ಕೇರಳ ರಾಜ್ಯದ ಮೊದಲ ತೃತೀಯಲಿಂಗಿ ವಕೀಲರಾಗಿ ಪದ್ಮಲಕ್ಷ್ಮಿ ಆಯ್ಕೆ

ಕೇರಳ: ಕೇರಳ ರಾಜ್ಯದ ಬಾರ್ ಕೌನ್ಸಿಲ್‌ನ ಮೊದಲ ತೃತೀಯಲಿಂಗಿ ವಕೀಲರಾಗಿ ಪದ್ಮಲಕ್ಷ್ಮಿ ಅವರು ಆಯ್ಕೆಯಾಗಿದ್ದಾರೆ.

ರಾಜ್ಯದ ಕೈಗಾರಿಕಾ ಸಚಿವ ಪಿ.ರಾಜೀವ್ ಈ ವಿಚಾರವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜೀವನದ ಎಲ್ಲಾ ಅಡೆತಡೆಗಳನ್ನು ಎದುರಿಸಿ ಕೇರಳದ ಮೊದಲ ತೃತೀಯಲಿಂಗಿ ವಕೀಲರಾಗಿ ಆಯ್ಕೆಯಾದ ಪದ್ಮಲಕ್ಷ್ಮಿಯವರಿಗೆ ಅಭಿನಂದನೆಗಳು. ಮೊದಲಿಗರಾಗುವುದು ಇತಿಹಾಸದಲ್ಲಿ ಕಠಿಣವಾಗಿದೆ. ಗುರಿಯ ಹಾದಿಯಲ್ಲಿ ಅಡೆತಡೆಗಳಿರುತ್ತದೆ. ಅಲ್ಲಿ ನಿರುತ್ಸಾಹಗೊಳಿಸುವ ಜನರು ತುಂಬಾ ಇರುತ್ತಾರೆ. ಆದರೆ ಪದ್ಮಲಕ್ಷ್ಮಿಯವರು ಇವೆಲ್ಲವನ್ನೂ ಮೀರಿ ಕಾನೂನು ಇತಿಹಾಸದಲ್ಲಿ ತಮ್ಮ ಹೆಸರನ್ನು ಬರೆದಿದ್ದಾರೆ. ಇವರ ಜೀವನವು ಉಳಿದ ಮಂಗಳಮುಖಿಯರು ವಕೀಲ ವೃತ್ತಿಗೆ ಬರಲು ಸ್ಫೂರ್ತಿಯಾಗಲಿ ಎಂದು ಪಿ.ರಾಜೀವ್ ಆಶಯ ವ್ಯಕ್ತಪಡಿಸಿದ್ದಾರೆ.

ಬಾರ್ ಕೌನ್ಸಿಲ್ ಆಫ್ ಇಂಡಿಯಾ, ಬಾರ್ ಎನ್‌ರೋಲ್‌ಮೆಂಟ್ ಪ್ರಮಾಣಪತ್ರವನ್ನು ಪಡೆದ 1,500ಕ್ಕೂ ಹೆಚ್ಚು ಕಾನೂನು ಪದವೀಧರರಲ್ಲಿ ಪದ್ಮಲಕ್ಷ್ಮಿಯವರು ಕೂಡಾ ಒಬ್ಬರು. ಇವರು ಎರ್ನಾಕುಲಂನ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಪದವಿಯನ್ನು ಪಡೆದಿದ್ದಾರೆ.