ಕಠಿಣ ಪರಿಶ್ರಮದ ವಿಭಿನ್ನ ಯೋಜನೆ ಯೋಚನೆ ಪರಿಕಲ್ಪನೆಯ ಸಾಧಕ ಕೃಷಿಕ ಅಂತರಾಷ್ಟ್ರೀಯ ಮಟ್ಟದ ಕೈಗಾರಿಕೋಧ್ಯಮಿಯಾಗಿರುವ ಮೂಡಬಿದರೆ ಎಸ್ ಕೆಎಫ್ ಸಮೂಹ ಸಂಸ್ಥೆ ಮತ್ತು ಮುನಿಯಾಲಿನ ಸಂಜೀವಿನಿ ಫಾರ್ಮ್ ದೇಶಿಯ ಗೋತಳಿಗಳ ಅಭಿವೃದ್ಧಿ ಕೇಂದ್ರದ ಸಂಸ್ಥಾಪಕ ಜಿ.ರಾಮಕೃಷ್ಣ ಆಚಾರ್ ಅವರ ಕೃಷಿ ಮತ್ತು ಸಮಾಜ ಸೇವೆಯನ್ನು ಪರಿಗಣಿಸಿ ಮಂಗಳೂರು ವಿಶ್ವವಿದ್ಯಾನಿಲಯವು ಪ್ರತಿಷ್ಠಿತ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಜಿ.ರಾಮಕೃಷ್ಣ ಆಚಾರ್ ಸ್ಥಾಪಿಸಿದ ಎಸ್ಕೆಎಫ್ ಉದ್ಯಮ ಸಮೂಹ ಸಂಸ್ಥೆಯು ಸಿರಿಧಾನ್ಯಗಳ ಸಂಸ್ಕರಣೆ, ಕುಡಿಯುವ ಸ್ವಚ್ಛ ನೀರಿನ ಪೂರೈಕೆ, ತ್ಯಾಜ್ಯ ನೀರಿನ ಸಂಸ್ಕರಣೆಯಂತಹ ಆವಿಷ್ಕಾರಗಳ ಮೂಲಕ ಎಸ್ಕೆಎಫ್ ಸಂಸ್ಥೆ ಸಂಶೋಧನೆ ಹಾಗೂ ಅಭಿವೃದ್ಧಿಯಲ್ಲಿ 40 ವರ್ಷಗಳಿಂದ ಮುಂಚೂಣಿಯಲ್ಲಿದೆ.
ಭಾರತದಲ್ಲಿ ಬೆಳೆ ಬೆಳೆಯುವುದು ಮತ್ತು ಕೊಯ್ಲು ವಿಧಾನದಲ್ಲಿ ಕಳೆದ 60 ವರ್ಷಗಳಲ್ಲಿ ಹಲವು ಬದಲಾವಣೆಗಳಾಗಿವೆ. ಸಾಂಪ್ರದಾಯಿಕ ಕೊಯ್ಲಿನಿಂದ ಯಾಂತ್ರೀಕೃತ ಕೊಯ್ಲಿಗೆ ಬಂದಾಗ ಇಲ್ಲಿನ ಧಾನ್ಯಗಳಲ್ಲಿ ಅಧಿಕ ತೇವಾಂಶವಿರುವುದರಿಂದ ಒಣಗಿಸುವ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಬೇಕಾಯಿತು. ಅಧಿಕ ತೇವಾಂಶ ಇರುವ ಕಾರಣ ಸಂಗ್ರಹ ಮತ್ತು ಸಂಸ್ಕರಣೆಗೆ ಸೂಕ್ತವಲ್ಲ, ಹಾಗಾಗಿ 2002ರಲ್ಲಿ 35 ಶೇಕಡಾ ಧಾನ್ಯ ನಮ್ಮ ದೇಶದಲ್ಲಿ ಹಾಳಾಗಿದೆ. ಇದಕ್ಕಾಗಿ ನಮ್ಮದೇ ಆದ ಭತ್ತದ ಹೊಟ್ಟನ್ನು ಬಳಸಿ ಹಾಟ್ ಏರ್ ತಂತ್ರಜ್ಞಾನ ಉಪಯೋಗಿಸಿಕೊಂಡು ಕನಿಷ್ಠವೆಚ್ಚದಲ್ಲಿ ಗರಿಷ್ಠ ಉತ್ಪಾದನೆ ಮಾಡುವ ವಿಧಾನ ಕಂಡುಕೊಂಡೆವು, ಇದಕ್ಕೆ ವಿಶ್ವದ ಮಾನ್ಯತೆ ಸಿಕ್ಕಿದೆ, ಇದರಿಂದ ದೇಶಕ್ಕೆ ದೊಡ್ಡ ಲಾಭವಾಗಿದೆ ಎಂದು ಜಿ.ರಾಮಕೃಷ್ಣ ಆಚಾರ್ ವಿವರಿಸಿದರು.
