ಉಡುಪಿ: ಮಹಿಳೆಯರು ಈಗಾಗಲೇ ಶೇ.70 ರಷ್ಟು ವಿವಿಧ ಕ್ಷೇತ್ರಗಳಲ್ಲಿ ಸಮಾನತೆಯನ್ನು ಪಡೆದುಕೊಂಡಿದ್ದಾರೆ. ಬಾಕಿ ಉಳಿದ ಕ್ಷೇತ್ರಗಳಲ್ಲಿಯೂ ತಮ್ಮ ಕಾರ್ಯವ್ಯಾಪ್ತಿಯನ್ನು ಚಾಣಾಕ್ಷ ತನದಿಂದ ಸಮಾನತೆಯನ್ನು ಹೊಂದಲು ಮುಂದಾಗಬೇಕು ಎಂದು ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್ ಹೇಳಿದರು.
ಅವರು ನಗರದ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರು ಶಿಕ್ಷಣವಂತರಾಗುವುದರೊಂದಿಗೆ ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಸಬಲರಾಗಿ ಎಲ್ಲಾ ರಂಗದಲ್ಲಿಯೂ ತೊಡಗಿಸಿಕೊಳ್ಳಬೇಕು. ತಮ್ಮ ಹಕ್ಕು ಮತ್ತು ಕರ್ತವ್ಯಗಳನ್ನು ಅರ್ಥೈಸಿಕೊಂಡು ನಿಷ್ಠೆಯಿಂದ ಕಾರ್ಯನಿರ್ವಹಿಸಬೇಕು ಎಂದರು.
ಮಹಾಭಾರತ ರಾಮಾಯಣ ಕಾಲಗಳಿಂದಲೂ ಮಹಿಳೆಯರು ಸಮಾನತೆಗೆ ಹೋರಾಟ ನಡೆಸುತ್ತಾ ಬಂದಿದ್ದಾರೆ. ಅಕ್ಕಮಹಾದೇವಿ ಅಂತಹವರು ಸಮಾಜದ ಕಟ್ಟುಪಾಡುಗಳ ಹೋಗಲಾಡಿಸಲು ಹೋರಾಟ ಮಾಡಿದ ಮಹಾನ್ ಮಹಿಳೆಯರನ್ನು ಆದರ್ಶವಾಗಿ ಇಟ್ಟುಕೊಳ್ಳಬೇಕು ಎಂದು ಮಹಿಳೆಯರಿಗೆ ಕಿವಿಮಾತು ಹೇಳಿದರು.
ಉಡುಪಿಯಲ್ಲಿ ಹಿಂದಿನಿಂದಲೂ ಮಹಿಳೆಯರಿಗೆ ಎಲ್ಲಾ ಕ್ಷೇತ್ರಗಳಲ್ಲೂ ಪ್ರಾಧಾನ್ಯತೆ ನೀಡುತ್ತಾ ಬಂದಿದೆ. ಈಗಲೂ ಕೆಲವು ಭಾಗಗಳಲ್ಲಿ ಮಾತೃಪ್ರಧಾನ ಕುಟುಂಬ ವ್ಯವಸ್ಥೆಯನ್ನು ಕಾಣಬಹುದು ಹಾಗೂ ಅತಿ ಹೆಚ್ಚು ಮಹಿಳಾ ಮತದಾರರನ್ನು ಹೊಂದಿರುವ ಕರ್ನಾಟಕದ ಮೊದಲ ಜಿಲ್ಲೆ ಉಡುಪಿಯಾಗಿದೆ ಎಂದು ಹೆಮ್ಮೆಪಟ್ಟರು.
