್ಟಿಯಾಗಬೇಕು ಎಂದು ಅವರು ಅಭಿಪ್ರಾಯ ಪಟ್ಟರು.
ಬೈಂದೂರಿನ ಸಾಂಸ್ಕೃತಿಕ ಸಂಘಟನೆ ಸುರಭಿಯ ಸಾಧನೆ ಬೆರಗು ಹುಟ್ಟಿಸುವಂತಿದೆ. ನಾಟಕ, ಯಕ್ಷಗಾನ, ಭರತ ನಾಟ್ಯ, ಜಾದೂ, ಚೆಂಡೆವಾದನ ಹೀಗೆ ಬಹು ರಂಗಗಳಲ್ಲಿ ನೂರಾರು ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಾ ಸಾಂಸ್ಕೃತಿಕ ರಂಗಕ್ಕೆ ದೊಡ್ಡ ಕೊಡುಗೆಯನ್ನು ನೀಡಿದೆ ಎಂದು ಅವರು ತಿಳಿಸಿದರು.
ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಭಾಸ್ಕರ ಕೊಗ್ಗ ಕಾಮತ್, ಜಾನಪದ ಕಲೆಗಳು ಉಳಿದರೆ ಉತ್ತಮ ಸಮಾಜದ ನಿರ್ಮಾಣ ಸಾಧ್ಯ. ಈ ಕಲಾ ಪ್ರಾಕಾರಗಳು ಉಳಿಯಲು ಸರ್ವಜನರ ಸಹಕಾರದ ಅಗತ್ಯವಿದೆಯೇ ಹೊರತು ಕೇವಲ ಅನುದಾನವಲ್ಲ. ಕಲೆ ಶಿಕ್ಷಣದ ಅಂಗವಾದರೆ ಮಾತ್ರ ಅದು ಉಳಿಯುತ್ತದೆ ಎಂದರು.
ಹಿರಿಯ ಪತ್ರಕರ್ತ ಎಸ್.ಜನಾರ್ದನ ಮರವಂತೆ ಅಭಿನಂದನಾ ನುಡಿಗಳನ್ನಾಡಿದರು. ಸುರಭಿ ಸಂಸ್ಥೆಯ ನಿರ್ದೇಶಕ ಸುಧಾಕರ ಪಿ. ಬೈಂದೂರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಅಧ್ಯಕ್ಷತೆಯನ್ನು ನಿವೃತ್ತ ಬ್ಯಾಂಕ್ ಅಧಿಕಾರಿ ವಸಂತ ಹೆಗ್ಡೆ ವಹಿಸಿದ್ದರು. ಕೊಲ್ಲೂರು ಮೂಕಾಂಬಿಕಾ ದೇವಳದ ವ್ಯವಸ್ಥಾಪನಾ ಸಮಿತಿಯ ಸದಸ್ಯ ಜಯಾನಂದ ಹೋಬ್ಲಿದಾರ್, ಉದ್ಯಮಿ ಎ.ಸತೀಶ್, ನಿವೃತ್ತ ಶಿಕ್ಷಕಿ ಶಾರದಾ ಕೆ. ನಾರಾಯಣ, ಜೇಸಿ ಜಾನ್ವಿ ಪ್ರಸಾದ್ ಪ್ರಭು, ಗುರು ವಿದ್ವಾನ್ ಚಂದ್ರಶೇಖರ ನಾವಡ ಸುರತ್ಕಲ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಗುರು ವಿದ್ವಾನ್ ಚಂದ್ರಶೇಖರ ನಾವಡ ಸುರತ್ಕಲ್ ಅವರಿಗೆ ಗುರು ವಂದನಾ ಕಾರ್ಯಕ್ರಮ ನಡೆಯಿತು.
ಆನಂದ ಮದ್ದೋಡಿ ಕಾರ್ಯಕ್ರಮ ನಿರೂಪಿಸಿ, ಸುರಭಿ ಅಧ್ಯಕ್ಷ ನಾಗರಾಜ ಪಿ.ಯಡ್ತರೆ ಸ್ವಾಗತಿಸಿದರು. ಗಿರೀಶ್ ಮೇಸ್ತ ವಂದಿಸಿದರು.
ಈ ಸಂದರ್ಭದಲ್ಲಿ ಸುರಭಿ ಭರತನಾಟ್ಯ ವಿದ್ಯಾರ್ಥಿಗಳಿಂದ ನೃತ್ಯಾಂಜಲಿ ನಾಟ್ಯ ವೈವಿಧ್ಯ ಹಾಗೂ ನೃತ್ಯ ರೂಪಕ `ಪಾಶು ಪತಾಸ್ತ್ರ ‘, ಸುರಭಿಯ ರಂಗ ಕಲಾವಿದರಿಂದ ರಂಗ ಗೀತೆಗಳ ಪ್ರಸ್ತುತಿ ನಡೆಯಿತು.