ಬೆಂಗಳೂರು: ರಾಷ್ಟ್ರೀಯ ಟೆಕ್ ಶೃಂಗಸಭೆ – ಐಟಿ ಮತ್ತು ಆವಿಷ್ಕಾರ ಭವಿಷ್ಯದ ಡಿಕೋಡಿಂಗ್

ಬೆಂಗಳೂರು: ರಾಷ್ಟ್ರೀಯ ಟೆಕ್ ಶೃಂಗಸಭೆ, ಟೆಕ್‌ಎಕ್ಸ್-2023 ಮಾರ್ಚ್ 30 ರಂದು ಬೆಂಗಳೂರಿನ ಸೈಂಟ್ ಜೋಸೆಫ್ಸ್ ವಿಶ್ವವಿದ್ಯಾಲಯದಲ್ಲಿ ರೆ. ಡೆನ್ಸಿಲ್ ಲೋಬೊ, ಎಸ್.ಜೆ. ಇವರ ಮಾರ್ಗದರ್ಶನ ಮತ್ತು ನೇತೃತ್ವದಲ್ಲಿ ಸೈಂಟ್ ಜೋಸೆಫ್ಸ್ ಇನ್‌ಸ್ಟಿಟ್ಯೂಟ್ ಆಫ್ ಇನ್‌ಫಾರ್ಮೇಶನ್ ಟೆಕ್ನಾಲಜಿಯಿಂದ ಮೊದಲ ಬಾರಿಗೆ ಡಿಕೋಡಿಂಗ್ ‘ದಿ ಫ್ಯೂಚರ್ ಆಫ್ ಐಟಿ ಮತ್ತು ಇನ್ನೋವೇಶನ್’ ಅನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಪ್ರಮುಖ ತಂತ್ರಜ್ಞಾನ ತಜ್ಞರು, ಶಿಕ್ಷಣ ತಜ್ಞರು, ಉದ್ಯಮ ನಾಯಕರು ಮತ್ತು ವಿದ್ಯಾರ್ಥಿಗಳನ್ನು ಒಟ್ಟುಗೂಡಿಸಿ ಇತ್ತೀಚಿನ ಪ್ರವೃತ್ತಿಗಳು, ಪ್ರಗತಿಗಳು ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿನ ಆವಿಷ್ಕಾರಗಳ ಬಗ್ಗೆ ಚರ್ಚಿಸಲಾಯಿತು.

2023 ರ ರಾಷ್ಟ್ರೀಯ ಟೆಕ್ ಶೃಂಗಸಭೆ, ಟೆಕ್‌ಎಕ್ಸ್ ವಿವಿಧ ತಾಂತ್ರಿಕ ಕ್ಷೇತ್ರದಲ್ಲಿ ಪರಿಣತಿಯನ್ನು ಹೊಂದಿದ ತಜ್ಞರಿಂದ ವಿಷಯಮಂಡನೆಯನ್ನು ಏರ್ಪಡಿಸಲಾಗಿತ್ತು. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಆಸಕ್ತಿಯುಳ್ಳವರಿಗೆ ಈ ಉದ್ಯಮದಲ್ಲಿನ ತಜ್ಞರಿಂದ ಇತ್ತೀಚಿನ ಪ್ರವೃತ್ತಿಗಳು, ಆವಿಷ್ಕಾರಗಳು ಮತ್ತು ಉತ್ತಮ ಅಭ್ಯಾಸಗಳ ಬಗ್ಗೆ ತಿಳಿದುಕೊಳ್ಳಲು ಇದು ಅತ್ಯುತ್ತಮ ಅವಕಾಶವಾಗಿದೆ.

ಎಸ್‌ಜೆಐಐಟಿಯ ನಿರ್ದೇಶಕ ರೆ. ಡೆನ್ಸಿಲ್ ಲೋಬೊ ಎಸ್‌ಜೆ ಪ್ರಾಸ್ತಾವಿಕವಾಗಿ ಮಾತನಾಡಿ, ಯುವಕರಲ್ಲಿ ಸೃಜನಶೀಲತೆಯನ್ನು ಉತ್ತೇಜಿಸುವುದರಿಂದ ಆವಿಷ್ಕಾರಕ್ಕೆ ಕಾರಣವಾಗುತ್ತದೆ. ಪ್ರಪಂಚವು ಇನ್ನೂ ಮುಂದುವರಿಯುದರಿಂದ ಮುಂದಿನ ಪೀಳಿಗೆಯ ವಿದ್ಯಾರ್ಥಿಗಳು ಇದನ್ನು ಎದುರಿಸಲು ತಮ್ಮನ್ನು ತಾವು ಚೆನ್ನಾಗಿ ಸಿದ್ಧಪಡಿಸಿಕೊಳ್ಳಬೇಕು ಎಂದರು.

ಗೇಮಿಂಗ್ ಸಂಸ್ಥೆಯಾದ ದ್ರುವ ಇಂಟರಾಕ್ಟಿವ್‌ನ ಸಂಸ್ಥಾಪಕ ರಾಜೇಶ್ ರಾವ್ ಮಾತನಾಡಿ, ಕಂಪ್ಯೂಟರ್ ಗೇಮ್‌ಗಳ ಪಾತ್ರ ಮತ್ತು ನುರಿತ ಗ್ರಾಫಿಕ್ಸ್ ಡಿಸೈನರ್‌ಗಳಿಗೆ ಇರುವ ಅಪಾರ ಪ್ರಮಾಣದ ಉದ್ಯೋಗಗಳ ಸಾಧ್ಯತೆಗಳ ಬಗ್ಗೆ ಮಾತನಾಡಿದರು.

ನಿಖಿಲ್ ಭಟ್, ಉಪಾಧ್ಯಕ್ಷರು, ಸಂಶೋಧನೆ ಮತ್ತು ಅಭಿವೃದ್ಧಿ, ನೋಕಿಯಾ ಇವರು 5ಜಿ ಸ್ಪೆಕ್ಟ್ರಮ್ ಮತ್ತು ಇದರ ಮುಂದುವರಿಕೆಯ ಬಗ್ಗೆ ಮಾತನಾಡಿದರು.

ಬ್ರಾಯನ್‌ ಪಾಯ್ಸ್, ಸಹ-ಸಂಸ್ಥಾಪಕರು, ಡಿಜಿಜುರಾ ಟೆಕ್ನಾಲಜೀಸ್ ಮತ್ತು ಹಿರಿಯ ಎಸ್‌ಎಪಿ ಸಲಹೆಗಾರರು, ವಿಶೇಷವಾಗಿ ವಿಶ್ವಾದ್ಯಂತ ಎಸ್‌ಎಪಿ ಪ್ರಾಮುಖ್ಯತೆಯನ್ನು ಪ್ರಸ್ತಾಪಿಸಿದರು ಮತ್ತು ಈ ಸಾಫ್ಟ್ವೇರ್ ಬಳಸುವಲ್ಲಿ ಪ್ರವೀಣರಾದವರಿಗೆ ಹಲವಾರು ಅವಕಾಶಗಳಿವೆ ಎಂದು ತಿಳಿಸಿದರು.

ವಿವಿಧ ಕಾಲೇಜುಗಳ 1200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.