ಒಂದು ಕುಟುಂಬವನ್ನು, ಸಮಾಜವನ್ನು ಅಥವಾ ದೇಶವನ್ನು ಕಟ್ಟುವಂತ ನಿಟ್ಟಿನಲ್ಲಿ ಎಲ್ಲಾ ಮಹಿಳೆಯರು ಕೆಲಸ ಮಾಡಬೇಕು. ಪುರುಷರು ಕೂಡ ಇದಕ್ಕೆ ಪ್ರೋತ್ಸಾಹ ನೀಡಬೇಕು. ಸಮಾಜದ ಕಟ್ಟುಪಾಡು, ಆಚಾರ, ವಿಚಾರ, ನೀತಿ-ನಿಯಮಗಳನ್ನು ಅರ್ಥೈಸಿಕೊಂಡರೆ ಮಾತ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ದೇಶವನ್ನು ಮುನ್ನಡೆಗೆ ತರಬಹುದು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶೆ ಶರ್ಮಿಳಾ ಎಸ್ ಮಾತನಾಡಿ, ಪ್ರಸ್ತುತ ಕಾಲದಲ್ಲಿ ಮಹಿಳೆಯರು ಅಡುಗೆ ಮನೆಯಿಂದ ಹಿಡಿದು ಬಾಹ್ಯಾಕಾಶ ಲೋಕದವರೆಗೂ ಕಾರ್ಯಕ್ಷೇತ್ರವನ್ನು ಹೊಂದುವುದರೊಂದಿಗೆ, ಎಲ್ಲಾ ರಂಗ ಕ್ಷೇತ್ರಗಳಲ್ಲೂ ಮಹಿಳೆಯರು ಗುರುತಿಸಿಕೊಳ್ಳುತ್ತಿದ್ದಾರೆ ಎಂದರು.
ಮಹಿ ಎಂದರೆ ಭೂಮಿ ಇಳೆ ಎಂದರೆ ಭೂಮಿ ಒಟ್ಟಿನಲ್ಲಿ ಮಹಿಳೆ ಎಂದರೆ ಎರಡು ಭೂಮಿತೂಕದ ಶಕ್ತಿ ಮತ್ತು ಸಾಮರ್ಥ್ಯ ಹೊಂದಿರುವವಳು ಹೆಣ್ಣು ಎಂದರು. ಮೊದಲಿಗೆ ಮಹಿಳೆಯನ್ನು ನೋಡುವ ದೃಷ್ಟಿ ಬದಲಾಗಬೇಕು. ಈಗಲೂ ಮಹಿಳೆಯರ ಮೇಲೆ ಕೌಟುಂಬಿಕ ದೌರ್ಜನ್ಯ ಮತ್ತು ಫೋಕ್ಸೋಗಳಂತಹ ಪ್ರಕರಣಗಳು ಹೆಚ್ಚಾಗುತ್ತಿವೆ. ಆದ್ದರಿಂದ ಮಹಿಳೆಯರು ಸಂವಿಧಾನ ಅಡಿಯಲ್ಲಿ ನೀಡುವ ಕಾನೂನುಗಳನ್ನು ದುರುಪಯೋಗ ಪಡಿಸಿಕೊಳ್ಳದೆ ಹೆಚ್ಚು ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಜಿಲ್ಲಾ ಪಂಚಾಯತ್ನ ಯೋಜನಾ ನಿರ್ದೇಶಕ ನವೀನ್ ಕುಮಾರ್ ಹೆಚ್.ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಂಜೀವಿನಿ ಮತ್ತು ಸ್ವ- ಸಹಾಯ ಗುಂಪುಗಳಲ್ಲಿ ಸಾಧನೆಗೈದ ಮಹಿಳಾ ಒಕ್ಕೂಟಗಳಿಗೆ ಪ್ರಶಸ್ತಿ ಪತ್ರಗಳನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಕಿರಣ್ ಫಡ್ನೇಕರ್, ಮುಖ್ಯ ಲೆಕ್ಕಾಧಿಕಾರಿ ಪ್ರಸನ್ನ, ಶಿಶು ಅಭಿವೃದ್ದಿ ಯೋಜನಾಧಿಕಾರಿ ವೀಣಾ, ಬೈಂದೂರು ಉನ್ನತಿ ಸಂಜೀವಿನಿ ತಾಲೂಕು ಮಟ್ಟದ ಸುಶೀಲಾ, ಹೆಬ್ರಿ ಸಂಜೀವಿನಿ ಮಟ್ಟದ ಕಲಾವತಿ, ಸ್ವರ್ಣ ಸಂಜೀವಿನಿ ಮಟ್ಟದ ಜಿಲ್ಲಾಧ್ಯಕ್ಷೆ ಲತಾ ಅಶೋಕ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.