ವಸಯಿ: ವಸಯಿ ತಾಲೂಕು ಮೊಗವೀರ ಸಂಘದ ವತಿಯಿಂದ ಆಯೋಜಿಸಲಾದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಹಳದಿ ಕುಂಕುಮ ಕಾರ್ಯಕ್ರಮ ಮಾರ್ಚ್ 26ರಂದು ಸಂಘದ ಕಚೇರಿ. ಬಿ-1೦2, ನ್ಯೂ ವರ್ಷಾ ಕೋಅಪರೇಟಿವ್ ಹೌಸಿಂಗ್ ಸೊಸೈಟಿ, ಆನಂದ ನಗರ ವಸಯಿ ಪಶ್ಚಿಮ ಕಚೇರಿಯ ಕೊರಗಪ್ಪ ಸಾಲ್ಯಾನ್ ಸಭಾಂಗಣದಲ್ಲಿ ವಿಜೃಂಭಣೆಯಿಂದ ಜರುಗಿತು. ಪ್ರಾರ್ಥನೆಯೊಂದಿಗೆ ದೀಪ ಪ್ರಜ್ವಲಿಸುವ ಮೂಲಕ ಅತಿಥಿ ಗಾಗೂ ಗಣ್ಯರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಸಮಾಜ ಸೇವಕಿ ಧಾರ್ಮಿಕ ಚಿಂತಕರಾದ ಪುಷ್ಪ ಜಿ ಬಂಗೇರ ಹಾಗೂ ಪರಿಸರದ ಮಹಿಳಾ ಕ್ರೀಡಾಪಟು ಸುಶೀಲಾ ಆರ್ ಅಮೀನ್ ರವರ ಸಾಮಾಜಿಕ ಸೇವೆ ಮತ್ತು ಕ್ರೀಡಾ ಸಾಧನೆಯನ್ನು ಗುರುತಿಸಿ ಸನ್ಮಾನಿಸಲಾಯಿತು. ಸಂಘದ ಸುಧೀರ್ಘ ಅವಧಿಯಲ್ಲಿ ಸೇವೆ ಸಲ್ಲಿಸಿ ಕಳೆದ ನಾಲ್ಕು ವರ್ಷಗಳಿಂದ ಮಹಿಳಾ ಕಾರ್ಯಾಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ ಯಶೋದಾ ವಿ ಬಂಗೇರ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಯಶೋದಾ ವಿ ಬಂಗೇರ ಮಾತನಾಡಿ, ಮಹಿಳೆಯರು ದೇಶ ಸಮಾಜ ಹಾಗೂ ಸಂಸಾರದಲ್ಲಿ ಸಾಧನೆ ಮಾಡಿ ಸಮಾಜದಲ್ಲಿ ಸಶಕ್ತರಾಗಿ ಬೆಳೆಯಬೇಕು. ಸುದೀರ್ಘ 12 ವರ್ಷಗಳ ಅವಧಿಯಲ್ಲಿ ಈ ಸಂಸ್ಥೆಯ ಸೇವೆ ಮಾಡುವ ಸುಯೋಗ ನನ್ನ ಪಾಲಿಗೆ ಒದಗಿ ಬಂದಿದ್ದು, ಕಳೆದ ನಾಲ್ಕು ವರ್ಷದಿಂದ ಮಹಿಳಾ ವಿಭಾಗದ ಕಾರ್ಯಧ್ಯಕ್ಷೆಯಾಗಿ ತನ್ನಿಂದಾದ ಸಾಮಾಜಿಕವಾಗಿ ಸೇವೆ ಸಂಘಕ್ಕೆ ಒದಗಿದೆ. ಈ ಸಂದರ್ಭದಲ್ಲಿ ಸಂಘದ ಸದಸ್ಯರು, ಮಹಿಳಾ ಸದಸ್ಯರ ಸಹಕಾರದ ಕೊಡುಗೆ ಮರೆಯುವಂತಿಲ್ಲ. ಸಾಮಾಜಿಕ ಧಾರ್ಮಿಕ ಆರ್ಥಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆಸಲ್ಲಿಸಿದಾಗ ನಮ್ಮ ಸಾಧನೆಯನ್ನು ಸಮಾಜ ಗುರುತಿಸುತ್ತದೆ ಎಂದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಸಂಘದ ಉಪಾಧ್ಯಕ್ಷರಾದ ದಯಾನಂದ ಕುಂದರ್ ಸುಮಾರು