ಯಂತ್ರೋಪಕರಣಗಳ ಉತ್ಪಾದನೆ, ಮಾರುಕಟ್ಟೆ ಮತ್ತು ತಾಂತ್ರಿಕ ವಿನಿಮಯದಲ್ಲಿ ವಿಶ್ವದಲ್ಲಿ ಮುಂಚೂಣಿಯಲ್ಲಿರುವ ಎಸ್ಕೆಎಫ್ ಹೊಸ ತಲೆಮಾರಿನ ಆಹಾರ ಸಂಸ್ಕೃತಿಗೆ ಅನುಗುಣವಾಗಿ ಆಧುನಿಕ ತಂತ್ರಜ್ಞಾನಗಳ ಮೂಲಕ ಏಜ್ಡ್ ರೈಸ್ ಅನ್ನು ಅಭಿವೃದ್ಧಿ ಪಡಿಸಿದ್ದು, ಫಾಸ್ಟ್ ಫುಡ್ ಆಗಿರುವ ಫ್ರೈಡ್ ರೈಸ್, ಗೀರೈಸ್, ಕರ್ಡ್ ರೈಸ್ ನತ್ತ ಆಕರ್ಷಿಸುವಂತೆ ಮಾಡಿದೆ. 2000ನೇ ಇಸವಿಯಲ್ಲಿ ಸಂಪೂರ್ಣ ಸ್ಟೇನ್ಲೆಸ್ ಸ್ಟೀಲ್, ಅಟೊಮೇಶನ್ ಬಳಸಿ ಆಧುನಿಕ ತಂತ್ರಜ್ಞಾನದಿಂದ ಅಭಿವೃದ್ಧಿಪಡಿಸಿದ್ದು ವಿಶ್ವಮಾನ್ಯತೆ ಪಡೆದಿದೆ.
ನಮ್ಮಲ್ಲಿನ ಮೇಲ್ಮೈ ನೀರು, ನದಿ ನೀರು ಹಾಗೂ ಕೊಳವೆಬಾವಿ ನೀರು ಸಂಪೂರ್ಣ ಕಲುಷಿತವಾಗಿದೆ, ರೈತರು ಸಾವಿರಾರು ಟನ್ ರಸಗೊಬ್ಬರ ಕ್ರಿಮಿನಾಶಕ ಹಾಕುವುದು ಒಂದು ಕಾರಣವಾದರೆ ತ್ಯಾಜ್ಯ ನೀರು ನಿರ್ವಹಣೆ ಸರಿಯಾಗಿ ಮಾಡದಿರುವುದು ಇನ್ನೊಂದು ಕಾರಣ. ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಛಭಾರತ, ಪ್ಲಾಸ್ಟಿಕ್ ಮುಕ್ತ ಗ್ರೀನ್ ಇಂಡಿಯಾ ಪ್ರಚಾರಕ್ಕೆ ಬರುವ 5 ವರ್ಷಕ್ಕೂ ಮೊದಲೇ ಎಸ್ಕೆಎಫ್ ಎಲಿಕ್ಸೆರ್ ಇಂಡಿಯಾ ತನ್ನದೇ ಆದ ನೀರು ಪೂರೈಕೆಯನ್ನು ಶಾಲಾ ಕಾಲೇಜು, ಆಸ್ಪತ್ರೆ, ಹಾಸ್ಟೆಲ್, ಕಚೇರಿ, ಸಾರ್ವಜನಿಕ ಸ್ಥಳ, ಗ್ರಾಮಗಳಲ್ಲಿ ಮಾಡುತ್ತಿದೆ ಎಂದು ಎಸ್ಕೆಎಫ್ ಎಲಿಕ್ಸೆರ್ ಇಂಡಿಯಾದ ಆಡಳಿತ ನಿರ್ದೇಶಕ ರಾಮಕೃಷ್ಣ ಆಚಾರ್ ಸಮಗ್ರ ಮಾಹಿತಿ ನೀಡಿದರು.
