ಏಪ್ರಿಲ್‌ 8ರಂದು ಮಂಗಳೂರಿನಿಂದ ಮುಂಬೈಗೆ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಕಡಿಮೆ ಮಾಡಲು ವಿಶೇಷ ರೈಲು…!!

ನವದೆಹಲಿ: ಮಂಗಳೂರು ಜಂಕ್ಷನ್‌ನಿಂದ ಮುಂಬೈನ ಲೋಕಮಾನ್ಯ ತಿಲಕ್ ಟರ್ಮಿನಸ್‌ಗೆ ಏಕಮುಖ ವಿಶೇಷ ರೈಲನ್ನು ಭಾರತೀಯ ರೈಲ್ವೆ ಇಲಾಖೆ ಘೋಷಿಸಿದೆ. ಈ ಮೂಲಕ ಮಂಗಳೂರಿನಿಂದ ಮುಂಬೈಗೆ ಪ್ರಯಾಣಿಸುವ ಜನರು ಈಗ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. 06007 ಸಂಖ್ಯೆಯ ರೈಲನ್ನು ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಕಡಿಮೆ ಮಾಡಲು ಆರಂಭಿಸಲಾಗುತ್ತಿದೆ.

ಮೂಲಗಳ ಪ್ರಕಾರ, ಮಂಗಳೂರು ಜಂಕ್ಷನ್‌ನಿಂದ ಮುಂಬೈನ ಲೋಕಮಾನ್ಯ ತಿಲಕ್ ಟರ್ಮಿನಸ್‌ಗೆ ಹೊರಡುವ ವಿಶೇಷ ರೈಲು ಮಂಗಳೂರಿನಿಂದ ಏಪ್ರಿಲ್‌ 8ರಂದು ಸಂಜೆ 6.10ಕ್ಕೆ ಹೊರಟು 9ರಂದು ಮಧ್ಯಾಹ್ನ 1.15ಕ್ಕೆ ಮುಂಬೈ ತಲುಪಲಿದೆ.

ಸುರತ್ಕಲ್, ಉಡುಪಿ, ಕುಂದಾಪುರ, ಮೂಕಾಂಬಿಕಾ ರಸ್ತೆ, ಬೈಂದೂರು, ಭಟ್ಕಳ, ಮುರುಡೇಶ್ವರ, ಕುಮಟಾ, ಕಾರವಾರ, ಕಾನಕೋಣ, ಮಡಗಾಂವ್, ಕರ್ಮಾಲಿ, ಕುಡಾಲ್, ಕಂಕಾವಿ, ರತ್ನಗಿರಿ, ಸಂಗಮೇಶ್ವರ ರಸ್ತೆ, ಸವರ್ದ, ಚಿಪ್ಳೂನ್, ಖೇಡ್, ವೀರ್, ರೋಹಾ, ಪನ್ವೆಲ್ ಮತ್ತು ಥಾಣೆ ಸೇರಿದಂತೆ ಈ ರೈಲು ಮಾರ್ಗದುದ್ದಕ್ಕೂ ಹಲವಾರು ನಿಲುಗಡೆಗಳನ್ನು ಹೊಂದಿರುತ್ತದೆ.

ಸಾಮಾನ್ಯ ರೈಲುಗಳಲ್ಲಿ ಪ್ರಯಾಣಿಕರ ದಟ್ಟಣೆಯಿಂದ ತೊಂದರೆ ಅನುಭವಿಸುತ್ತಿರುವ ಮಂಗಳೂರಿನ ಜನತೆಗೆ ಈ ವಿಶೇಷ ರೈಲಿನ ಘೋಷಣೆ ವರದಾನವಾಗಿದೆ. ಈ ಏಕಮುಖ ರೈಲಿನೊಂದಿಗೆ, ಇತರ ರೈಲುಗಳ ಮೇಲಿನ ಹೊರೆಯನ್ನು ಕಡಿಮೆ ಮಾಡಲು ಮತ್ತು ಪ್ರಯಾಣಿಕರಿಗೆ ತೊಂದರೆಯಿಲ್ಲದ ಪ್ರಯಾಣವನ್ನು ಒದಗಿಸಲು ಅಧಿಕಾರಿಗಳು ಆಶಿಸಿದ್ದಾರೆ. ಈ ವಿಶೇಷ ರೈಲು 19 ಭೋಗಿಗಳೊಂದಿಗೆ ಸಂಚರಿಸಲಿದೆ ಎಂದು  ಕೊಂಕಣ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