ಏಳು ದಶಕ ವರ್ಷಗಳ ಹಿಂದೆ ನಾಲ್ಕು ಗೋಡೆಗಳ ನಡುವೆ ಪುರುಷಶಾಹಿ ಬದುಕಿನಲ್ಲಿ ಸಾಗುತ್ತಿದ್ದ ಮಹಿಳೆ ಇಂದು ಜಾಗತಿಕ ಮಟ್ಟದಲ್ಲಿ ಸ್ಥಾನಮಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾಳೆ. ಕಾಲಚಕ್ರದ ಬದಲಾವಣೆ ಯಲ್ಲಿ ಹೆಣ್ಣು ಸಮಾಜದಲ್ಲಿ ಸಶಕ್ತವಾಗಿ ಬೆಳೆದು ಮನೆಯ ಗೃಹಲಕ್ಷ್ಮಿಯಾಗಿ ಶೋಭೆ ತಂದಿರುತ್ತಾಳೆ. ಹಿರಿಯರ ಸಲಹೆ ಸಹಕಾರ ಪ್ರಸ್ತುತ ಬದುಕಿನಲ್ಲಿ ಮಹಿಳೆಯರ ಸಾಧನೆಗೆ ಆಶಾಕಿರಣ. ವಸಯಿ ತಾಲೂಕು ಮೊಗವೀರ ಸಂಘ ಜಾತೀಯ ಸಂಸ್ಥೆಗಿಂತಲೂ ಮನುಷ್ಯ ಸಂಬಂಧ ಸಂಸ್ಥೆಯಾಗಿ ಬೆಳೆದಿರುವುದು ಎಲ್ಲರಿಗೂ ಮಾದರಿ ಎಂದು ಹೇಳಿ ಕಾರ್ಯಕ್ರಮಕ್ಕೆ ಆಗಮಿಸಿದ ಸರ್ವ ಮಹಿಳೆಯರನ್ನು ಅಭಿನಂದಿಸಿದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಸದಸ್ಯರಿಂದ ಭಜನಾ ಕಾರ್ಯಕ್ರಮ ನಂತರ ನಗರದ ಖ್ಯಾತ ಭಜನೆ ಗಾಯಕ ವಿಜಯ ಶೆಟ್ಟಿ ಮೂಡುಬೆಳ್ಳೆ ಮತ್ತು ತಂಡದವರಿಂದ ಚಲನಚಿತ್ರ ಭಕ್ತಿಗೀತೆಗಳ ಸಂಗೀತ ರಸಮಂಜರಿ ಜರುಗಿತು.
ಕಾರ್ಯಕ್ರಮದ ಪ್ರಾರಂಭದಲ್ಲಿ ಗೌರವ ಪ್ರಧಾನ ಕಾರ್ಯದರ್ಶಿ ಮೋಹಿನಿ ಎಸ್ ಮಲ್ಪೆ ಪ್ರಾರ್ಥನೆ ಹಾಡಿ ಅತಿಥಿ ಗಣ್ಯರನ್ನು ಸ್ವಾಗತಿಸಿದರು. ಮಹಿಳಾ ಸದಸ್ಯರಾದ ವಂದನಾ ಸಾಲ್ಯಾನ್ ಪ್ರೇಮಾ ಸಾಲ್ಯಾನ್ ಅತಿಥಿಗಳನ್ನು ಪರಿಚಯಿಸಿದರು. ಗೌ. ಕೋಶಾಧಿಕಾರಿ ಶೇಖರ್ ಟಿ ಕರ್ಕೇರ, ಟ್ರಸ್ಟಿ, ಮುರಳೀಧರ ಪುತ್ರನ್ ಕಾರ್ಯಕ್ರಮ ಸಮಿತಿಯ ಕಾರ್ಯಾಧ್ಯಕ್ಷ ಪ್ರದೀಪ್ ಪುತ್ರನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬಳಿಕ ಸಂಘದ ಸದಸ್ಯರ ಮಕ್ಕಳಿಂದ ನೃತ್ಯ, ಹಾಸ ವಿಡಂಬನೆ ಮನೋರಂಜನಾ ಕಾರ್ಯಕ್ರಮ ಜರಗಿತು.
ಚಂದ್ರಾವತಿ ಕರ್ಕೇರ ವಂದಿಸಿದರು.
ಸಂಘದ ಪದಾಧಿಕಾರಿಗಳು ಸದಸ್ಯರು ಮಹಿಳಾ ಸದಸ್ಯರು ವಿವಿಧ ಸಂಘಸಂಸ್ಥೆಗಳ ಮಹಿಳಾ ಪದಾಧಿಕಾರಿಗಳು ಹಾಗೂ ಪರಿಸರದ ತುಳುಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಚಿತ್ರ, ವರದಿ: ರಮೇಶ್ ಉದ್ಯಾವರ್
Mob. 9820949820