ವಲ್ಕನ್ ವೇಸ್ಟ್ ವಾಟರ್ ಮ್ಯಾನೇಜ್ಮೆಂಟ್ ಎನ್ನುವುದು ನಮ್ಮ ಇನ್ನೊಂದು ಕೊಡುಗೆ, ಭಾರತದಲ್ಲಿ ಶಾಲಾ ಕಾಲೇಜು ಆಸ್ಪತ್ರೆ, ವಾಣಿಜ್ಯ ಸಂಕೀರ್ಣ, ವಸತಿ ಸಮುಚ್ಚಯಗಳು ತ್ಯಾಜ್ಯ ನಿರ್ವಹಣೆಯಲ್ಲಿ ವಿಫಲವಾಗಿವೆ. ಅದಕ್ಕಾಗಿ ಚರಂಡಿ ನೀರು ಸಂಸ್ಕರಣೆಯ ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಸಂಸ್ಕರಿತ ನೀರನ್ನು ತೋಟ, ಮರುಬಳಕೆಗೆ ಯೋಗ್ಯವಾಗಿಸುವ ವಿಧಾನ ವಿಶ್ವಮಾನ್ಯತೆ ಪಡೆದಿದೆ ತನ್ನ ಪರಿಕಲ್ಲಪನೆಯ ಬಗೆಗೆ ರಾಮಕೃಷ್ಣ ಆಚಾರ್ ಹೆಮ್ಮೆಯಿಂದ ಹೇಳುತ್ತಾರೆ.
2003ರಲ್ಲಿ ಎಸ್ಕೆಎಫ್ ಐಟಿಐ ಮೂಲಕ ಬೃಹತ್ ಕೈಗಾರಿಕೆಯ ಹಿನ್ನೆಲೆ ಇರಿಸಿಕೊಂಡು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಯಂತ್ರೊಪಕರಣಗಳನ್ನು ಒದಗಿಸುತ್ತಾ ಅಲ್ಲಿ ತಜ್ಞರನ್ನು ನೇಮಿಸುತ್ತಾ ಕಳೆದ 10 ವರ್ಷಗಳಲ್ಲಿ 3000ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ವಿವಿಧ ದೇಶಗಳ ಉದ್ಯಮಗಳಿಗೆ ನೇಮಕಮಾಡಿದ್ದೇವೆ. ಮೂಡಬಿದರೆಯ ಬನ್ನಡ್ಕ ಕುಗ್ರಾಮವಾಗಿದ್ದು, ನಮ್ಮ ಯಂತ್ರಗಳನ್ನು ಎಲ್ಲಿ ಒದಗಿಸಿದ್ದೇವೆಯೋ ಅಲ್ಲೆಲ್ಲಾ ಐಟಿಐ ವಿದ್ಯಾರ್ಥಿಗಳನ್ನು ಪರಿಣತಿಗೊಳಿಸಿ ಒದಗಿಸಿದ್ದೇವೆ, ಪ್ರಧಾನಿಮಂತ್ರಿಯವರ ಸ್ಕಿಲ್ ಇಂಡಿಯಾ ಪರಿಕಲ್ಪನೆಯನ್ನು ಕಳೆದ 10 ವರ್ಷಗಳಿಂದ ಮಾಡುತ್ತಾ ಬಂದಿದ್ದೇವೆ ಎಂದು ರಾಮಕೃಷ್ಣ ಆಚಾರ್ ವಿಶ್ಲೇಷಿಸಿದರು.
