ಇಂದೋರ್: ಇಲ್ಲಿನ ಸ್ನೇಹ ನಗರದ ಪಟೇಲ್ ನಗರದಲ್ಲಿರುವ ಬೇಲೇಶ್ವರ ಮಹಾದೇವ ದೇವಾಲಯದಲ್ಲಿ 100 ವರ್ಷಕ್ಕೂ ಹಳೆಯದಾದ 60 ಅಡಿ ಆಳದ ಮೆಟ್ಟಿಲುಬಾವಿಯೊಳಗೆ ಹಠಾತ್ತಾಗಿ ಬಿದ್ದು, 35 ಜನರು ಪ್ರಾಣ ಕಳೆದುಕೊಂಡ ಹೃದಯ ವಿದ್ರಾವಕ ಘಟನೆ ನಡೆದಿದೆ. ರಾಮನವಮಿಯನ್ನು ಸಂಭ್ರಮದಿಂದ ಆಚರಿಸಲು ದೇವಸ್ಥಾನದಲ್ಲಿ ಜನ ಜಮಾಯಿಸಿದ್ದರು. ತಾವು ಕುಳಿತಿದ್ದ ನೆಲದ ಕೆಳಗೆ 60 ಅಡಿಯ ಬಾವಿ ಇರುವುದು ಅವರಿಗೆ ತಿಳಿದಿರಲಿಲ್ಲ. ಈ ಹಳೆಯ ಬಾವಿಯನ್ನು ತಂತಿ ಜಾಲರಿ ಮತ್ತು ಟೈಲ್ಸ್ ಗಳಿಂದ ಮುಚ್ಚಲಾಗಿತ್ತು. ರಾಮನವಮಿಯಾದ್ದರಿಂದ ಸಾಮರ್ಥ್ಯಕ್ಕಿಂತ ಹೆಚ್ಚು ಜನರು ಈ ದುರ್ಬಲ ನಿರ್ಮಾಣದ ಮೇಲೆ ಕುಳಿತಿದ್ದು, ಪೂರ್ಣಾಹುತಿಯ ಸಮಯದಲ್ಲೇ ಕುಳಿತಿದ್ದ ನೆಲ ಕುಸಿದಿದ್ದರಿಂದ ಎಲ್ಲರೂ ಬಾವಿಯೊಳಗೆ ಬಿದ್ದಿದ್ದಾರೆ.
https://twitter.com/i/status/1641632277028564993
ಜನರು ಬಿದ್ದಾಗ ಮೆಟ್ಟಿಲುಬಾವಿಯೊಳಗೆ ಬಿದ್ದಾಗ ಬಾವಿಯಲ್ಲಿ ನೀರು ತುಂಬಿಕೊಂದಿದ್ದದ್ದು ಅಪಘಾತದಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಲು ಬಹುದೊಡ್ಡ ಕಾರಣ ಎಂದು ವರದಿಗಳು ಹೇಳಿವೆ. ಅಲ್ಲದೆ, ಬಾವಿಯೊಳಗೆ ಬಿದ್ದಾಗ ಒಬ್ಬರ ಮೇಲೊಬ್ಬರು ಬಿದ್ದದ್ದರಿಂದಲೂ ಹಾಗೂ ನಿರ್ಮಾಣದ ಸಮಯದಲ್ಲಿ ಹಾಕಲಾದ ಕಬ್ಬಿಣದ ಸಲಾಕೆಗಳಿಂದಲೂ ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ. ಸಾವನ್ನಪಿದವರಲ್ಲಿ ಎರಡು ಮತ್ತು ಎಂಟು ವರ್ಷ ಪ್ರಾಯದ ಮಕ್ಕಳು ಕೂಡಾ ಇದ್ದರು.
ಜನರನ್ನು ಬದುಕಿಸಲು ಬಾವಿಯೊಳಗಿನ ನೀರನ್ನು ಸಂಪೂರ್ಣವಾಗಿ ಖಾಲಿಗೊಳಿಸಲಾಯಿತಾದರೂ, ಬಾವಿಯಲ್ಲಿರುವ ನಿರಂತರ ನೀರಿನ ಚಿಲುಮೆಯಿಂದಾಗಿ ನೀರು ತುಂಬಿಕೊಳ್ಳೊತ್ತಿದ್ದು ರಕ್ಷಣಾ ಕಾರ್ಯಗಳಿಗೆ ಅಡಚಣೆಯಾಗುತ್ತಿದೆ. ಘಟನೆ ನಡೆದ ಸ್ಥಳಕ್ಕೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ತೆರಳಲಿದ್ದಾರೆ ಎನ್ನಲಾಗಿದೆ. ಭಾರತೀಯ ಸೇನೆಯು ಕಳೆದ ರಾತ್ರಿ 12 ಗಂಟೆಯಿಂದಲೂ ರಕ್ಷಣಾ ಕಾರ್ಯದಲ್ಲಿ ನಿರತವಾಗಿದ್ದು ಶವಗಳನ್ನು ಮೇಲೆತ್ತಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ನಿರತವಾಗಿದೆ.