ಉಡುಪಿ: ಜಿಲ್ಲೆಯ ಮೀನುಗಾರರು ತಮ್ಮ ವಿವಿಧ ಬೇಡಿಕೆಗಳ ಬಗ್ಗೆ, ಸಾಗರ ಪರಿಕ್ರಮದ ಅಂಗವಾಗಿ ಇಂದು ಉಡುಪಿ ಭೇಟಿ ನೀಡಿದ ಕೇಂದ್ರ ಮೀನುಗಾರಿಕೆ, ಪಶು ಸಂಗೋಪನೆ ಮತ್ತು ಹೈನುಗಾರಿಕಾ ಸಚಿವ ಪರಷೋತ್ತಮ ರೂಪಾಲ ಅವರಿಗೆ ಮಲ್ಪೆ ಬಂದರಿನಲ್ಲಿರುವ ಮೀನುಗಾರರ ಸಂಘದಲ್ಲಿ ಮನವಿಗಳನ್ನು ಸಲ್ಲಿಸಿದರು.
ಮೀನುಗಾರರಿಗೆ ಡೀಸೆಲ್ ಸಬ್ಸಿಡಿ ನೀಡಲು ಬಿ.ಪಿಎಲ್. ಕಾರ್ಡ್ ಪರಿಗಣಿನೆ ಮಾಡದ ಬಗ್ಗೆ, ಬೋಟ್ ಗಳಿಗೆ ರೋಡ್ ಸೆಸ್ ವಿಧಿಸುವುದನ್ನು ತೆಗೆಯುವ ಬಗ್ಗೆ, ಅಂತರರಾಜ್ಯ ಸಮನ್ವಯ ಸಮಿತಿ ರಚನೆ ಬಗ್ಗೆ,ಅನಿಯಮಿತ ಸೀಮೆಎಣ್ಣೆ ಸರಬರಾಜು ಬಗ್ಗೆ, ಮಲ್ಪೆಯಲ್ಲಿ ಹೊರ ಬಂದರು ನಿರ್ಮಾಣ ಬಗ್ಗೆ, ಈಗಿರುವ ಬಂದರನ್ನು ಮೇಲ್ದರ್ಜೆಗೇರಿಸುವ ಬಗ್ಗೆ, ಮೀನುಗಾರಿಕ ಕೈಗಾರಿಕ ವಲಯ ಆರಂಭಿಸುವ ಬಗ್ಗೆ,ಹಳೆಯ ಬೋಟುಗಳ ಪುರ್ನ ನಿರ್ಮಾಣಕ್ಕೆ ಸಹಾಯಧನ ನೀಡುವ ಬಗ್ಗೆ ಮತ್ತಿತರ ಬೇಡಿಕೆಗಳ ಬಗ್ಗೆ ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ದಯಾನಂದ ಸುವರ್ಣ ಮನವಿ ಸಲ್ಲಿಸಿದರು.
ಹಿರಿಯ ಮೀನುಗಾರರಿಗೆ ಪಿಂಚಣಿ ನೀಡುವ ಬಗ್ಗೆ, ನಾಡ ದೋಣಿ ಮೀನುಗಾರರಿಗೆ ಪರ್ಯಯ ಇಂಧನ ಒದಗಿಸುವುದು ಸೇರಿದಂತೆ ಮತ್ತಿತರ ಬೇಡಿಕೆಗಳ ಬಗ್ಗೆ ಕರ್ನಾಟಕ ಕರಾವಳಿ ಮೀನುಗಾರರ ಕ್ರಿಯಾ ಸಮಿತಿ ಅಧ್ಯಕ್ಷ ಜಯ ಸಿ ಸುವರ್ಣ ಮನವಿ ಸಲ್ಲಿಸಿದರು.
ಪ್ರಸ್ತುತ ಮೀನುಗಾರರ ಎಲ್ಲಾ ಮನವಿಗಳ ಬಗ್ಗೆ ಪರಿಶೀಲಿಸಿ, ಮೀನುಗಾರರಿಗೆ ಗರಿಷ್ಠ ಪ್ರಯೋಜನ ದೊರೆಯುವಂತೆ ಪ್ರಸ್ತುತ ಇರುವ ಯೋಜನೆಗಳಲ್ಲಿ ಬದಲಾವಣೆ ಮತ್ತು ಹೊಸ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಉಡುಪಿ ಶಾಸಕ ರಘುಪತಿ ಭಟ್, ಕಾಪು ಲಾಲಾಜಿ ಆರ್ ಮೆಂಡನ್, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ, ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ನಿಯಮಿತದ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ, ಮೀನು ಮಾರಾಟ ಫೆಡರೇಷನ್ ಅಧ್ಯಕ್ಷ ಯಶ್ ಪಾಲ್ ಸುವರ್ಣ, ನಗರಸಭಾ ಅಧ್ಯಕ್ಷೆ ಸುಮಿತ್ರಾ ನಾಯಕ್, ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ರಾಜ್ಯ ಮೀನುಗಾರಿಕೆ ಇಲಾಖೆಯ ಕಾರ್ಯದರ್ಶಿ ಸಲ್ಮಾ ಫಾಹಿಮ್, ಕೋಸ್ಟ್ ಗಾರ್ಡ್ ಡಿ.ಐ.ಜಿ. ಪಿ.ಕೆ.ಮಿಶ್ರಾ, ಮೀನುಗಾರಿಕೆ ಇಲಾಖೆ ನಿರ್ದೇಶಕ ರಾಮಾಚಾರ್ಯ ಮತ್ತಿತರರು ಇದ್ದರು.