ಮೂಡಬಿದರೆ ಎಸ್ಕೆಎಫ್ ಸಮೂಹ ಸಂಸ್ಥೆಯ ಸಂಜೀವಿನಿ ಫಾರ್ಮ್ ದೇಶಿಯ ಗೋತಳಿಗಳ ಅಭಿವೃದ್ಧಿ ಕೇಂದ್ರ ಮುನಿಯಾಲು ಗೋಧಾಮವು ಮಣ್ಣಿನ ಫಲವತ್ತತೆಯನ್ನು ಕಾಪಾಡಲು ರಾಸಾಯನಿಕ ಮುಕ್ತ ನೆಲ ಮತ್ತು ಜಲವನ್ನು ಉಳಿಸಲು ದೇಶೀ ಹಸುಗಳ ವಿವಿಧ ತಳಿಗಳನ್ನು ಅಭಿವೃದ್ಧಿಪಡಿಸಿ ಗೋವಿನ ಹಾಲಿನಿಂದ ವಿವಿಧ ಉತ್ಪನ್ನಗಳಾದ ಮೊಸರು, ಮಜ್ಜಿಗೆ, ಬೆಣ್ಣೆ, ತುಪ್ಪ, ಪನಿರ್ ಅನ್ನು ತಯಾರಿಸುತ್ತಿದೆ. ಗೋವಿನ ಸೆಗಣಿ, ಗಂಜಲ ಬಳಸಿ ಜೀವಾಮೃತ ಸಾವಯವ ಗೊಬ್ಬರ, ಎರೆಹುಳ ಗೊಬ್ಬರವನ್ನು ಆಧುನಿಕ ತಂತ್ರಜ್ಞಾನ ಬಳಸಿ ಅಭಿವೃದ್ಧಿ ಪಡಿಸುತ್ತಿದೆ. ಗ್ರಾಮೀಣ ಪ್ರದೇಶದ ಯುವಕ ಯುವತಿಯರಿಗೆ ಗ್ರಾಮ ಸ್ವರಾಜ್ಯದ ಪರಿಕಲ್ಪನೆಯೊಂದಿಗೆ 30 ಎಕ್ರೆ ಪ್ರದೇಶದಲ್ಲಿ ಹೊಸ ಲೋಕವನ್ನು ಸೃಷ್ಟಿಸಿದೆ.
ಮೂಡಬಿದರೆ ಎಸ್ಕೆಎಫ್ ಗ್ರೂಪ್ ನಿಂದ ಕಾರ್ಪೊರೇಟ್ ಸಾಮಾಜಿಕ ಬದ್ಧತೆ-ಸಿಎಸ್ಆರ್ ಚಟುವಟಿಕೆಗಳ ಅನ್ವಯ ಪರಿಸರ ಅಭಿವೃದ್ಧಿ, ಮಾನವ ಸಂಪನ್ಮೂಲ ಅಭಿವೃದ್ಧಿ ತರಬೇತಿ, ಶೈಕ್ಷಣಿಕ ಹಾಗೂ ನಿರಂತರ ವೈದ್ಯಕೀಯ ಶಿಬಿರ ಆಯೋಜಿಸುತ್ತಾ ಬಂದಿದ್ದು, ಅದಕ್ಕಾಗಿ ಗಣನೀಯ ಪ್ರಮಾಣದ ಅನುದಾನ ತೆಗೆದಿರಿಸಿದ್ದೇವೆ. 1987ರ ಜೂನ್ 27ರಂದು ಬಾಡಿಗೆ ಶೆಡ್ನಲ್ಲಿ 25 ಸಾವಿರ ರೂ. ಬಂಡವಾಳದಿಂದ ವೃತ್ತಿಜೀವನವನ್ನು ಆರಂಭಿಸಿದ್ದ ರಾಮಕೃಷ್ಣ ಆಚಾರ್ ಅಂದು ಪ್ರಾರಂಭಿಸಿದ ಶ್ರೀ ಕಾಳಿಕಾಂಬಾ ಫ್ಯಾಬ್ರಿಕೇಷನ್ ಇಂದು 65 ಕೋಟಿ ರೂ.ಗೂ ಮಿಗಿಲಾಗಿದ್ದು ವಾರ್ಷಿಕ ವಹಿವಾಟು 150 ಕೋಟಿ ರೂ. ಮೀರಿದೆ. 80 ಕೋಟಿ ರೂ.ಗೂ ಮೀರಿ ರಫ್ತು ವ್ಯವಹಾರ ಮಾಡುತ್ತಿದ್ದು 2000 ಮಂದಿಗೆ ಉದ್ಯೋಗ ನೀಡಿರುವ ಹೆಮ್ಮೆ ಇದೆ. ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬಡತನದಿಂದ ಬೆಳೆದ ರಾಮಕೃಷ್ಣ ಆಚಾರ್ ಕಠಿಣ ಪರಿಶ್ರಮದ ಮೂಲಕ ಅಂತ ರಾಷ್ಟೀಯ ಮಟ್ಟದ ಉದ್ಯಮ ಸಮೂಹವನ್ನು ಸ್ಥಾಪಿಸಿ ಸಾವಿರಾರು ಮಂದಿಗೆ ಉದ್ಯೋಗ ನೀಡಿದ ಅನ್ನದಾತರಾಗಿ ಬಡವರ ಬಂಧುವಾಗಿದ್ದಾರೆ.
- ಸುಕುಮಾರ್ ಮುನಿಯಾಲ್.