ಬೆಂಗಳೂರು: ಮೇ 10 ರಂದು ನಡೆಯಲಿರುವ ಕರ್ನಾಟಕ ಚುನಾವಣೆಯಲ್ಲಿ ಅಭ್ಯರ್ಥಿಗಳ ಘೋಷಣೆಯನ್ನು ಪಕ್ಷ ವಿಳಂಬ ಮಾಡುತ್ತಿದೆ ಎಂಬ ಊಹಾಪೋಹಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿಯ ಹಿರಿಯ ನಾಯಕ ಕೆಎಸ್ ಈಶ್ವರಪ್ಪ ಅವರು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರೆ.
ನಾನು ಚುನಾವಣಾ ರಾಜಕೀಯದಿಂದ ಹಿಂದೆ ಸರಿಯುತ್ತಿದ್ದೇನೆ ಎಂದು ಈಶ್ವರಪ್ಪ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಕಳೆದ 40 ವರ್ಷಗಳಲ್ಲಿ ಪಕ್ಷ ನನಗೆ ಸಾಕಷ್ಟು ಜವಾಬ್ದಾರಿ ನೀಡಿದೆ. ನಾನು ಬೂತ್ ಉಸ್ತುವಾರಿ ಮಟ್ಟದಿಂದ ಪಕ್ಷದ ರಾಜ್ಯ ಮುಖ್ಯಸ್ಥನವರೆಗೆ ಹೋಗಿದ್ದೇನೆ. ಉಪಮುಖ್ಯಮಂತ್ರಿಯಾಗುವ ಗೌರವವೂ ನನಗೊದಗಿತು ಎಂದು ಪತ್ರದಲ್ಲಿ ಬರೆದುಕೊಂಡಿದ್ದಾರೆ.
ಕೆಲವೇ ದಿನಗಳ ಹಿಂದೆ ಕುಂದಾಪುರದ ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಕೂಡಾ ಚುನಾವಣಾ ರಾಜಕೀಯದಿಂದ ಹಿಂದೆ ಸರಿಯುವುದಾಗಿ ತಿಳಿಸಿ ಪತ್ರ ಬರೆದಿದ್ದರು. ಇದೀಗ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ಕೂಡಾ ಚುನಾವಣಾ ರಾಜಕೀಯಕ್ಕೆ ವಿದಾಯ ಹೇಳಿದ್ದಾರೆ. ಪಕ್ಷದ ವರಿಷ್ಠರು ಇನ್ನೂ ಕೂಡಾ ಅಭ್ಯರ್ಥಿಗಳ ಹೆಸರನ್ನು ಬಿಡುಗಡೆ ಮಾಡಿಲ್ಲದಿರುವುದು ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿದೆ.